ADVERTISEMENT

Bakrid Festival: ತ್ಯಾಗ ಬಲಿದಾನಗಳ ಸ್ಮರಣೆಯ ಹಬ್ಬ

ಇಂದು ಬಕ್ರೀದ್

ಮಹಮ್ಮದ್ ನೂಮಾನ್
Published 6 ಜೂನ್ 2025, 23:30 IST
Last Updated 6 ಜೂನ್ 2025, 23:30 IST
ಮಕ್ಕಾದಲ್ಲಿರುವ ಪವಿತ್ರ ಕಅಬಾ ಭವನದ ಬಳಿ ನೆರೆದಿರುವ ಹಜ್‌ ಯಾತ್ರಿಕರು – ಎಎಫ್‌ಪಿ ಚಿತ್ರ 
ಮಕ್ಕಾದಲ್ಲಿರುವ ಪವಿತ್ರ ಕಅಬಾ ಭವನದ ಬಳಿ ನೆರೆದಿರುವ ಹಜ್‌ ಯಾತ್ರಿಕರು – ಎಎಫ್‌ಪಿ ಚಿತ್ರ    

ನಾಲ್ಕು ಸಾವಿರ ವರ್ಷಗಳಿಗೂ ಹಿಂದೆ ಜೀವಿಸಿದ್ದ ಪ್ರವಾದಿ ಇಬ್ರಾಹಿಂ ಅವರ ತ್ಯಾಗವನ್ನು ನೆನಪಿಸುವ ಹಬ್ಬವೇ ಬಕ್ರೀದ್ ಅಥವಾ ಈದ್‌–ಉಲ್‌–ಅದಾ. ಇಸ್ಲಾಮಿಕ್‌ ಕ್ಯಾಲೆಂಡರಿನ ‘ದುಲ್‌ ಹಜ್ಜ್‌’ ತಿಂಗಳ 10ರಂದು ಬಕ್ರೀದ್‌ ಆಚರಿಸಲಾಗುತ್ತದೆ. ಪ್ರವಾದಿ ಇಬ್ರಾಹಿಂ ಅವರು, ಕೊನೆಯ ಪ್ರವಾದಿ ಮುಹಮ್ಮದ್‌ ಅವರಿಗಿಂತ ಎರಡೂವರೆ ಸಾವಿರ ವರ್ಷಗಳ ಹಿಂದೆ ಹುಟ್ಟಿದ್ದರು.

ಇಬ್ರಾಹಿಂ ಮತ್ತು ಅವರ ಪುತ್ರ ಇಸ್ಮಾಯಿಲ್ ಅವರ ಜೀವನ, ತತ್ವಗಳು, ದೈವನಿಷ್ಠೆ ಮತ್ತು ತ್ಯಾಗದ ಗುಣಗಳೊಂದಿಗೆ ಈ ಹಬ್ಬ ಬೆಸೆದುಕೊಂಡಿದೆ. ಪ್ರವಾದಿಯಾದ ಬಳಿಕ ಇಬ್ರಾಹಿಂ ಅವರು ಧರ್ಮ ಪ್ರಚಾರಕ್ಕಿಳಿಯುತ್ತಾರೆ. ಈ ವೇಳೆ ದೇವರು ಅವರನ್ನು ಹಲವಾರು ಪರೀಕ್ಷೆಗಳಿಗೆ ಒಳಪಡಿಸುತ್ತಾರೆ. 

