ADVERTISEMENT

ಶಿವನಾಮ ಜಪ: ಶಿವಲಿಂಗಕ್ಕೆ ವಿಶೇಷ ಪೂಜೆ

ಆಕರ್ಷಕ ಅಲಂಕಾರದೊಂದಿಗೆ ಕಂಗೊಳಿಸುತ್ತಿರುವ ಶಿವ ದೇವಾಲಯಗಳು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 10:56 IST
Last Updated 22 ಫೆಬ್ರುವರಿ 2020, 10:56 IST
ಕಾರಟಗಿಯ ಈಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ಜಮಾಯಿಸಿದ್ದ ಭಕ್ತರು
ಕಾರಟಗಿಯ ಈಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ಜಮಾಯಿಸಿದ್ದ ಭಕ್ತರು   

ಕಾರಟಗಿ: ಶಿವನನ್ನು ಲಿಂಗ ಸ್ವರೂಪದಲ್ಲಿ ಪೂಜಿಸಲಾಗುತ್ತಿದೆ. ಹಿಂದೂಗಳಿಗೆ ಮಹಾ ಶಿವರಾತ್ರಿ ಎಂದರೆ ಬಹು ಭಕ್ತಿಯ, ಆಚರಣೆಯ ಹಬ್ಬ. ಕುಟುಂಬದವರೆಲ್ಲಾ ಲಿಂಗಕ್ಕೆ ಪೂಜೆ, ಅಭಿಷೇಕ, ಅಲಂಕಾರ, ಶ್ರೇಷ್ಠವೆನಿಸಿದ ಬಿಲ್ವಪತ್ರೆ ಸಮರ್ಪಣೆ, ಧ್ಯಾನ, ಭಜನೆ, ಉಪವಾಸ ಮೊದಲಾದ ಕ್ರಮಗಳನ್ನು ಶ್ರದ್ದೆಯಿಂದ ಶುಕ್ರವಾರ ಆಚರಿಸಿ ಪುನೀತರಾದರು.

ವಿವಿಧೆಡೆಯ ಶಿವ ದೇವಾಲಯಗಳಿಗೆ ತೆರಳುವುದು ಸಹಜವಾಗಿತ್ತು. ಕುಟುಂಬ ಪರಿವಾರದೊಂದಿಗೆ ಪೂಜಾ ಸಾಮಗ್ರಿ, ತರಾವರಿ ತಿನಿಸುಗಳೊಂದಿಗೆ ಶಿವದೇವಾಲಯಗಳಿಗೆ ತೆರಳುತ್ತಿರುವುದು ವಿವಿಧೆಡೆ ಕಂಡುಬಂತು.
ಪಟ್ಟಣದ ಪುರಾತನ ಸಹಸ್ರ ಲಿಂಗದ ಈಶ್ವರ ದೇವಾಲಯ, ಮಹಾದೇಶ್ವರ ದೇವಾಲಯ, ಶರಣಬಸವೇಶ್ವರ ಕಲ್ಯಾಣ ಮಂಟಪದಲ್ಲಿಯ ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿ ದೇವಾಲಯ, ನವಲಿ ರಸ್ತೆಯಲ್ಲಿಯ ಬೃಹತ್ ಲಿಂಗುವಿನ ಕರೆಪ್ಪತಾತ ದೇವಾಲಯ ಸೇರಿದಂತೆ ವಿವಿಧೆಡೆಯ ಶಿವಲಿಂಗ ಇರುವ ದೇವಾಲಯಗಳು ಶಿವರಾತ್ರಿಗೆ ಸಜ್ಜುಗೊಂಡಿದ್ದವು.

