ADVERTISEMENT

ಪಿತೃಗಳಿಗೆ ತೃಪ್ತಿ ನೀಡುವ ಪಕ್ಷ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2019, 19:30 IST
Last Updated 13 ಸೆಪ್ಟೆಂಬರ್ 2019, 19:30 IST

ನಮ್ಮ ಸಂಸ್ಕೃತಿಯಲ್ಲಿ ಋಣಗಳ ಕಲ್ಪನೆ ಇದೆ. ನಾವು ಒಬ್ಬರಿಂದ ಪಡೆದುಕೊಂಡಿರುವ ಪ್ರಯೋಜನಫಲವನ್ನೇ ‘ಋಣ’ ಎನ್ನಬಹುದು. ನಮ್ಮ ಜೀವನ ಹೀಗೆ ಹಲವರ ಕಾರಣದಿಂದ ಜೀವವನ್ನೂ ಶಕ್ತಿಯನ್ನೂ ಸಾರ್ಥಕವನ್ನೂ ಸುಖವನ್ನೂ ಪಡೆದುಕೊಂಡಿರುತ್ತದೆ.ಹೀಗೆ ನಮ್ಮ ಮೇಲಿರುವ ಎಲ್ಲ ರೀತಿಯ ಋಣಗಳನ್ನೂ ನಮ್ಮಲ್ಲಿ ಮೂರು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಅವೇ: ದೇವಋಣ, ಋಷಿಋಣ ಮತ್ತು ಪಿತೃಋಣ.

ನಮಗೆ ಶರೀರ ಬಂದಿರುವುದು ನಮ್ಮ ಪೂರ್ವಜರಿಂದ – ನಮ್ಮ ತಂದೆ–ತಾಯಿ, ಅವರ ತಂದೆ–ತಾಯಿ – ಹೀಗೆ ನಿರಂತರವಾಗಿ ಹರಿದುಬಂದಿರುವ ಸಂತತಿಯ ಕಾರಣದಿಂದಾಗಿಯೇ ನಮಗೆ ಶರೀರಪ್ರಾಪ್ತಿಯಾಗಿರುವುದು. ನಮ್ಮ ಪೂರ್ವಜರಿಗೆ ಸಲ್ಲಿಸಬೇಕಾದ ಕೃತಜ್ಞತೆಯೇ ‘ಪಿತೃಋಣ’ ಎಂದೆನಿಸಿಕೊಳ್ಳುತ್ತದೆ.

ಪಿತೃಗಳು ಎಂದರೆ ನಮ್ಮ ಪೂರ್ವಜರು; ಈಗ ಭೌತಿಕಶರೀರದಲ್ಲಿ ಇಲ್ಲದ, ಆದರೆ ಪಿತೃಲೋಕದಲ್ಲಿ ನೆಲಸಿರುವವರು. ಹೀಗೆ ನಮ್ಮ ಕಣ್ಣಮುಂದೆ ಇಲ್ಲದ, ಬೇರೊಂದು ಲೋಕದಲ್ಲಿ, ಬೇರೊಂದು ರೂಪದಲ್ಲಿ ಇರುವವರಿಗೆ ಹೇಗೆ ಕೃತಜ್ಞತೆಯನ್ನು ಸಲ್ಲಿಸುವುದು? ನಮ್ಮ ಶಾಸ್ತ್ರಗಳು ಈ ಮಾರ್ಗವನ್ನು ಹೇಳಿವೆ. ನಮ್ಮ ಪಿತೃಗಳಿಗೆ ಋಣವನ್ನು ತೀರಿಸುವ ಒಂದು ವಿಧಾನ ಎಂದರೆ ಶ್ರಾದ್ಧ. ಈ ಶ್ರಾದ್ಧದ ರೀತಿ–ವಿಧಾನಗಳ ಬಗ್ಗೆಯೂ ಶಾಸ್ತ್ರಗಳಲ್ಲಿ ವಿಶದವಾದ ವಿವರಗಳಿವೆ. ಶ್ರಾದ್ಧವನ್ನು ವರ್ಷದಲ್ಲಿ ಒಂದು ದಿನವಷ್ಟೆ ಮಾಡಲಾಗುತ್ತದೆ. ಹೀಗಿದ್ದರೂ ಪಿತೃಪಕ್ಷದಲ್ಲಿ ಪಿತೃಗಳಿಗೆ ಗೌರವವನ್ನು ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ.

ADVERTISEMENT

ಮಹಾಲಯ ಅಮಾವಾಸ್ಯೆಯ ಹಿಂದಿನ ಹದಿನೈದು ದಿನಗಳನ್ನು ‘ಪಿತೃಪಕ್ಷ’ ಎಂದು ಕರೆಯಲಾಗಿದೆ. ಪಕ್ಷ ಎಂದರೆ ಹದಿನೈದು ದಿನಗಳು. ಈ ಹದಿನೈದು ದಿನಗಳು ಪಿತೃಗಳಿಗೆ ಗೌರವವನ್ನು ಸಲ್ಲಿಸಲು ಅವಕಾಶವಿದೆ. ತೀರಿಕೊಂಡಿರುವ ನಮ್ಮ ಬಂಧುಗಳ ಹಸಿವನ್ನು ತೀರಿಸಲು ಪಿತೃಪಕ್ಷದಲ್ಲಿ ಸಾಧ್ಯ ಎಂಬುದು ಶಾಸ್ತ್ರಗಳ ಮಾತು. ಆದುದರಿಂದ ಈ ಹದಿನೈದು ದಿನಗಳಲ್ಲಿ ಪಿತೃಗಳಿಗೆ ಅವರಿಗೆ ಶ್ರಾದ್ಧಕರ್ಮದ ಮೂಲಕ ಆಹಾರವನ್ನು ಮುಟ್ಟಿಸಬಹುದು ಎನ್ನುವ ನಂಬಿಕೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.