ADVERTISEMENT

ಸಿರಿಗರ ಬಡಿದೀತು!

ರಘು ವಿ
Published 22 ನವೆಂಬರ್ 2019, 19:45 IST
Last Updated 22 ನವೆಂಬರ್ 2019, 19:45 IST
ಶ್ರೀರಾಮಕೃಷ್ಣರು
ಶ್ರೀರಾಮಕೃಷ್ಣರು   

ಶ್ರೀರಾಮಕೃಷ್ಣರು ಪದೇ ಪದೇ ಹೇಳುತ್ತಿದ್ದುದು ಕಾಮ-ಕಾಂಚನದ ತ್ಯಾಗದ ಬಗ್ಗೆ. ಇವುಗಳು ಮನಸ್ಸಿಗೆ ತಡೆಯೊಡ್ಡುವ ಬಗ್ಗೆ ಅವರು ಅನೇಕ ಉಪಮೆಗಳನ್ನು, ಪುಟ್ಟ ಕಥೆಗಳನ್ನು ಹೇಳಿದ್ದಾರೆ.

ಒಂದು ಕಪ್ಪೆ ತನ್ನ ಪಾಡಿಗೆ ತಾನು ಇತ್ತು. ಒಂದು ದಿನ ಹೇಗೋ ರೂಪಾಯಿ ನಾಣ್ಯ ಕಪ್ಪೆ ವಾಸಿಸುವ ಬಿಲದೊಳಗೆ ಬಿತ್ತು. ಮೊದಲಿಗೆ ದೂರ ಸರಿದ ಕಪ್ಪೆ ನಾಣ್ಯವನ್ನು ನೋಡಿತು. ಬಳಿಕ ಹತ್ತಿರ ಬಂತು, ಮೂಸಿತು. ನೆಕ್ಕಿತು. ಅನಂತರ ಅದರ ಮನಸ್ಸಿನಲ್ಲಿ ಅಹಂಕಾರ, ಧನಮದ ಮೂಡಿತು. ಅದು ಈಗೀಗ ಜಗತ್ತನ್ನು ನೋಡುವ ಪರಿ ಬದಲಾಯಿತು. ತನ್ನ ಸಾಮ್ರಾಜ್ಯವಾದ ಆ ಬಿಲದ ಬಳಿ ಸುಳಿವವರನ್ನು ನೋಡಿ ತೀಕ್ಷ್ಣ ನೋಟ ಬೀರುತ್ತಿತ್ತು. ಆನೆಯೊಂದು ಆ ಹಾದಿಯಲ್ಲಿ ನಡೆಯುತ್ತ ಬಂದು ಧನಿಕ ಕಪ್ಪೆಯ ಬಿಲವನ್ನು ದಾಟಿತು. ಯಾವಾಗ ಆನೆ ತನ್ನ ನಿವಾಸವನ್ನು ದಾಟಿತೊ ಕಪ್ಪೆಗೆ ಎಲ್ಲಿಲ್ಲದ ಕೋಪ ಬಂತು. ತಕ್ಷಣ ಅದು ತನ್ನ ಬಿಲದಿಂದ ಹಾರಿ ಹೊರಗೆ ನಿಂತು ತೊಡೆಗಳನ್ನು ತಟ್ಟುತ್ತ, ‘ಏನು? ಏನಂತ ತಿಳಿದಿದ್ದೀ, ನನ್ನ ಮನೆಯನ್ನು ನೀನು ದಾಟಿ ನಡೆಯುವುದೆಂದರೇನು?!’ ಎಂದು ಚೀರಾಡಿತು.