ನಸುಕಿನ ಜಾವದಲ್ಲೇ ನೂರಾರು ನಾಗರಿಕರು, ಮಹಿಳೆಯರು ಸಹಸ್ರ ಲಿಂಗುವಿಗೆ ಅಭಿಷೇಕ, ಅಲಂಕಾರ, ಅರ್ಚನೆ ಮಾಡುವುದು. ಕುಟುಂಬದ ಸದಸ್ಯರು ಜೊತೆಗಿರುವುದು. ಶ್ರದ್ಧಾ, ಭಕ್ತಿಯೊಂದಿಗೆ ಪೂಜೆ ಮಾಡುವಲ್ಲಿ ನಿರತರಾಗಿರುವುದು ಈಶ್ವರ ದೇವಾಲಯ, ಮಹಾದೇಶ್ವರ ದೇವಾಲಯದಲ್ಲಿ ಕಂಡುಬಂತು.
ದೇವಾಲಯದ ಅಭಿವೃದ್ಧಿಗೆ ಹಾಗೂ ಶಿವರಾತ್ರಿಯ ಸಡಗರಕ್ಕೆ ಅನೇಕ ಭಕ್ತರು, ಯುವಕರು, ಮಹಿಳೆಯರು ಸೇವಾಮನೋ ಭಾವದಲ್ಲಿ ಸನ್ನದ್ದರಾಗಿರುವುದು ವಿವಿಧೆಡೆ ಸಂಚರಿಸಿದಾಗ ಕಂಡುಬಂತು.

ADVERTISEMENT

ಮಹಾದೇಶ್ವರ ದೇವಾಲಯಕ್ಕೆ ಮುಖ್ಯರಸ್ತೆಯಿಂದ ಇರುವ ರಸ್ತೆಯುದ್ದಕ್ಕೂ ಸೆಗಣಿ ನೀರು ಹಾಕಿ, ತರಾವರಿ ಬಣ್ಣಗಳ ರಂಗೋಲಿ ಹಾಕಿ ಜನರ ಗಮನಸೆಳೆಯುವಲ್ಲಿ ಮಹಿಳೆಯರು ಯಶಸ್ವಿಯಾದರು.
ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿ ದೇವಾಲಯದಲ್ಲಿ ಅರ್ಚಕ ಮುತ್ತಯ್ಯಸ್ವಾಮಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ನವಲಿ ರಸ್ತೆಯ ಕರೆಪ್ಪತಾತ ದೇವಾಲಯದಲ್ಲಿ ಆಕರ್ಷಕ ಅಲಂಕಾರ ಮಾಡಲಾಗಿತ್ತು. ಸರದಿಯಲ್ಲಿ ನಿಂತು ಜನರು ಪೂಜೆ ಮಾಡಿ, ಭಕ್ತಿ ಸಮರ್ಪಿಸಿದರು.ವಿವಿಧ ದೇವಾಲಯಗಳಲ್ಲಿ ಆಗಮಿಸಿದ ಭಕ್ತರಿಗೆ ಉಪಹಾರವನ್ನು ವಿತರಿಸಲಾಯಿತು.

ಸಾವಿರಾರು ಭಕ್ತರು ಆಂಧ್ರದ ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿ ದೇವಾಲಯಕ್ಕೆ ನೇರವಾಗಿ ಅಥವಾ ಪಾದಯಾತ್ರೆಯ ಮೂಲಕ ತೆರಳಿ ಶಿವರಾತ್ರಿಯ ಹರಕೆ ತೀರಿಸುತ್ತಿದ್ದಾರೆ. ಶಿವಮಾಲೆ ಹಾಕಿರುವ ನೂರಾರು ಶಿವಸ್ವಾಮಿ, ಗುರುಸ್ವಾಮಿಗಳು ಮಹಾ ಶಿವರಾತ್ರಿಯ ಮದ್ಯರಾತ್ರಿ ಮಾಲೆ ವಿರಮಣ ಮಾಡಲಿದ್ದಾರೆ ಎಂದು
ಶ್ರೀಶೈಲದಲ್ಲಿರುವ ಶರಣಬಸವೇಶ್ವರ ವಿದ್ಯಾ ಸಂಸ್ಥೆ ನಿರ್ದೇಶಕ ರುದ್ರೇಶ ಗಣಾಚಾರಿ ತಿಳಿಸಿದರು.

ಮಹಾ ಶಿವರಾತ್ರಿಯ ಹರಕೆಯನ್ನು ಕಳೆದ ವಾರದಿಂದಲೇ ಪಟ್ಟಣದ ಭಕ್ತರು ವಿವಿಧ ರೀತಿಯಲ್ಲಿ ತೀರಿಸುತ್ತಿದ್ದಾರೆ. ಶಿವರಾತ್ರಿಯ ದಿನದಂದು ಉಪವಾಸ ಸಹಿತ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಧನ್ಯತಾಭಾವ
ಮೆರೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.