ADVERTISEMENT

‘ನಾನು ಯಾರು?’ಎಂಬ ಅನ್ವೇಷಣೆ

ರಮ್ಯಾ ಶ್ರೀಹರಿ
Published 13 ಸೆಪ್ಟೆಂಬರ್ 2019, 19:30 IST
Last Updated 13 ಸೆಪ್ಟೆಂಬರ್ 2019, 19:30 IST
Rodin.jpg
Rodin.jpg   

'ನಾನು ಯಾರು' ಎಂಬ ಪ್ರಶ್ನೆ ಯಾವುದಾದರೂ ‘ನ್ಯೂ ಏಜ್‌’ – ನಮ್ಮ ಆಧುನಿಕ – ಅಧ್ಯಾತ್ಮ ಪ್ರವಚನಗಳಲ್ಲಿ ಕೇಳುವಂಥದ್ದೋ ಅಥವಾ ಯಾವುದೋ ಹಳೆಯ, ತಲೆಬುಡವಿಲ್ಲದೆ, ಸಂಭಾಷಣೆಗಳೂ ಹೆಚ್ಚಿಲ್ಲದೆ ಬೋರು ಹೊಡೆಸಿದ ಸುದೀರ್ಘ ಸಿನೆಮಾದ ಕೊನೆಗೆ ನಾಯಕನೋ ನಾಯಕಿಯೋ ಕೇಳಿಕೊಳ್ಳುವಂತಹದ್ದು ಎನಿಸುವುದೇ? ಹಾಗೆ ನೋಡಿದರೆ ‘ಸೆಲ್ಫಿ’ ಸಂಸ್ಕೃತಿಯಲ್ಲೇ ಬಾಳುತ್ತಿರುವ ನಮಗೆ ಈ ಪ್ರಶ್ನೆ ಒಮ್ಮೊಮ್ಮೆ ಫ್ಯಾಷನಬಲ್ ಆಗಿಯೂ, ಒಮ್ಮೊಮ್ಮೆ ಕ್ಲೀಷೆಯಾಗಿಯೂ ಕಂಡರೆ ಆಶ್ಚರ್ಯ ಪಡಬೇಕಾದ್ದೇನಿಲ್ಲ.

'ನಾನು ಯಾರು?' ಎಂಬ ಪ್ರಶ್ನೆ ನಿಮಗೆಂದಾದರೂ ಎದುರಾದದ್ದಿದೆಯೇ? ಯಾವ ಸಂದರ್ಭದಲ್ಲಿ ಮತ್ತು ಆ ಪ್ರಶ್ನೆಯನ್ನು ನೀವು ಹೇಗೆ ನಿಭಾಯಿಸಿದಿರಿ? ಇಂದು ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚಿನ ಅರಿವು ಮೂಡುತ್ತಿರುವ ಹೊತ್ತಲ್ಲಿ ‘ಸೆಲ್ಫ್‌–ಲವ್‌’, ‘ಸೆಲ್ಫ್‌-ಕಾನ್ಸೆಪ್ಟ್‌’, ‘ಸೆಲ್ಫ್‌–ರಿಯಲೈಸೇಷನ್‌’, ‘ಸೆಲ್ಫ್‌– ಅವೇರ್‌ನೆಸ್‌’ – ಇಂತಹ ಪದಗಳು ಬಹು ಮಾನ್ಯತೆಯನ್ನು ಗಳಿಸುತ್ತಿವೆ. ಹಾಗಾದರೆ ಈ ‘ಲವ್‌’, ‘ಕಾನ್ಸೆಪ್ಟ್‌’, ‘ರಿಯಲೈಸೇಷನ್‌’, ‘ಅವೇರ್‌ನೆಸ್‌’ – ಇನ್ನೂ ಮುಂತಾದ ಅನೇಕ ಗುಣ, ಕ್ರಿಯೆ, ಅನುಭವಗಳಿಗೆ ಒಳಗಾಗುವ, ಒಳಗೊಳ್ಳುವ ಈ 'ಸೆಲ್ಫ್‌' ಯಾವುದು? ‘ನಾನು ಯಾರು' ಎಂಬ ಪ್ರಶ್ನೆಯೇ ತಪ್ಪಿರಬಹುದು ಅಥವಾ ಮೂರ್ಖತನದ್ದೂ ಆಗಿರಬಹುದು ಆದರೆ 'ನಾನು' ಎಂಬ ಅನುಭವ ನಿಜವಲ್ಲವೇ? ಹಾಗಾದರೆ ಈ 'ನಾನು' ಎಂಬ ಅನುಭವ ಯಾವ ರೀತಿಯದು ಮತ್ತು ಅದು ಹೇಗೆ ನಮಗೆ ಮುಖ್ಯವಾಗುತ್ತದೆ? ಆತ್ಮಾವಲೋಕನ, ಆತ್ಮಶೋಧನೆ ಮುಂತಾದ್ದೆಲ್ಲವೂ ಬರೀ ಬೌದ್ಧಿಕ ಕಸರತ್ತಾಗದೆ, ತಾತ್ವಿಕ ಜಿಜ್ಞಾಸೆಯಾಗದೆ ನಮ್ಮ ದಿನನಿತ್ಯದ ಬಾಹ್ಯ ಮತ್ತು ಆಂತರಿಕ ಬದುಕನ್ನು ಹೇಗೆ ಚೆಂದಗೊಳಿಸಬಹುದು ಎಂಬ ಪ್ರಶ್ನೆ ಉಚಿತವಾದದ್ದೇ.

