ADVERTISEMENT

‘ಮಂತ್ರಾಲಯದ ಗುರುರಾಯ‘ ರಾಘವೇಂದ್ರ ಸ್ವಾಮಿಗಳ ಜನ್ಮದಿನ

ಯು.ಪಿ.ಪುರಾಣಿಕ್
Published 19 ಮಾರ್ಚ್ 2021, 21:23 IST
Last Updated 19 ಮಾರ್ಚ್ 2021, 21:23 IST
ರಾಘವೇಂದ್ರಸ್ವಾಮಿಗಳು
ರಾಘವೇಂದ್ರಸ್ವಾಮಿಗಳು   

ಅಪಾರ ಮಹಿಮರೂ ದಯಾಳುಗಳೂ ಯತಿಶ್ರೇಷ್ಠರೂ ಆಗಿರುವ ಶ್ರೀ ರಾಘವೇಂದ್ರಸ್ವಾಮಿಗಳ ಜನ್ಮದಿನ ಎಂದರೆ ಅವರ ಭಕ್ತರಿಗೆ ವಿಶೇಷವಾದ ದಿನ...

ಇಂದು ರಾಘವೇಂದ್ರ ಸ್ವಾಮೀಜಿ ಜನ್ಮದಿನ. ಇದು ಅವರ 426ನೇ ಜನ್ಮದಿನ. ಗುರುಸಾರ್ವಭೌಮರಾದ ರಾಘವೇಂದ್ರ ಸ್ವಾಮಿಗಳು ಕ್ರಿ.ಶ. 1595 ಮನ್ಮಥನಾಮ ಸಂವತ್ಸರ ಫಾಲ್ಗುಣ ಶುದ್ಧ ಸಪ್ತಮಿ ಗುರುವಾರ, ತಮಿಳುನಾಡಿನ ಭುವನಗಿರಿಯಲ್ಲಿ, ಬೀಗಮುದ್ರೆ ಮನೆತನದ ಗೋಪಮ್ಮ ಹಾಗೂ ತಿಮ್ಮಣ್ಣ ಭಟ್ಟ ದಂಪತಿಯ ಉದರದಲ್ಲಿ ತಿರುಪತಿ ತಿಮ್ಮಪ್ಪನ ಹರಕೆಯಿಂದ ಜನ್ಮವೆತ್ತಿದರು. ಮಗುವಿಗೆ ‘ವೆಂಕಟನಾಥ’ ಎಂದೇ ಹೆಸರಿಡಲಾಯಿತು. ವೆಂಕಟನಾಥನಿಗೆ ಪ್ರಾಥಮಿಕ ಗುರುಗಳು ಅಕ್ಕ ವೆಂಕಟಾಂಬೆಯ ಪತಿ ಲಕ್ಷ್ಮೀನರಸಿಂಹ ಆಚಾರ್ಯ; ಮುಂದೆ ಹೆಚ್ಚಿನ ವಿದ್ಯಾಭ್ಯಾಸ ಸುಧೀಂದ್ರತೀರ್ಥರಿಂದ ದೊರೆಯಿತು.

ಬ್ರಹ್ಮಲೋಕದ ಶಂಕುಕರ್ಣನೆಂಬ ದೇವತೆ, ಬ್ರಹ್ಮನ ಶಾಪಕ್ಕೆ ಗುರಿಯಾಗಿ ಶಾಪವನ್ನು ವರವಾಗಿ ಸ್ವೀಕರಿಸಿ ಕೃತಯುಗದಲ್ಲಿ ಹಿರಣ್ಯ ಕಶಿಪುವೆಂಬ ರಾಕ್ಷಸನ ಉದರದಲ್ಲಿ ‘ಭಕ್ತ ಪ್ರಹ್ಲಾದ’ನಾಗಿ, ದ್ವಾಪರದಲ್ಲಿ ಬಾಹ್ಲಿಕ ರಾಜರಾಗಿ, ಕಲಿಯುಗದಲ್ಲಿ ವ್ಯಾಸರಾಯರಾಗಿ ಹಾಗೂ ಕೊನೆಯ ಅವತಾರವಾಗಿ ರಾಘವೇಂದ್ರರಾಗಿ ಭೂಲೋಕದಲ್ಲಿ ನಾಲ್ಕು ಅವತಾರ ಎತ್ತಿದರು ಎಂಬ ನಂಬಿಕೆ ಭಕ್ತರಲ್ಲಿ ಇದೆ. ರಾಘವೇಂದ್ರ ಸ್ವಾಮಿಗಳು ಕೃತಯುಗದಲ್ಲಿ ಪ್ರಹ್ಲಾದರಾಜನಾಗಿ ಜನ್ಮವೆತ್ತಿದಾಗ ಹತ್ತು ಸಹಸ್ರ ವರ್ಷ ಹರಿನಾಮ ಸ್ಮರಣೆ ಮಾಡಿ ಪುಣ್ಯದ ಕಣಜವನ್ನೇ ತಮ್ಮದಾಗಿರಿಸಿ ಕೊಂಡರು. ತಾವು ಸಂಪಾದಿಸಿದ ಅಪಾರ ಪುಣ್ಯವನ್ನು ಹಂಚಿ ಜನರ ಬವಣೆಯನ್ನು ನೀಗಿಸ ಲೆಂದೇ ರಾಯರು ತಮ್ಮ 76ನೇ ವರ್ಷದಲ್ಲಿ ಅಂದರೆ ಕ್ರಿ.ಶ. 1671 ವಿರೋಧಿನಾಮ ಸಂವತ್ಸರ ಶ್ರಾವಣ ಕೃಷ್ಣ ಬಿದಿಗೆಯಂದು ಮಂತ್ರಾಲಯದ ಮಂಚಾಲಮ್ಮನ ಸನ್ನಿಧಿಯಲ್ಲಿ ಸಶರೀರ ವಾಗಿ ಬೃಂದಾವನ ಪ್ರವೇಶಿಸಿದರು; ಬೃಂದಾವನದಲ್ಲಿ ತಾವು ಏಳುನೂರು ವರ್ಷಗಳು ನೆಲೆಸುವುದಾಗಿ ತಿಳಿಸಿದ್ದಾರೆ.

