ADVERTISEMENT

ತತ್ತ್ವಶಾಸ್ತ್ರ: ಮಾನವೀಯ ಬೌದ್ಧಿಕ ಸಂಸ್ಕಾರ

ರಮ್ಯಾ ಶ್ರೀಹರಿ
Published 26 ಫೆಬ್ರುವರಿ 2020, 19:30 IST
Last Updated 26 ಫೆಬ್ರುವರಿ 2020, 19:30 IST
   
""

ತ ತ್ತ್ವಶಾಸ್ತ್ರ ಎಂದರೆ ಯಾವುದೇ ವಸ್ತು, ವಿಷಯ, ಅನುಭವ – ಇವುಗಳ ಹಿಂದಿರುವ ಮೂಲತತ್ವಗಳನ್ನು ಅರಸುವ, ಪರಾಮರ್ಶಿಸುವ, ಪುನರ್ವಿಮರ್ಶಿಸುವ ಪ್ರಕ್ರಿಯೆ. ಒಂದು ಪರಿಕಲ್ಪನೆ ಮತ್ತೊಂದಕ್ಕೆ ಜೊತೆಯಾಗಿ ಪರಿಕಲ್ಪನೆಗಳ ಒಂದು ಸಂರಚನೆ ಸೃಷ್ಟಿಯಾದಾಗ, ಆ ಸಂರಚನೆಯ ತಾತ್ವಿಕ ನೆಲೆಗಟ್ಟನ್ನು ವಿಶ್ಲೇಷಿಸುವ ಕ್ರಮ. ಆಲೋಚಿಸುವ, ನೋಡುವ, ಗ್ರಹಿಸುವ ಕ್ರಮವನ್ನೇ ಮತ್ತೆ ಮತ್ತೆ ವಿಮರ್ಶೆಗೊಳಪಡಿಸುವುದರಿಂದಲೇ ತತ್ತ್ವಶಾಸ್ತ್ರವನ್ನು ಭಾರತದಲ್ಲಿ ’ದರ್ಶನ’ ಎಂದೂ ಕರೆದರು. ಆಲೋಚನೆಗೆ ಅನುಭವವೂ ಸಂವೇದನೆಯೂ ಅವಿನಾಭಾವವಾಗಿ ಒದಗುತ್ತದೆ ಎಂಬರ್ಥದಲ್ಲಿ.

ತತ್ತ್ವಶಾಸ್ತ್ರ ಎಂದರೆ ಆಲೋಚಿಸುವುದರ ಕುರಿತು ಆಲೋಚಿಸುವುದು, ಸಿದ್ಧಾಂತಗಳ, ಜ್ಞಾನಮಾರ್ಗಗಳ ಕುರಿತು ಆಲೋಚಿಸುವುದು. ತತ್ತ್ವಾನ್ವೇಷಣೆಗೆ ಇತರ ಜ್ಞಾನಶಾಖೆಗಳಿಂದ ತನ್ನ ಮೂಲದ್ರವ್ಯವನ್ನು ಸಂಪಾದಿಸುತ್ತದೆಯಾದ್ದರಿಂದಲೇ ತತ್ತ್ವಶಾಸ್ತ್ರವನ್ನು ‘ಸೆಕೆಂಡ್‌ ಆರ್ಡರ್‌ ಥಿಂಕಿಂಗ್‌’ ಎನ್ನುತ್ತಾರೆ.

