ಮನುಷ್ಯನಿಗೆ ಭಯವನ್ನು ಉಂಟುಮಾಡುವಂಥ ಪ್ರಮುಖ ಸಂಗತಿಗಳು ಸಾವು, ನೋವು ಮತ್ತು ಕತ್ತಲು. ಈ ಮೂರರ ಬಗ್ಗೆ ಸರಿಯಾದ ಅರಿವನ್ನು ದಕ್ಕಿಸಿಕೊಂಡರೆ ಆಗ ಅವನ ಬದುಕು ಸತ್ಯ, ಶಿವ ಮತ್ತು ಸುಂದರ ಆಗಬಲ್ಲದು. ಇಂಥದೊಂದು ಸಂದೇಶವನ್ನು ಹೊತ್ತ ಮಹಾಪರ್ವವೇ ಶಿವರಾತ್ರಿ.
ಶಿವ ಎಂದರೆ ಮಂಗಳಕರ, ಒಳಿತನ್ನು ಉಂಟುಮಾಡುವವನು ಎಂದು ಅರ್ಥ. ಹೀಗಾಗಿಯೇ ಅವನು ನಮ್ಮ ಬದುಕಿನ ಕತ್ತಲು, ಸಾವು ಮತ್ತು ನೋವುಗಳನ್ನು ದೂರ ಮಾಡಬಲ್ಲ. ಸ್ವಾರಸ್ಯ ಎಂದರೆ ಈ ಮೂರು ವಿವರಗಳಿಗೂ ಶಿವನಿಗೂ ನೇರ ನಂಟಿದೆ.
ಶಿವನಿಗಿರುವ ಹಲವು ಹೆಸರುಗಳಲ್ಲಿ ‘ರುದ್ರ’ ಎಂಬುದೂ ಒಂದು. ಇದರ ಅರ್ಥ ‘ಅಳುವನ್ನು ಉಂಟುಮಾಡುವವನು’. ಶಿವನಿಗೇಕೆ ನಮಗೆ ಅಳುವನ್ನುಂಟುಮಾಡುವ ತವಕ? ಅಳುವನ್ನು ಕೊಡುವವನಿಗಷ್ಟೆ ಗೊತ್ತಿರುತ್ತದೆ, ಅದನ್ನು ನಿಲ್ಲಿಸುವ ಪರಿ, ಅಲ್ಲವೆ? ಅಳು ಎಂದರೆ ಅದು ನಮ್ಮ ನೋವಿಗೆ ಒದಗಿದ ಅಭಿವ್ಯಕ್ತಿ. ನಮ್ಮ ನೋವನ್ನು ತಪ್ಪಿಸಬಲ್ಲ, ಅಳುವನ್ನು ನಿಲ್ಲಿಸಬಲ್ಲ ದೈವವೇ ರುದ್ರರೂಪಿಯಾದ ಶಿವ. ನಾವು ಶಿವರಾತ್ರಿಯಂದು ಶಿವನಿಗೆ ಮಾಡುವ ಅಭಿಷೇಕ, ಅದು ‘ರುದ್ರಾಭಿಷೇಕ.’ ಕೇವಲ ಅಭಿಷೇಕಕ್ಕೇ ಶಿವನು ಒಲಿಯುತ್ತಾನಂತೆ!
ಶಿವನನ್ನು ನಾವು ರಾತ್ರಿಯಲ್ಲಿ ಪೂಜಿಸುತ್ತೇವೆ. ರಾತ್ರಿ ಎಂದರೆ ಕತ್ತಲು ತಾನೆ? ಕತ್ತಲು ರಹಸ್ಯಕ್ಕೂ ಪ್ರಮಾದಕ್ಕೂ ಅಜ್ಞಾನಕ್ಕೂ ಸಂಕೇತವಾಗಬಲ್ಲದು. ಶಿವನ ರಹಸ್ಯವನ್ನು ಅರಿಯುವುದು ಸುಲಭವಲ್ಲ; ಅವನನ್ನು ದೇವತೆಗಳೂ ಆರಾಧಿಸುತ್ತಾರೆ, ಭೂತಗಣ–ರಾಕ್ಷಸಗಣಗಳೂ ಪೂಜಿಸುತ್ತವೆ. ಕತ್ತಲೆಯಲ್ಲಿ ನಮಗೆ ಸರಿಯಾಗಿ ಜಗತ್ತು ಕಾಣದು; ಕತ್ತಲೆಯಲ್ಲಿ ತಪ್ಪುಗಳು ಆಗುವುದು ಸಹಜ; ಇದೇ ಅಜ್ಞಾನ. ಬೆಳಕಿನಲ್ಲಿ ವಸ್ತುವಿವರಗಳು ಚೆನ್ನಾಗಿ ಕಾಣುತ್ತವೆ; ಇದೇ ಜ್ಞಾನ. ‘ಶಿವರಹಸ್ಯ’ ಎಂದರೆ ಅದು ನಮ್ಮ ಒಳಿತಿನ ರಹಸ್ಯವೂ ಹೌದು. ಪ್ರಮಾದವನ್ನು ಗೆಲ್ಲುವುದರಲ್ಲಿ, ಅಜ್ಞಾನವನ್ನು ನಾಶಮಾಡಿಕೊಳ್ಳುವುದರಲ್ಲಿ ನಮ್ಮ ಒಳಿತಿನ ರಹಸ್ಯ ಅಡಗಿದೆ. ಶಿವರಾತ್ರಿ ಈ ಸಂದೇಶವನ್ನು ನಮಗೆ ಮುಟ್ಟಿಸುತ್ತಿದೆ. ರಾತ್ರಿಯಲ್ಲಿ ಎಚ್ಚರವಾಗಿರುವುದು ಎಂದರೆ ನಿದ್ರೆಗೆ ವಶವಾಗದಿರುವುದು ಎಂದು; ಅಜ್ಞಾನಕ್ಕೆ ಸೋಲದಿರುವುದು; ‘ಶವಸ್ಥಿತಿ’ಯನ್ನು ಬಿಟ್ಟು ‘ಶಿವಸ್ಥಿತಿ’ಯಲ್ಲಿ ನಮ್ಮ ಭಾವ–ಬುದ್ಧಿಗಳನ್ನು ನೆಲೆಗೊಳಿಸುವುದು. ಇದೇ ಶಿವರಾತ್ರಿಯ ಜಾಗರಣೆಯ ರಹಸ್ಯ. ಕತ್ತಲೆಯಲ್ಲೂ ಕಾಣಬಲ್ಲವನು, ಕತ್ತಲೆಯನ್ನೂ ಬೆಳಕಾಗಿಸಬಲ್ಲವನು ಶಿವ. ಅವನೇ ಜ್ಞಾನಸ್ವರೂಪಿ. ಜ್ಞಾನ ಎಂದರೆ ಬೆಳಕು ತಾನೆ? ಜೀವನವನ್ನು ಸ್ಪಷ್ಟವಾಗಿ ಕಾಣಿಸಬಲ್ಲ ವಿವರಗಳೇ ದಿಟವಾದ ಜ್ಞಾನವಲ್ಲವೆ? ಅದನ್ನು ನೀಡುವವನೇ ಶಿವ. ‘ಪ್ರಮಾದಗಳಿಗೆ ಜಾರದಂತೆ ನಮ್ಮನ್ನು ಎಚ್ಚರವಾಗಿರಿಸು’ ಎಂದು ಅವನಲ್ಲಿ ಬೇಡಿಕೊಳ್ಳುವುದೇ ಜಾಗರಣೆಯ ದಿಟವಾದ ಉದ್ದೇಶ.
ಮನುಷ್ಯನ ಕೊನೆ ಎಂದರೆ ಸಾವು; ಇದರ ಭಯ ಯಾರಿಗೆ ತಾನೆ ಇರದು? ಆದರೆ ಈ ಭಯದಿಂದ ಬಿಡುಗಡೆ ಸಾಧ್ಯವೆ? ಹೇಗೆ? ಇದಕ್ಕೆ ಉತ್ತರವೇ ‘ಶಿವ’. ಅವನು ಮೋಕ್ಷಕಾರಕ. ಮೋಕ್ಷ ಎಂದರೆ ಶಾಶ್ವತ–ಅಶಾಶ್ವತವಾದವುಗಳ ಸರಿಯಾದ ತಿಳಿವಳಿಕೆ; ನಮ್ಮತನದ ಸರಿಯಾದ ತಿಳಿವಳಿಕೆ. ಆನಂದವೇ ಶಾಶ್ವತ; ಅದೇ ನಮ್ಮ ನೆಲೆ; ಅದು ಶಿವನ ಲೀಲೆ – ಎಂಬ ಕಾಣ್ಕೆಯೇ ಮೋಕ್ಷ. ಶಿವನ ತಾಂಡವಕ್ಕೆ ಎರಡು ಆಯಾಮಗಳು: ಲಯ ಮತ್ತು ಸೃಷ್ಟಿ; ಅವನು ನಮ್ಮ ಅಜ್ಞಾನವನ್ನೂ ನಾಶಮಾಡುತ್ತಾನೆ, ನಮ್ಮಲ್ಲಿ ಜ್ಞಾನವನ್ನೂ ಜಾಗರಿತಗೊಳಿಸುತ್ತಾನೆ; ಪ್ರಳಯ ತಾಂಡವ ಮತ್ತು ಆನಂದ ತಾಂಡವ – ಎರಡೂ ಅವನ ಹೆಜ್ಜೆಗಳೇ.
ಶಿವನನ್ನು ಆರಾಧಿಸಲು ಒದಗಿದ ವಿಶೇಷ ಪರ್ವದಿನವೇ ಮಹಾಶಿವರಾತ್ರಿ. ಈಗ ನಡೆಯುತ್ತಿರುವ ಮಹಾಕುಂಭಮೇಳದ ಸಮಾಪ್ತಿ ಆಗುವುದು ಕೂಡ ಶಿವರಾತ್ರಿಯಂದೇ. ದೇವಲೋಕದ ಗಂಗೆಯನ್ನು ಭೂಮಿಗೆ ತಂದವನೇ ಶಿವ. ಗಂಗೆ ನಮ್ಮ ಮೈ–ಮನಗಳಿಗೆ ಅಂಟಿದ ಕೊಳೆಗಳನ್ನು ತೊಳೆದು, ನಮ್ಮಲ್ಲಿರುವ ಶಿವನ ಬೆಳಕನ್ನು ಕಾಣಿಸುವವಳು. ಆ ಬೆಳಕನ್ನು ಕಾಣಬಲ್ಲ ಶಕ್ತಿ ಒದಗಿದರೆ, ಆಗ ನಮ್ಮ ಜೀವನವು ಸತ್ಯ ಶಿವ ಸುಂದರಗಳ ನೆಲೆಯೇ ಹೌದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.