ADVERTISEMENT

ಸಚ್ಚಿದಾನಂದ ಸತ್ಯಸಂದೇಶ: ದೇವ ದಾನವರ ಯುದ್ಧಾರಂಭ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 16 ನವೆಂಬರ್ 2021, 15:07 IST
Last Updated 16 ನವೆಂಬರ್ 2021, 15:07 IST
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ   

ಬ್ರಹ್ಮ-ವಿಷ್ಣು ಮೊದಲಾದ ದೇವತೆಗಳೆಲ್ಲರಿಗೂ ಶಿವಕುಮಾರನ ಗುಣಗಳು ಇಷ್ಟವಾದವು. ನಂಬಿ ಬಂದವರನ್ನು ರಕ್ಷಿಸುವ, ದುಷ್ಟರನ್ನು ಶಿಕ್ಷಿಸುವ ವೀರೋಚಿತ ಕುಮಾರನ ಸ್ವಭಾವ ದೇವಗಣಗಳನ್ನು ಸಂತೋಷಪಡಿಸಿತು. ಇವನೇ ತಾರಕನನ್ನು ಸಂಹರಿಸುವ ಶಕ್ತಿವಂತ ಎಂಬ ಆತ್ಮವಿಶ್ವಾಸ ಮೂಡಿಸಿತು. ಇನ್ನೂ ತಡಮಾಡಬಾರದು ಅಂತ ದೇವಸಮೂಹ ಕಾರ್ತಿಕೇಯನ ನಾಯಕತ್ವದಲ್ಲಿ ತಾರಕನನ್ನು ಕೊಲ್ಲಲು ಜಯಘೋಷ ಮಾಡುತ್ತಾ ಹೊರಟಿತು.

ಮಹಾಬಲಶಾಲಿಯಾದ ತಾರಕಾಸುರನಿಗೆ ಷಣ್ಮುಖನ ನೇತೃತ್ವದಲ್ಲಿ ದೇವತೆಗಳು ತನ್ನ ಮೇಲೆ ಯುದ್ಧಮಾಡಲು ಬರುತ್ತಿರುವ ವಿಷಯ ತಿಳಿಯಿತು. ಅವನು ಸಹ ದೊಡ್ಡ ದಾನವಸೈನ್ಯದೊಂದಿಗೆ ದೇವತೆಗಳ ಮೇಲೆ ಯುದ್ಧ ಮಾಡಲು ಸಿದ್ಧವಾದನು. ಸಾವಿರಾರು ದೈತ್ಯಸೈನ್ಯದೊಡನೆ ತಾರಕನು ಅಬ್ಬರಿಸುತ್ತಾ ಬರುತ್ತಿರುವುದನ್ನು ನೋಡಿ ದೇವಸಮೂಹದಲ್ಲಿ ಭಯ ಆವರಿಸಿತು. ಅಷ್ಟರಲ್ಲಿ ಈಶ್ವರಪ್ರೇರಿತವಾದ ಆಕಾಶವಾಣಿ ‘ಎಲೈ ದೇವತೆಗಳಿರಾ, ನೀವೆಲ್ಲರೂ ಕುಮಾರನ ನೇತೃತ್ವದಲ್ಲಿ ದೈತ್ಯರೊಡನೆ ಯುದ್ಧಮಾಡಿ ಗೆಲ್ಲುವಿರಿ’ ಎಂದಿತು.