ತತ್ತ್ವಶಾಸ್ತ್ರ 'ಆರ್ಥಿಕವಾಗಿ ಅನುತ್ಪಾದಕ'ವಷ್ಟೇ ಅಲ್ಲ, ಸಾಹಿತ್ಯ, ಕಲೆಗಳಂತೆ ಅದು ಮನೋರಂಜನೆಗೂ ಒದಗುವುದಿಲ್ಲ; ಅಂದಮೇಲೆ ತತ್ವಶಾಸ್ತ್ರವೆಂಬ ಈ ಹುಚ್ಚುಕುದುರೆಯ ಬೆನ್ನು ಹತ್ತಿ ನಾವೇಕೆ ಪ್ರಪಂಚವೆಲ್ಲ ಸುತ್ತಿ ಆಯಾಸಪಡಬೇಕು ಎಂದಿರೋ? ಮನುಷ್ಯರಾದ ನಮಗೆ ಮೂಲಭೂತವಾದ ಶೋಧನೆ, ಯಾಚನೆ, ಯಾತನೆಗಳಿವೆ. ನಮ್ಮ ಅಸ್ತಿತ್ವದ, ಅರಿವಿನ, ಮೌಲ್ಯಗಳ ಕುರಿತಾದ ಸಹಜವಾದ ಪ್ರಶ್ನೆಗಳಿವೆ; ಉತ್ತರಗಳನ್ನು ಹುಡುಕುವ ಉತ್ಕಟ ತುಡಿತವಿದೆ. ಇದನ್ನು ಯಾರೂ ನಮಗೆ ಹೇಳಿಕೊಡಬೇಕಾಗಿಲ್ಲ. ಉದಾ: ಕನಸಿಗೂ ವಾಸ್ತವಕ್ಕೂ ನಡುವಿನ ವ್ಯತ್ಯಾಸವನ್ನು ನಾವು ವಿಜ್ಞಾನದ ಮೂಲಕ ತಿಳಿದು ತೃಪ್ತಿ ಹೊಂದಲಾರೆವು, ಕಾವ್ಯದಲ್ಲಿ ಸೆರೆಹಿಡಿದೂ ಸುಮ್ಮನಾಗಲಾರೆವು. ಕಾಲ, ದೇಶ, ಭಾಷೆ ಎಂಬ ಬೆರಗು ನಮ್ಮಲ್ಲಿ ಸಾಗರದ ಅಲೆಗಳಂತೆ ಪ್ರಶ್ನೆಗಳನ್ನು ಸೃಷ್ಟಿಸುತ್ತವೆ. ಇವೆಲ್ಲವನ್ನು ಒಂದು ಪಾರಮಾರ್ಥಿಕ ನೆಲೆಯಲ್ಲಿ ಅರಿಯುವ ಬಯಕೆಯೊಂದಿದೆ. ಆ ಬಯಕೆಯೇ ನಮ್ಮನ್ನು philosophize – ತಾತ್ತ್ವಿಕ ಚಿಂತನೆ – ಮಾಡುವಂತೆ ಪ್ರೇರೇಪಿಸುತ್ತದೆ.

ADVERTISEMENT

ತತ್ವಶಾಸ್ತ್ರದ ಅಧ್ಯಯನದಿಂದ ವಿಶ್ಲೇಷಣಾತ್ಮಕ ಚಿಂತನ ಕೌಶಲಗಳು ಬೆಳೆದು ಭಾಷೆಯ ಮೂಲಕ ಆಲೋಚನೆಯ ಸ್ಪಷ್ಟ ಸಂವಹನ ಸಾಧ್ಯವೆನ್ನುವುದು ನಿಜವಾದರೂ ಇದು ತತ್ತ್ವಶಾಸ್ತ್ರದ ಕ್ಷುಲ್ಲಕ ಉಪಯೋಗವಷ್ಟೇ. ತತ್ತ್ವಶಾಸ್ತ್ರ ನಮ್ಮ ಚಿಂತನೆಯ ಅಡಿಪಾಯವನ್ನು, ನಮ್ಮ ಪೂರ್ವಗ್ರಹಗಳನ್ನು ನಿರಂತರ ಪ್ರಶ್ನಿಸುತ್ತಿರುತ್ತದೆ. ನಾವು ನಿಜವೆಂದು ಬಗೆದಿರುವ, ನಮಗೆ ನಿಜವೆಂದು ತೋರುವ ಸಾಮಾನ್ಯ ಜ್ಞಾನವೂ ಎಷ್ಟು ಸಮಸ್ಯಾತ್ಮಕ ಎಂಬುದನ್ನು ತತ್ವಶಾಸ್ತ್ರ ತೆರೆದಿಡುತ್ತದೆ. ಉದಾ: ಜ್ಞಾನ ಹೇಗೆ ಸಿದ್ಧಿಸುತ್ತದೆ? ನಾನು 'ಇರುವುದು' ನಿಜವೇ? ಪ್ರಪಂಚ ನಮ್ಮ ಅರಿವಿಗೆ ನಿಲುಕುವುದು ಹೇಗೆ? ನಾಳೆ ಬೆಳಿಗ್ಗೆ ಸೂರ್ಯ ಉದಯಿಸುವುದು ಎಷ್ಟು ಖಚಿತ? ಈ ಪ್ರಪಂಚದಲ್ಲಿ ನನ್ನ ಹೊರತು ಅನ್ಯರು ಇರುವುದನ್ನು ಸಾಧಿಸಲು ಸಾಧ್ಯವೇ? – ಮುಂತಾದುವು. ಇಂತಹ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ತತ್ತ್ವಶಾಸ್ತ್ರ ಮುಖ್ಯವಾಗಿ ತರ್ಕದ – ವಾದ, ಪ್ರತಿವಾದಗಳ – ವಿಧಾನವನ್ನು ಅನುಸರಿಸುತ್ತದೆ; ಮತ್ತು ನಮ್ಮ ಜ್ಞಾನ, ತಿಳಿವಳಿಕೆ ಎಷ್ಟು ಸಡಿಲವಾದ ಅಡಿಪಾಯದ ಮೇಲೆ ನಿಂತಿದೆ ಎನ್ನುವುದನ್ನು ತೋರಿಸಿ ನಮ್ಮನ್ನು ವಿನೀತರನ್ನಾಗಿಸುತ್ತದೆ.