ADVERTISEMENT

ರಾಯರು ಬಯಸಿ ನೆಲೆಸಿರುವ ಮಂತ್ರಾಲಯದ ಮಹಿಮೆ ಬಣ್ಣಿಸಲಾಗದಷ್ಟು ಅಪಾರವಾಗಿದೆ. ಕೃತಯುಗದಲ್ಲಿ ಪ್ರಹ್ಲಾದರು ಯಜ್ಞ ಮಾಡಿದ ಸ್ಥಳ, ತ್ರೇತಾಯುಗದಲ್ಲಿ ರಾಮ–ಲಕ್ಷ್ಮಣರು ವಿಶ್ರಮಿಸಿದ ಬಂಡೆಯಿಂದ ನಿರ್ಮಿಸಿದ ಬೃಂದಾವನದ ಸ್ಥಳ, ದ್ವಾಪರದಲ್ಲಿ ಅನುಸಾಲ್ವನೆಂಬ ರಾಜ ಪಾಂಡವರ ಅಶ್ವಮೇಧಯಾಗದ ಕುದುರೆಯನ್ನು ಕಟ್ಟಿಹಾಕಿ ಪಾಂಡವರನ್ನು ಹಿಮ್ಮೆಟ್ಟಿದ ಸ್ಥಳ, ಮಂಚಾಲಮ್ಮನ ಸನ್ನಿಧಿ – ಇಂತಹ ಪುಣ್ಯಸ್ಥಳದಲ್ಲಿ ನೆಲೆಸಿರುವ ಗುರುಸಾರ್ವಭೌಮರು ಭಕ್ತರ ಪಾಲಿಗೆ ಕಲಿಯುಗದ ಕಲ್ಪತರು. ರಾಯರು ಬೃಂದಾವನಸ್ಥರಾಗಿ ಮುನ್ನೂರೈವತ್ತು ವಸಂತಗಳು ಉರುಳಿವೆ; ವಿಶ್ವದಾದ್ಯಂತ ಎರಡು ಸಾವಿರಕ್ಕೂ ಹೆಚ್ಚಿನ ಬೃಂದಾವನಗಳು ನಿರ್ಮಾಣವಾಗಿವೆ.

ರಾಘವೇಂದ್ರ ಸ್ವಾಮಿಗಳು ಭವರೋಗವೈದ್ಯರು ಹಾಗೂ ಪವಾಡ ಪುರುಷರು ಎಂದೇ ಭಕ್ತರು ನಂಬಿ ದ್ದಾರೆ. ಮಾಂಸವನ್ನು ಫಲಪುಷ್ಪಾದಿ ಗಳಾಗಿ ಮಾಡಿದ ಹಾಗೂ ಒನಕೆಯನ್ನೇ ಚಿಗುರಿಸಿ ಜೀವತುಂಬಿ ಗಿಡವನ್ನಾಗಿ ಮಾಡಿದ ಕಥೆ ಅವರ ಜೀವನ ಚರಿತ್ರೆಯಲ್ಲಿ ಬರುತ್ತದೆ. ರಾಯರು ಬೃಂದಾವನಸ್ಥರಾಗಿ 135 ವರ್ಷಗಳ ನಂತರ, ಕ್ರಿ.ಶ. 1806ರಲ್ಲಿ, ಸರ್ ಥಾಮಸ್ ಮುನ್ರೋ ಅವರಿಗೆ ಬೃಂದಾ ವನದಿಂದ ಹೊರಬಂದು ದರ್ಶನ ನೀಡಿದರೆಂಬ ಪ್ರತೀತಿಯೂ ಇದೆ.

ಮಂತ್ರಾಲಯ ಒಂದು ಶಾಂತಿವನದಂತಿದ್ದು, ಭಕ್ತಾದಿಗಳು ತಮ್ಮ ಜೀವನದ ಜಂಜಾಟವನ್ನು ಸಂಪೂರ್ಣ ಮರೆತು ಇಲ್ಲಿ ನೆಮ್ಮದಿಯನ್ನು ಅನುಭವಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.