ಸಂತಾನಭಾಗ್ಯ ಇಲ್ಲದೆ ಕೊರಗುತ್ತಿದ್ದ ಇಬ್ರಾಹಿಂ ಮತ್ತು ಹಾಜರಾ ದಂಪತಿಗೆ ವೃದ್ಧಾಪ್ಯದಲ್ಲಿ ಮಗ ಇಸ್ಮಾಯಿಲ್‌ ಜನಿಸುವರು. ಇಸ್ಮಾಯಿಲ್‌ ಅವರಿಗೆ 13 ವರ್ಷ ಆಗಿದ್ದಾಗ ಅವರನ್ನು ಬಲಿ ನೀಡುವಂತೆ ದೇವರು ಇಬ್ರಾಹಿಂ ಅವರಿಗೆ ಆಜ್ಞಾಪಿಸುವರು. ಅಲ್ಲಾಹನ ಆದೇಶದಂತೆ ಇಬ್ರಾಹಿಂ, ತಮ್ಮ ಪುತ್ರ ಇಸ್ಮಾಯಿಲ್‌ ಅವರನ್ನು ಬಲಿಯರ್ಪಿಸಲು ಮುಂದಾಗುವರು. ಮಗನನ್ನೇ ಬಲಿ ನೀಡಲು ಸಿದ್ಧವಾಗಿದ್ದ ಇಬ್ರಾಹಿಂ ಅವರ ಭಕ್ತಿಯನ್ನು ಅಲ್ಲಾಹನು ಮೆಚ್ಚಿ ಪುತ್ರನ ಬದಲು ಒಂದು ಮೇಕೆಯನ್ನು ಬಲಿ ಅರ್ಪಿಸುವಂತೆ ಸೂಚಿಸುತ್ತಾರೆ.

ADVERTISEMENT

ಇಬ್ರಾಹಿಂ ಅವರ ತ್ಯಾಗವನ್ನು ನೆನಪಿಸಲು ಹಬ್ಬದ ದಿನ ಜಾನುವಾರು ಬಲಿಯನ್ನು ಅರ್ಪಿಸಲಾಗುತ್ತದೆ. ಆರ್ಥಿಕವಾಗಿ ಸಬಲರಾಗಿರುವ ಎಲ್ಲರೂ ಪ್ರಾಣಿಬಲಿ ನೀಡಬೇಕು. ಅದರ ಮಾಂಸವನ್ನು ಸ್ವತಃ ಬಳಸಿಕೊಳ್ಳುವುದರ ಜತೆಯಲ್ಲೇ ಸಂಬಂಧಿಕರು ಹಾಗೂ ಬಡವರಿಗೂ ಹಂಚಬೇಕು. ‘ಕುರ್ಬಾನಿ (ಪ್ರಾಣಿಬಲಿ) ನೀಡುವ ಸಾಮರ್ಥ್ಯವಿದ್ದೂ, ನೀಡದವನು ಹಬ್ಬದ ಪ್ರಾರ್ಥನೆಗಾಗಿ ಈದ್ಗಾಗೆ ಬರುವ ಅಗತ್ಯವಿಲ್ಲ’ ಎಂದು ಪ್ರವಾದಿ ಮುಹಮ್ಮದ್‌ ಅವರು ಹೇಳಿದ್ದಾರೆ.

ಇಸ್ಲಾಮ್‌ನ ಐದು ಕಡ್ಡಾಯ ಆರಾಧನೆಗಳಲ್ಲಿ ಒಂದಾಗಿರುವ ‘ಹಜ್’ ಇದೇ ಅವಧಿಯಲ್ಲಿ ನಡೆಯುತ್ತದೆ. ಸೌದಿ ಅರೇಬಿಯಾದ ಮಕ್ಕಾದಲ್ಲಿ ಪವಿತ್ರ ಹಜ್‌ ಯಾತ್ರೆಯಲ್ಲಿ ಈ ಬಾರಿ ಲಕ್ಷಾಂತರ ಮಂದಿ ಪಾಲ್ಗೊಂಡಿದ್ದಾರೆ. ಆರೋಗ್ಯ ಮತ್ತು ಆರ್ಥಿಕವಾಗಿ ಸಬಲನಾಗಿರುವ ವ್ಯಕ್ತಿ ಜೀವನದಲ್ಲೊಮ್ಮೆ ಹಜ್‌ ಯಾತ್ರೆ ಕೈಗೊಳ್ಳುವುದು ಕಡ್ಡಾಯ ಎಂದು ಇಸ್ಲಾಂ ಹೇಳುತ್ತದೆ.