ಆಕಾಶದಿಂದ ಕೇಳಿಬಂದ ಅಶರೀರವಾಣಿಯಿಂದ ದೇವತೆಗಳಲ್ಲಿದ್ದ ಭಯ ಕಣ್ಮರೆಯಾಗಿ ಯುದ್ಧೋತ್ಸಾಹ ಹೊಮ್ಮಿತು. ಅವರೆಲ್ಲಾ ಸಂಭ್ರಮೋಲ್ಲಾಸದಿಂದ ವೀರಾಲಾಪ ಮಾಡುತ್ತಾ, ಕುಮಾರನ ನೇತೃತ್ವದಲ್ಲಿ ಸಮುದ್ರತೀರಕ್ಕೆ ಬಂದರು. ತಾರಕಾಸುರನು ಸಹ ತನ್ನ ದೈತ್ಯದಂಡಿನೊಂದಿಗೆ ಅಲ್ಲಿಗೆ ಬಂದು ದೇವತೆಗಳ ಮೇಲೆ ಆಕ್ರಮಣ ನಡೆಸಿದ.ದೇವ-ದಾನವರು ಪರಸ್ಪರ ಭಯಂಕರವಾಗಿ ಕಾದಾಡತೊಡಗಿದರು. ತಾರಕಾಸುರನ ದಾನವಸೈನಿಕರು ಪ್ರಳಯಕಾಲದ ಮೇಘದ ಧ್ವನಿಯಂತೆ ರಣಭೇರಿಗಳನ್ನು ಬಾರಿಸುತ್ತಾ, ಕರ್ಕಶವಾದ್ಯಗಳನ್ನು ಭಯಂಕರವಾಗಿ ಮೊಳಗಿಸುತ್ತಿದ್ದರು. ಇದು ಎದುರಾಳಿಗಳ ಎದೆಯಲ್ಲಿ ನಡುಗಿಸುವ ಕುತಂತ್ರವಾಗಿತ್ತು. ಇದ್ಯಾವುದಕ್ಕೂ ಹೆದರದ ದೇವಸೈನ್ಯ ದಾನವಸೈನ್ಯದ ಮೇಲೆ ಮುಗಿ ಬಿದ್ದು ವೀರಾವೇಶದಿಂದ ಹೋರಾಡಿತು. ಉಭಯ ಪಡೆಗಳ ಸಾವಿರಾರು ಸೈನಿಕರು ಹತರಾಗಿ, ರಕ್ತದಕೋಡಿ ಎಲ್ಲೆಡೆ ಹರಿಯತೊಡಗಿತು. ತಾರಕಾಸುರ ಮತ್ತವನ ದೈತ್ಯಪಡೆಗಳು ಗರ್ಜಿಸುತ್ತಾ ಹೆಜ್ಜೆ ಇಡುತ್ತಿದ್ದರೆ ಭೂಮಿಯು ಕಂಪಿಸಿ, ಅಲುಗಾಡುತ್ತಿತ್ತು. ದೇವಸೈನ್ಯ ದೈತ್ಯರ ಭಯಂಕರ ಶಬ್ದಗಳಿಗೆ ಹೆದರದೆ ತಾರಕನೊಡನೆ ಯುದ್ಧಮಾಡಲು ಉತ್ಸುಕವಾಗಿತ್ತು.