ಈ ಕಥೆಯನ್ನು ಪರಮಹಂಸರು ಹೇಳಿದ್ದೂ ಒಂದು ಸ್ವಾರಸ್ಯದ ಸಂದರ್ಭದಲ್ಲಿ. ದಕ್ಷಿಣೇಶ್ವರದಲ್ಲಿ ಅವರ ಬಳಿಗೆ ಆಗಾಗ ಒಬ್ಬ ಬಡ ಬ್ರಾಹ್ಮಣ ಬರುತ್ತಿದ್ದ. ಬಹಳ ವಿನೀತಭಾವದಿಂದ ಶ್ರೀರಾಮಕೃಷ್ಣರನ್ನು ಕಂಡು ಬಳಿಕ ದೇಗುಲಗಳಿಗೆ ಭೇಟಿಯಿತ್ತು ಹಿಂದಿರುಗುತ್ತಿದ್ದ. ಆಮೇಲೆ ಅವನು ಬರುವುದು ನಿಂತುಹೋಯಿತು. ಇದಾದ ಕೆಲವು ತಿಂಗಳ ಬಳಿಕ ಪರಮಹಂಸರು ತಮ್ಮ ಸೋದರಳಿಯ ಹೃದಯರಾಮನೊಂದಿಗೆ ಕೊನ್ನಾಗರಕ್ಕೆ ದೋಣಿಯಲ್ಲಿ ಹೋಗಬೇಕಾಯಿತು. ಅಲ್ಲಿ ಅವರು ದೋಣಿಯಿಂದ ಇಳಿಯುವ ಸಮಯದಲ್ಲಿ ಆ ಬ್ರಾಹ್ಮಣ ಗಂಗಾತಟದಲ್ಲಿ ಬಹಳ ಡೌಲಿನಿಂದ ವಾಯುಸೇವನೆಗೆಂದು ಕುಳಿತಿದ್ದು ಕಾಣಿಸಿತು. ಅವನು ಪರಮಹಂಸರನ್ನು ನೋಡಿ, ‘ಏನು ಠಾಕೂರ್? ಚೆನ್ನಾಗಿದ್ದೀರೋ?’ ಎಂದ. ಅವನ ಗತ್ತನ್ನು ಗಮನಿಸಿದ ಪರಮಹಂಸರು ಹೃದಯನಿಗೆ ‘ಬೇಕಾದರೆ ವಿಚಾರಿಸಿನೋಡು, ಈ ಮನುಷ್ಯನಿಗೆ ಇದ್ದಕಿದ್ದಂತೆ ಒಂದಿಷ್ಟು ಆಸ್ತಿ, ಹಣ ದೊರೆತಿದೆ’ ಎಂದರು. ಸಿರಿಗರ ಬಡಿದವರ ಪರಿಯೇ ಇದು!

ADVERTISEMENT

ಇಡೀ ಬದುಕೇ ತಿರುಕನ ಕನಸಿನಂತೆ. ಒಂದು ಉಸಿರನ್ನೂ ಹೊತ್ತು ಒಯ್ಯಲಾರದ ಈ ಜೀವನಕ್ಕೆ ಹಣವೆಂಬುದು ಕೇವಲ ವ್ಯಾವಹಾರಿಕ ಅಂಶವಾದರೆ ಒಳಿತು. ಅದೇ ಪ್ರಧಾನವಾದರೆ ಲೋಭತನ ಹೆಚ್ಚಿ ಬದುಕು ನರಕವಾಗುತ್ತದೆ. ಸಿರಿಗರ ಬಡಿಯದಂತೆ ಎಚ್ಚರಿಕೆಯಂತೆ ಬದುಕಬೇಕು. ಪರಮಹಂಸರ ಭಕ್ತ ಬಲರಾಮ ಬೋಸ್ ಸಾಕಷ್ಟು ಶ್ರೀಮಂತ. ಆದರೆ ತನ್ನ ಮನೆಯಲ್ಲಿ ಪರಮಹಂಸರ ಸತ್ಸಂಗ ನಡೆಯುವಾಗ ಭಕ್ತರನ್ನು ಬರಮಾಡಿಕೊಳ್ಳಲು ಮನೆಯ ಜಗುಲಿಯಲ್ಲಿ ಭಕ್ತಿಯಿಂದ ಕೈಮುಗಿದು ನಿಂತಿರುತ್ತಿದ್ದ. ಈ ಬಗೆಯ ಶ್ರೀಮಂತಿಕೆ ಎಲ್ಲರಿಗೂ ಆದರ್ಶವಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.