ಮಕ್ಕಾದಲ್ಲಿರುವ ಪವಿತ್ರ ಕಅಬಾ ಭವನಕ್ಕೆ ಪ್ರದಕ್ಷಿಣೆ ಹಾಕುವುದು, ಸಫಾ–ಮರ್ವಾ ಬೆಟ್ಟಗಳ ನಡುವೆ ನಡೆಯುವುದು, ಮಿನಾದಲ್ಲಿ ತಂಗುವುದು, ಅರಫಾ ಮೈದಾನಕ್ಕೆ ತೆರಳುವುದು, ಜಮ್ರಾದಲ್ಲಿ ಕಲ್ಲೆಸೆಯುವುದು, ಪ್ರಾಣಿ ಬಲಿ ನೀಡುವುದು – ಹೀಗೆ ಹಜ್‌ನಲ್ಲಿ ಹಲವು ಧಾರ್ಮಿಕ ವಿಧಿ–ವಿಧಾನಗಳನ್ನು ನೆರವೇರಿಸಲಾಗುತ್ತದೆ. ಬಕ್ರೀದ್‌ನ ಹಿಂದಿನ ದಿನವನ್ನು ‘ಅರಫಾ ದಿನ’ ಎಂದು ಕರೆಯುವರು. ಹಜ್‌ಗೆ ತೆರಳಿದ ಲಕ್ಷಾಂತರ ಮಂದಿ ಅಂದು ಅರಫಾ ಮೈದಾನದಲ್ಲಿ ಒಗ್ಗೂಡುವರು. 

ಈದ್‌ ದಿನದಂದು ಬೆಳಿಗ್ಗೆ ಈದ್ಗಾಗಳು ಮತ್ತು ಮಸೀದಿಗಳಲ್ಲಿ ಸಾಮೂಹಿಕ ಈದ್ ನಮಾಜ್‌ ಇರುತ್ತದೆ. ಮಕ್ಕಳು, ಹಿರಿಯರು ಹೊಸ ಉಡುಗೆಯನ್ನು ತೊಟ್ಟು ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವರು. ನಮಾಜ್‌ಗೂ ಮುನ್ನ ಕೆಲ ಹೊತ್ತು ‘ತಕ್ಬೀರ್‌’ ಅನ್ನು ಮೊಳಗಿಸಲಾಗುತ್ತದೆ.

ನಮಾಜ್‌ ಬಳಿಕ ಪರಸ್ಪರ ಶುಭಾಶಯ ತಿಳಿಸಿ, ಗೆಳೆಯರ ಮತ್ತು ಸಂಬಂಧಿಕರ ಮನೆಗೆ ಭೇಟಿ ನೀಡುವರು. ಮನೆಗಳಲ್ಲಿ ಹಬ್ಬದ ಊಟ, ವಿಶೇಷ ಖಾದ್ಯಗಳನ್ನು ತಯಾರಿಸುವರು. ಗೆಳೆಯರು, ಬಂಧುಗಳನ್ನು ಆಹ್ವಾನಿಸಿ ಜೊತೆಯಾಗಿ ಊಟ ಮಾಡಿ, ಸಂಭ್ರಮ ಹಂಚಿಕೊಳ್ಳುವರು. ಹಬ್ಬದ ದಿನ ದಾನವಾಗಿ ದೊರೆಯುವ ಮಾಂಸ, ಹಣ, ದಿನಸಿ ಸಾಮಗ್ರಿಗಳು ಎಷ್ಟೋ ಬಡಕುಟುಂಬಗಳಿಗೂ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಕಲ್ಪಿಸುತ್ತದೆ.

ಮಾನವೀಯ ಮೌಲ್ಯಗಳು, ಸೋದರತ್ವ ಬೆಳೆಸಿಕೊಳ್ಳುವುದು, ದೇವನಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗಬೇಕು ಎಂಬ ಸಂದೇಶವನ್ನು ಬಕ್ರೀದ್‌ ಸಾರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.