ಪೌರ್ವಾತ್ಯಸಮಾಜ ಎಂದೂ ವ್ಯಕ್ತಿ ಕೇಂದ್ರಿತವಲ್ಲದೆ ಸಮಷ್ಟಿ ಕೇಂದ್ರಿತವಾಗಿಯೇ ಇದ್ದರೂ ಇಲ್ಲಿ 'ನಾನು ಯಾರು?’ ಎಂಬ ಪ್ರಶ್ನೆ ಬಹಳ ಮಹತ್ವದ್ದೇ ಆಗಿತ್ತು. ಬೌದ್ಧ, ಜೈನರಾದಿಯಾಗಿ ವೇದಾಂತದವರೆಗೂ ಭಾರತೀಯ ದರ್ಶನಗಳೆಲ್ಲವೂ ಕೊನೆಗೆ ಆತ್ಮಜ್ಞಾನವನ್ನೇ ಗುರಿಯಾಗಿ ಹೊಂದಿವೆ. ಬದುಕಿನ ಪುರುಷಾರ್ಥವೇ ಈ ಜ್ಞಾನವನ್ನು ಹೊಂದುವುದು ಎಂಬಷ್ಟರ ಮಟ್ಟಿಗೆ ಪ್ರಾಮುಖ್ಯವನ್ನು ಹೊಂದಿರುವ 'ನಾನು ಯಾರು?' ಎಂಬ ಈ ಪ್ರಶ್ನೆ ಬರೀ ಆಮೂರ್ತ ಮೀಮಾಂಸೆಗಷ್ಟೇ ಸೀಮಿತವಾಗಿರದೆ, ವಿಶ್ವದ ಶ್ರೇಷ್ಠ ಕಲೆ, ಸಾಹಿತ್ಯದ ಮೂಲಕ ವಿವಿಧ ರೂಪಗಳಲ್ಲಿ ಬದುಕಿನ ಬೆಚ್ಚಗಿನ ಆಪ್ತಲೋಕಕ್ಕೆ ಕಾಲಿರಿಸಿರುವುದೂ ನಿಜವೇ. ಇಂದು ಜಗತ್ತಿನೆಲ್ಲೆಡೆ ಪ್ರಚಲಿತವಾಗುತ್ತಾ ಭಾರತಕ್ಕೂ ನಿಧಾನವಾಗಿಯಾದರೂ ಆಗಮಿಸುತ್ತಿರುವ ಮನೋಚಿಕಿತ್ಸೆಯೂ 'ನಾನು ಯಾರು?' ಎಂಬ ಅನ್ವೇಷಣೆ ಬಹು ಮೌಲಿಕವೂ, ಬದುಕನ್ನು ಬದಲಾಯಿಸುವಂತದ್ದೂ, ಅನೇಕ ದುಃಖಗಳಿಗೆ ಸಾಂತ್ವಾನವೂ ಆಗಬಹುದೆಂಬ ನಂಬಿಕೆಯನ್ನು ಹೊತ್ತಿದೆ. ಜಾಗತಿಕವಾಗಿ ನಡೆಯುತ್ತಿರುವ ಎಲ್ಲ ಅನ್ಯಾಯ, ದ್ವೇಷ, ದಬ್ಬಾಳಿಕೆಯ ಮೂಲವೆಲ್ಲವೂ 'ನಾನು ಇಂಥವನು, ಈ ದೇಶದ, ಈ ಜಾತಿಯ, ಈ ಉದ್ಯೋಗದ, ಈ ಅಂತಸ್ತಿನ ಇಂತಿಂಥವರು' ಎಂಬ ನಮ್ಮನ್ನು ನಾವೇ ಒಂದು ಪಂಗಡಕ್ಕೆ ಸೇರಿಸಿಕೊಳ್ಳುವ ಆತುರದಲ್ಲಿರುವ ಸಮಯದಲ್ಲಿ 'ನಾನು ಯಾರು?' ಎಂಬ ಹುಡುಕಾಟ ಈ ಎಲ್ಲ ಹೊರಕಟ್ಟುಗಳನ್ನು ಬಿಚ್ಚಿ, ನಿಜಕ್ಕೂ ಈ ಎಲ್ಲ ಹಣೆಪಟ್ಟಿಗೂ ನನಗೂ ಸಂಬಂಧವಿದೆಯೇ ಎನ್ನುವ ಪ್ರಶ್ನೆಗೆ ನಮ್ಮನ್ನು ಮುಖಾಮುಖಿಯಾಗಿಸುತ್ತದೆ.