ADVERTISEMENT

ದೇವಸೇನಾಪತಿ ಸುಬ್ರಹ್ಮಣ್ಯನ ಆಣತಿಯಂತೆ ದೇವೇಂದ್ರನು ಅಷ್ಟದಿಕ್ಪಾಲರೊಡನೆ ತನ್ನ ಐರಾವತ ಆನೆಯಲ್ಲಿ ಕುಳಿತುಕೊಂಡುದಾನವರಮೇಲೆ ಯುದ್ಧ ಮಾಡತೊಡಗಿದ. ಆ ಸಮಯದಲ್ಲಿ ದೇವದುಂದುಭಿಗಳು ಮೊಳಗಿದವು. ವೀಣೆ, ಕೊಳಲು, ಮೃದಂಗ ಮುಂತಾದ ಮಂಗಳಕರವಾದ ವಾದ್ಯಗಳನ್ನು ಗಂಧರ್ವರು ನುಡಿಸಿ ದೇವಸೈನ್ಯವನ್ನು ಹುರಿದುಂಬಿಸಿದರು. ಅತ್ತದಾನವರಕಡೆಯವರು ರಣಭೇರಿ ಬಾರಿಸಿ, ಕಹಳೆಗಳನ್ನು ಕರ್ಕಶವಾಗಿ ಊದುತ್ತಾ ದೈತ್ಯಸೇನೆಯನ್ನು ಉತ್ತೇಜಿಸುತ್ತಿದ್ದರು. ಷಣ್ಮುಖನು ಪರಮಾದ್ಭುತವಾದ ರತ್ನಖಚಿತ ವಿಮಾನವನ್ನೇರಿ ರಣಾಂಗಣಕ್ಕಿಳಿದಾಗ, ಅವನ ಅಕ್ಕಪಕ್ಕಗಳಲ್ಲಿ ದೇವತೆಗಳು ಕಾಂತಿಯುಕ್ತವಾದ ಚಾಮರಗಳಿಂದ ಬೀಸುತ್ತಿದ್ದರು. ವರುಣ ರತ್ನಖಚಿತ ಶ್ವೇತಛತ್ರಿಯನ್ನು ಹಿಡಿದಿದ್ದ. ಅದು ಅನಂತಚಂದ್ರರ ಕಿರಣದಂತೆ ಬಿಳುಪಾಗಿ ಪ್ರಕಾಶಿಸುತ್ತಿತ್ತು.

ಸುರ-ದೈತ್ಯರ ಯುದ್ದ ಕ್ಷಣಾರ್ಧದಲ್ಲಿ ಭಯಂಕರ ರೂಪತಾಳಿತು. ಎರಡೂ ಕಡೆಯ ಸೈನಿಕರ ರುಂಡ-ಮುಂಡಗಳು ಚೆಲ್ಲಾಡಿ ಹೋದವು. ಯುದ್ಧದಲ್ಲಿ ದೇವಸೇನೆಯ ಕೈ ಮೇಲಾಗುತ್ತಿರುವುದನ್ನು ಕಂಡು ತಾರಕಾಸುರನು ಇಂದ್ರನ ಮೇಲೆ ಎರಗಿದ. ಅತ್ತ ದೈತ್ಯಸೇನಾನಿಗಳಾದ ಸಂಹ್ರಾದನು ಅಗ್ನಿಯೊಡನೆ, ಜಂಭಾಸುರನು ಯಮನ ಮೇಲೆ, ಮಹಾಪ್ರಭುವೆಂಬುವವನು ನಿರರುತಿಯೊಡನೆ, ಬಲ ಎಂಬಾತನು ವರುಣನ ಮೇಲೆ, ಸುವೀರನು ವಾಯುವಿನ ಮೇಲೆ, ಪವಮಾನ ಎಂಬ ದೈತ್ಯನು ಕುಬೇರನ ಮೇಲೆ, ಶಿವನು ಈಶಾನನೊಡನೆ, ಶಂಭಾಸುರನು ಆದಿಶೇಷನೊಡನೆ, ಕುಂಭನು ಚಂದ್ರನೊಡನೆ, ಕುಂಜರ ಸೂರ್ಯನೊಡನೆ ದ್ವಂದ್ವಯುದ್ಧ ಮಾಡಿದರು.ದೇವ-ದಾನವರರಣರಂಗದಲ್ಲಿ ವೀರರಿಗೆ ಉತ್ಸಾಹವನ್ನು ಹೆಚ್ಚಿಸುತ್ತಿದ್ದರೆ, ರಣಹೇಡಿಗಳಿಗೆ ಭಯವನ್ನುಂಟು ಮಾಡುತ್ತಿತ್ತು. ಯುದ್ಧದಲ್ಲಿ ಎರಡೂ ಕಡೆ ಭಾರಿ ಸಾವು-ನೋವುಗಳು ಸಂಭವಿಸುತ್ತಿತ್ತು. ಅದರಿಂದ ಯುದ್ಧರಂಗವು ಭಯಂಕರವಾಗಿ ಕಾಣಿಸುತ್ತಿತ್ತು..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.