ADVERTISEMENT

ನವರಾತ್ರಿ: ಸಂಸ್ಕೃತಿಯ ಬೆಳಕು

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 23:54 IST
Last Updated 30 ಸೆಪ್ಟೆಂಬರ್ 2025, 23:54 IST
   

ದುರ್ಗಾಪೂಜೆಯನ್ನಾಗಲೀ ಯಾರು ಬೇಕಾದರೂ ಆಚರಿಸಬಹುದು ಎನ್ನುವುದನ್ನು ಪುರಾಣಗಳೇ ಸಾರಿವೆ. ಮಹಾಕಾಳೀ, ಮಹಾಲಕ್ಷ್ಮೀ ಮತ್ತು ಮಹಾಸರಸ್ವತೀ ಎನ್ನುವ ಮೂರು ರೂಪಗಳಲ್ಲಿ ಆರಾಧಿಸಲ್ಪಡುವ ದೇವಿಯು ತ್ರಿಗುಣಗಳ ಸಮನ್ವಯದ ಪ್ರತೀಕವಾಗಿ ನಿಲ್ಲುತ್ತಾಳೆ. ಆಕೆಯ ಪೂಜಾವಿಧಿಯಲ್ಲಿಯೂ ಮೂರು ವಿಧಗಳಿವೆ; ಸಾತ್ವಿಕ, ರಾಜಸ ಮತ್ತು ತಾಮಸಿಕ. ಪರಂಪರೆ ಎಲ್ಲ ಪ್ರಕಾರದ ಭಕ್ತಿಗಳಿಗೂ ಆಶ್ರಯವನ್ನು ನೀಡಿದೆ.

ನವರಾತ್ರಿಯಲ್ಲಿ ಮಹಾನವಮಿಗೆ ಬಹಳ ಮಾನ್ಯತೆಯಿದೆ. ಅಂದು ವಿಶೇಷವಾಗಿ ಸಾಧಕನು ಹೆಣ್ಣುಮಕ್ಕಳನ್ನು ಪೂಜಿಸಿದರೆ ದೇವಿಯು ಉಳಿದೆಲ್ಲ ಬಗೆಯ ಪೂಜೆಗಳಿಗಿಂತಲೂ ಸಂತುಷ್ಟಳಾಗುತ್ತಾಳೆ ಎನ್ನುತ್ತದೆ, ಕಾಳಿಕಾಪುರಾಣ. ಈ ಹಬ್ಬ ಶಕ್ತಿಸ್ವರೂಪಿಣಿಯರಾದ ಸ್ತ್ರೀಯರದೇ ಪರ್ವ.

ಭಾರತದಲ್ಲಿ ಕ್ಷಾತ್ರಪರಂಪರೆಯನ್ನು ಜಾಗೃತವಾಗಿಡುವುದರಲ್ಲಿ ನವರಾತ್ರಿಯ ಪಾತ್ರ ಬಹಳ ಮಹತ್ತ್ವದ್ದಾಗಿದೆ. ಶರದೃತುವಿನಲ್ಲಿ ರಾಜರೆಲ್ಲ ಶಕ್ತಿಯನ್ನು ಆರಾಧಿಸಿ ಆನಂತರ ವಿಜಯಯಾತ್ರೆಗೆ ಹೊರಡುತ್ತಿದ್ದರಂತೆ. ಮುಂದೆ ಘಟಿಸಲಿಕ್ಕಿರುವ ಯುದ್ಧದಲ್ಲಿ ತಮಗೆ ಸಹಾಯವಾಗಿ ಒದಗಿಬರಲಿರುವ ಆಯುಧಗಳನ್ನು ಅವರು ಪೋಜಿಸುತ್ತಿದ್ದುದು ಒಂದು ಸಂಪ್ರದಾಯ. ಸದ್ಯ ನಮ್ಮ ಕರ್ನಾಟಕದ ಮೈಸೂರಿನ ಒಡೆಯರು ಈ ಪರಂಪರೆಯನ್ನು ಇನ್ನೂ ಜೀವಂತವಾಗಿಟ್ಟುಕೊಂಡು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಇಷ್ಟಕ್ಕೂ ಆಯುಧವೆಂದರೇನು? ಯಾವ ಸಲಕರಣೆಯು ನಮಗೆ ಜೀವನವನ್ನು ಕೊಡುತ್ತದೆಯೋ ಅದಷ್ಟೇ? ಹೀಗಿರುವಾಗ ರೈತನೊಬ್ಬನಿಗೆ ಆತನ ನೇಗಿಲು–ಗುದ್ದಲಿಗಳೂ, ಒಬ್ಬ ಬರಹಗಾರನಿಗೆ ಅವನ ಹರಿತವಾದ ಲೇಖನಿಯೂ ಆಯುಧಗಳೇ ಆಗುತ್ತವೆ. ಹಾಗಾಗಿ ಅವರು ಆಯಾ ಉಪಕರಣಗಳನ್ನೇ ಪೂಜಿಸಿ ಅವುಗಳಿಗೆ ಋಣವನ್ನು ಸಲ್ಲಿಸುತ್ತಾರೆ. 