ನಮಗೆ ಯಾವುದೇ ಸಿದ್ಧಾಂತವನ್ನು, ನಿಲುವನ್ನು ಸ್ವೀಕರಿಸಲು, ತಿರಸ್ಕರಿಸಲು ಯೋಗ್ಯವಾದ ಕಾರಣಗಳ ಕುರಿತು ವಿಚಾರಮಾಡುವ ಸಾಮರ್ಥ್ಯ ಇಲ್ಲವಾದರೆ ನಮ್ಮೆಲ್ಲ ಚರ್ಚೆಗಳು ಹೇಗೆ ಹಳಿ ತಪ್ಪಿ ಘರ್ಷಣೆಗೆ ಈಡು ಮಾಡುತ್ತದೆ ಎಂಬುದನ್ನು ಇಂದಿನ ಸಾರ್ವಜನಿಕ–ರಾಜಕೀಯ ಚರ್ಚೆಗಳನ್ನು ನೋಡಿದರೆ ತಿಳಿಯುತ್ತದೆ. ಯಾವುದೇ ಸಿದ್ಧಾಂತಕ್ಕೆ ಬದ್ಧರಾಗಿರದೆ, ಸಂವಾದಕ್ಕೆ ಮಾತ್ರ ಬದ್ಧರಾಗಿದ್ದು, ಸಿದ್ಧಾಂತಕ್ಕೆ ಉಪಯೋಗಿಸಲ್ಪಡುವ ಬೌದ್ಧಿಕ ಉಪಕರಣಗಳ ಕುರಿತು ನಿಷ್ಪಕ್ಷಪಾತವಾಗಿ ಚಿಂತಿಸುವ ಆ ಮೂಲಕ ಸೌಹಾರ್ದ, ಶಾಂತಿ, ಸಮಾನತೆ ನೆಲೆಗೊಳಿಸುವಲ್ಲಿ ತತ್ತ್ವಶಾಸ್ತ್ರದ ಪಾತ್ರ ದೊಡ್ಡದು. ವೈರುದ್ಧ್ಯ, ವಿರೋಧಭಾಸಗಳು, ಅನಿಶ್ಚಿತತೆ, ಅಪೂರ್ಣತೆ, ಸಂಘರ್ಷಗಳನ್ನು ಮತ್ತು ನಮ್ಮ ಅರಿವಿಗೆ ನಿಲುಕದ್ದೆಲ್ಲವನ್ನೂ ಅತ್ಯಂತ ಮಾನವೀಯವಾಗಿ ನಿರ್ವಹಿಸುವ ಬೌದ್ಧಿಕ ಸಂಸ್ಕಾರ ತತ್ತ್ವಶಾಸ್ತ್ರದ ಅಧ್ಯಯನದಿಂದ ಮಾತ್ರ ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.