ADVERTISEMENT

ಈ ಎಲ್ಲದರ ಹಿನ್ನೆಲೆಯೊಂದಿಗೆ 'ನಾನು ಯಾರು?' ಎಂಬ ಪ್ರಶ್ನೆಗೆ ಉತ್ತರ ಯಾವ ಬಗೆಯದ್ದಾಗಿರಬಹುದು? ಈ ಪ್ರಶ್ನೆಗೆ ಉತ್ತರವು ಪೂರ್ವನಿಗದಿತವೂ ನಿರ್ದಿಷ್ಟವೂ ಏಕಾಶಿಲಾರೂಪದ್ದು ಖಂಡಿತ ಅಲ್ಲವೆನ್ನುವುದು ಸ್ಪಷ್ಟ.

'ನಾನು' ಎಂಬುದು ಬದುಕಿಗೆ ಒಂದು ಧೃಢವಾದ ಅಡಿಪಾಯದಂತಹುದ್ದಾಗಿರದೆ, ಅನೇಕ ಪದರಗಳುಳ್ಳ ಬದುಕಿನಷ್ಟೇ ಚಲನಶೀಲವೂ ಸಾವಯವವೂ ಕ್ರಿಯಾತ್ಮಕವೂ ಆದಂತದ್ದು. ಇಲ್ಲಿ ಗಮನಿಸಬೇಕಾದ್ದು 'ನಾನು ಯಾರು?’ ಎಂಬ ಪ್ರಶ್ನೆಗೆ ಉತ್ತರ ಸುಮ್ಮನೆ ಒಂದು ಕಡೆ ಕೂತು ಧ್ಯಾನ ಮಾಡುವುದರಿಂದ ಸಿಗುವಂತದ್ದಲ್ಲ. ವ್ಯಕ್ತಿಸ್ವಾತಂತ್ರ್ಯ ಮತ್ತು ಮಾನವ ಸಂಬಂಧಗಳೊಟ್ಟಿಗಿನ ಆತ್ಮೀಯತೆ ಇವೆರಡರ ನಡುವಿನ ಸಂಘರ್ಷದಲ್ಲೇ ಸ್ವ-ನಂಬಿಕೆಗಳು ಅಳಿದು, ಉಳಿದು, ಹೊಸದಾಗಿ ಚಿಗುರುವಂತದ್ದು. ನಾವು ಈ ಸ್ವ-ನಂಬಿಕೆಗಳ ಮೂಲಕವಷ್ಟೇ ಬದುಕನ್ನು ನೋಡುತ್ತೇವಾದ್ದರಿಂದ, ಬದುಕಿನೊಂದಿಗಿನ ತಾದಾತ್ಮ್ಯವಷ್ಟೇ ಎಲ್ಲ ಪ್ರಶ್ನೆಗಳಿಗೂ ಉತ್ತರವಾಗಬಲ್ಲುದು. ಕೊನೆಗೆ 'ನಾನು ಯಾರು?' ಎಂಬ ಪ್ರಶ್ನೆಯನ್ನು ಎಳೆ ಎಳೆಯಾಗಿ ಬಿಡಿಸುತ್ತಾ ಹೋದಂತೆ ಇನ್ನೂ ಬಿಡಿಸುತ್ತಲೇ ಇರಬೇಕಷ್ಟೇ, ಬಿಡಿಸಿ ಏನೋ ಗಟ್ಟಿಯಾದ್ದು ಹಿಡಿದುಕೊಂಡು ಬಿಡುವೆ ಎಂಬ ಆಸೆಯನ್ನು ತೊರೆಯಬೇಕಷ್ಟೇ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.