ADVERTISEMENT

ವಿಜಯದಶಮಿ:
‘ವಿಜಯದಶಮಿ’ ಎನ್ನುವುದು ದುರ್ಗೆಯು ಮಹಿಷಾಸುರನ ಮೇಲೆ ಸಾಧಿಸಿದ ವಿಜಯದ ಪ್ರತೀಕ. ಶರದೃತುವು ದಿಗ್ವಿಜಯದ ಋತು. ಅಶ್ವಯುವಮಾಸದ ಹತ್ತನೇ ತಿಥಿಯಂದು ‘ವಿಜಯ’ ಎಂಬ ಹೆಸರಿನ ತಿಥಿಯಂದು ಯುದ್ಧಕ್ಕೆ ಹೊರಟರೆ ಜಯವು ಶತಸ್ಸಿದ್ಧ ಎನ್ನುವ ನಂಬಿಕೆ ರಾಜರಲ್ಲಿತ್ತು.

ವಿಜಯದಶಮಿಯ ದಿನದ ಮುಖ್ಯ ಆಚರಣೆಗಳು ಅಪರಾಜಿತಾದೇವಿಯ ಪೂಜೆ, ಶಮೀವೃಕ್ಷದ (ಬನ್ನಿಮರ) ಪೂಜೆ ಮತ್ತು ಸೀಮೋಲ್ಲಂಘನ ಎಂಬ ಮೂರು ಕ್ರಿಯೆಗಳ ಗುಚ್ಛವಾಗಿದೆ. ಬನ್ನಿಮರವು ನಮಗೆ ತಿಳಿದೇ ಇರುವಂತೆ ‘ವಹ್ನಿ’ ಅರ್ಥಾತ್, ಅಗ್ನಿಯ ಸಂಕೇತ; ಇದು ಕ್ಷಾತ್ರವನ್ನೇ ಸೂಚಿಸುತ್ತಿದೆ. ರಾಜರಾದವರು ವಿಜಯದಶಮಿಯಂದು ಶಮೀವೃಕ್ಷವನ್ನು ಅರ್ಚಿಸಿ ಅನಂತರ ಮಾನುಷ ಪ್ರತಿಕೃತಿಯೊಂದನ್ನು ನಿರ್ಮಿಸಿ, ಅದರಲ್ಲಿ ತಮ್ಮ ವೈರಿಯನ್ನು ಕಲ್ಪಿಸಿಕೊಂಡು ಬಾಣ ಮತ್ತು ಭರ್ಚಿಯಿಂದ ಅದನ್ನು ಘಾತಿಸಬೇಕು. ಇಂದಿಗೂ ರಾಜಮನೆತನಗಳು (ವಿಶೇಷವಾಗಿ ಮೈಸೂರಿನ ಒಡೆಯರು ಇದೇ ಹೊತ್ತಿನಲ್ಲಿ ಆಯುಧಪೂಜೆಯನ್ನು ಸಹ ಶಮೀವೃಕ್ಷದಡಿಯಲ್ಲಿ ಕೈಗೊಳ್ಳುತ್ತಾರೆ.)

ಶಮೀವೃಕ್ಷವು ಸಿಗುವುದು ಕಷ್ಟ; ವಿರಳವಾದ ಪ್ರಜಾತಿಯದು. ಅದನ್ನು ಬೆಳೆಸುವುದು ಮತ್ತೂ ಕಷ್ಟ. ಪ್ರಾಯಶಃ ಹಾಗಾಗಿಯೇ ಮಹಾರಾಷ್ಟ್ರ ಮತ್ತು ಕೊಂಕಣ ಭಾಗಗಳಲ್ಲಿ ‘ಆಪ್ಟಾ’ ಎಂಬ ಮರದ ಕೊಂಬೆಗಳನ್ನು ಕಡಿದು ತಂದು ಅದನ್ನು ಪೊದೆಯ ಆಕಾರದಲ್ಲಿ ಜೋಡಿಸಿ ಆನಂತರ ಅದರ ಪತ್ರೆಗಳನ್ನು ಹಂಚುವ ಕ್ರಮವಿದೆ. ಆನಂತರದ್ದು ಸೀಮೋಲ್ಲಂಘನ. ಹಿಂದಿನ ಕಾಲದಲ್ಲಿ ರಾಜರು ತಮ್ಮ ರಾಜ್ಯದ ಗಡಿಯನ್ನು ದಾಟಿ ಯುದ್ಧಕ್ಕೆ ಹೋಗುತ್ತಿದ್ದಿರಬಹುದು. ಆದರೆ ಈ ಹೊತ್ತು ಸೀಮೋಲ್ಲಂಘನದ ಸಂಕೇತವಾಗಿಯಷ್ಟೇ ಊರಿನ ಗಡಿಯನ್ನು ದಾಟಿ ಮರಳುವ ಪದ್ಧತಿಯಿದೆ.

ಈ ಹೊತ್ತು ರಾಜಮನೆತನಗಳಿಲ್ಲದಿರಬಹುದು; ಆದರೆ ವಿಜಯದಶಮಿಯಿದೆ. ಈ ನೆಲದ ಪ್ರತಿಯೊಬ್ಬ ಶ್ರೀಸಾಮಾನ್ಯನೂ ತನ್ನದೇ ಆದ ರೀತಿಯಲ್ಲಿ ಅಂದಿಗೆ ಉಕ್ತವಾಗಿರುವ ಪೂಜಾಪದ್ಧತಿಗಳನ್ನು ಆಚರಿಸುತ್ತಾನೆ. ಸ್ವಾತಂತ್ರ್ಯಸಂಗ್ರಾಮದ ಕಾಲದಲ್ಲಿಯಂತೂ ‘ದುರ್ಗಾಪೂಜಾ’ ಎನ್ನುವುದು ಜನರಲ್ಲಿ ವಿದೇಶಿಗರ ದಬ್ಬಾಳಿಕೆಯ ವಿರುದ್ಧ ಸಿಡಿದೇಳಲು ಪ್ರೇರೆಪಿಸುವ ಮಾಧ್ಯಮವಾಗಿ ರೂಪುಗೊಂಡಿತ್ತು. ಸ್ವದೇಶೀ ಚಳವಳಿಯ ಹೊತ್ತಿನಲ್ಲಿ ಬಂಗಾಳದ ಜನರು ರಾಷ್ಟ್ರವಾದದ, ಸ್ವಾತಂತ್ರ್ಯದ, ಜನರನ್ನು ಒಗ್ಗೂಡಿಸುವ ಸಂದೇಶಗಳನ್ನು ಹರಡಲು ಕ್ಷಾತ್ರದ ಹಬ್ಬವಾದ ದುರ್ಗಾಪೂಜೆಗಿಂತ ಬಲವಾದ ಸಾಧನವಿಲ್ಲ ಎಂದೇ ನಂಬಿದ್ದರು. ಪುಲಿನ್ ದಾಸ್ ಎಂಬ ಕ್ರಾಂತಿಕಾರಿಗಳು ಮಹಾಷ್ಟಮಿಯಂದು ‘ಬೀರಾಷ್ಟಮಿ’ (ವೀರರ ಅಷ್ಟಮಿ) ಎಂಬ ಉತ್ಸವವನ್ನು ಹೊಸದಾಗಿ ಜಾರಿಗೆ ತಂದು, ಅದರಲ್ಲಿ ಯುದ್ಧಕಲೆಗಳ ಪ್ರದರ್ಶನವನ್ನು ಮಾಡಿಸಿದ್ದರು. ಸುಭಾಷ್ ಚಂದ್ರ ಬೋಸರಂಥ ಕಟ್ಟಾಳುಗಳಿಂದ ಈ ಅಭಿಯಾನವು ಬಂಗಾಲದಿಂದ ಅಂಡಮಾನಿನವರೆಗೂ ಹಬ್ಬಿತ್ತು; ಎಲ್ಲ ವರ್ಣ-ಜಾತಿ-ಪಂಥಗಳಾಚೆಯೂ ಭಾರತೀಯರು ಸಾಂಸ್ಕೃತಿಕವಾಗಿ ಒಂದೇ ಆಗಿದ್ದಾರೆ ಎಂಬುದಕ್ಕೆ ಇದು ಪುರಾವೆ. 

ಒಂದಷ್ಟು ಉತ್ತರ ಸಿಗದ ಪ್ರಶ್ನೆಗಳು, ಒಂದಷ್ಟು ಬೆರಗು, ಒಂದಷ್ಟು ಪುರಾಣಕಥೆಗಳು, ಮತ್ತೊಂದಷ್ಟು ಆಚರಣೆಗಳೂ ಇಲ್ಲದಿದ್ದರೆ ಭಾರತೀಯ ಜೀವನವು ಎಷ್ಟು ರಸಹೀನವಾಗಿಬಿಡುತ್ತಿತ್ತು ಎಂದೆನ್ನಿಸುವುದು ಸುಳ್ಳಲ್ಲ. ನಿಜಕ್ಕೂ ಭಾರತೀಯರ ಜೀವಪ್ರೇಮ, ಜೀವನಪ್ರೇಮ ಮತ್ತು ಮಹತ್ತಾದದ್ದನ್ನು ಅರಿತುಕೊಳ್ಳುವತ್ತಣ ಜ್ಞಾನಪ್ರೇಮ – ಈ ಮೂರೂ ಈ ನಾಗರಿಕತೆಯ ಜೀವನಾಡಿಗಳಾಗಿ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಪ್ರವಹಿಸುತ್ತ ಈ ರಾಷ್ಟ್ರವನ್ನು ಲವಲವಿಕೆಯಿಂದ ತುಂಬಿ ಜೀವಂತವಾಗಿಟ್ಟಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.