ADVERTISEMENT

ವಚನ ವಾಣಿ | ಶರಣರ ವಚನಗಳ ವಾಚನ, ಅರ್ಥವಿವರಣೆ ಮತ್ತು ವಚನ ಗಾಯನ ಸರಣಿ-1

ಡಾ.ಬಸವರಾಜ ಸಾದರ
Published 26 ಜುಲೈ 2020, 18:16 IST
Last Updated 26 ಜುಲೈ 2020, 18:16 IST
ವಚನ ವಾಣಿ
ವಚನ ವಾಣಿ   

ಕಟ್ಟಿದಾತ ಭಕ್ತನಪ್ಪನೆ? ಕೆಡಹಿದಾತ ದ್ರೋಹಿಯಪ್ಪನೆ?
ಲಿಂಗವ ಕಟ್ಟಲಿಕ್ಕೆ ತನ್ನ ಕೈಯೊಳಗಿಪ್ಪುದೆ? ಕೆಡಹಲಿಕ್ಕೆ ಬೀಳಬಲ್ಲುದೆ?
ಆ ಲಿಂಗವು ಬಿದ್ದ ಬಳಿಕ ಜಗವು ತಾಳಬಲ್ಲುದೆ?
ಪ್ರಾಣಲಿಂಗ ಬಿದ್ದ ಬಳಿಕ ಆ ಪ್ರಾಣ ಉಳಿಯಬಲ್ಲುದೆ?
ಲಿಂಗ ಬಿದ್ದಿತ್ತೆಂಬುದು ಸೂತಕದ ಶಬ್ದ, ಭ್ರಾಂತುವಿನ ಪುಂಜ.
ಯುಗಜುಗಂಗಳು ಗತವಹವಲ್ಲದೆ ಲಿಂಗಕ್ಕೆ ಗತವುಂಟೆ?
ಲಿಂಗವು ಬಿದ್ದಿತ್ತೆಂದು ನಿಂದಿಸಿ ನುಡಿವ
ದ್ರೋಹಿಯ ಮಾತ ಕೇಳಲಾಗದು ಕಾಣಾ ಗುಹೇಶ್ವರಾ.
- ಅಲ್ಲಮಪ್ರಭು

ಮಾನವನ ಇತಿಹಾಸದುದ್ದಕ್ಕೂ ಕಟ್ಟುವ ಮತ್ತು ಕೆಡಹುವ ಕೃತ್ಯಗಳು ನಡೆಯುತ್ತಲೇ ಬಂದಿವೆ. ಒಬ್ಬರು ಕಟ್ಟಿದ್ದನ್ನು ಮತ್ತೊಬ್ಬರು ಕೆಡಹುವ ಈ ಕೆಲಸವು ಮನುಷ್ಯನೊಳಗಿನ ಅಜ್ಞಾನ, ಅಸಹನೆ, ಈರ್ಷೆ ಮತ್ತು ಅಸಮಾಧಾನಗಳ ಪ್ರತಿರೂಪವಲ್ಲದೆ ಬೇರಿಲ್ಲ. ಅರಿವಿನ ಕೊರತೆಯಿಂದ ನಡೆಯುವ ಇಂಥ ವಿದ್ಯಮಾನವನ್ನೇ ತ್ರಿಕಾಲಜ್ಞಾನಿ ಅಲ್ಲಮಪ್ರಭು ತಾರ್ಕಿಕ ನೆಲೆಯಲ್ಲಿ ಪ್ರಶ್ನಿಸುತ್ತಾನೆ ಪ್ರಸ್ತುತ ವಚನದಲ್ಲಿ. ಆತನ ಪ್ರಕಾರ ಕಟ್ಟುವವ ಭಕ್ತನಲ್ಲ, ಕೆಡಹುವವ ದ್ರೋಹಿಯಲ್ಲ. ಏಕೆಂದರೆ, ಲಿಂಗಕ್ಕೆ, ಅಂದರೆ ಅರಿವಿಗೆ ಆಲಯವನ್ನು ಕಟ್ಟಲು ಸಾಧ್ಯವಿಲ್ಲ. ಲಿಂಗ ಅಥವಾ ಅರಿವು, ಪ್ರಜ್ಞೆಯ ಪ್ರಚ್ಛನ್ನರೂಪವಾಗಿರುವಾಗ ಅದು ಭೌತಸ್ವರೂಪದಲ್ಲಿ ಯಾರ ಕೈಯಲ್ಲೂ ಇರಲಾರದು. ಹಾಗಿರುವಾಗ ಅದನ್ನು ಕಟ್ಟಲೂ ಆಗದು, ಕೆಡಹುವುದೂ ಸಾಧ್ಯವಿಲ್ಲ. ಒಂದು ವೇಳೆ ಅಂಥ ಲಿಂಗ ಅಥವಾ ಅರಿವು ಇಲ್ಲವಾದರೆ ಜಗತ್ತು ತಾಳಬಲ್ಲುದೇ, ಭಾಳಬಲ್ಲುದೆ? ಪ್ರಾಣಸದೃಶ್ಯವೇ ಆದ ಅರಿವೇ ಇಲ್ಲವಾದರೆ, ಪ್ರಾಣ ಮತ್ತು ಪ್ರಾಣದ ತಾಣ ಉಳಿಯಬಲ್ಲುವೆ? ಅರ್ಥವಿಷ್ಟೇ; ಅರಿವೆಂಬುದು ಬಯಲು ಮತ್ತು ಅವಿನಾಶಿ. ಇಂಥ ಬಯಲಿಗೆ ಗೋಡೆ-ಗೋಪುರಗಳ ಕಟ್ಟಡ ಬೇಕೆ? ಅವಿನಾಶಿಯಾದ ಅರಿವನ್ನು ಆ ಕಟ್ಟಡದಲ್ಲಿ ಬಂಧಿಸಿಡಲು ಸಾಧ್ಯವೆ? ಈ ಬಗೆಯ ಪ್ರಶ್ನೆಗಳನ್ನು ತನ್ನೊಳಗೇ ತುಂಬಿಕೊಂಡಿರುವ ಈ ವಚನವು, ಅವು ಉತ್ತರವಿಲ್ಲದ ಪ್ರಶನೆಗಳು ಎಂಬ ಅರ್ಥವನ್ನೂ ಧ್ವನಿಸುತ್ತದೆ. ಹಾಗಿದ್ದರೆ ಕಟ್ಟುವ ಮತ್ತು ಕೆಡಹುವ ಇಂಥ ನಿರರ್ಥಕ ಕೆಲಸವೇಕೆ? ಎನ್ನುವುದು ಇಲ್ಲಿರುವ ಒಟ್ಟು ಪ್ರಶ್ನೆ.

ಕಟ್ಟಲಾಗದ ಇಂಥ ಅರಿವು ಬಿದ್ದಿತೆಂದು ಹೇಳುವುದೇ ಸೂತಕ ಎನ್ನುತ್ತಾನೆ ಪ್ರಭು. ಅದು ಭ್ರಾಂತಿಯ ಮೊತ್ತವೆಂದೂ ಅವನ ಅಭಿಪ್ರಾಯ. ಇಂಥದನ್ನು ಕೇಳಲೂ ಅಸಾಧ್ಯ ಎನ್ನುವ ಆತ, ಯುಗ, ಯುಗಗಳೇ ಕಳೆದು ಹೋದರೂ ಅರಿವು ಮಾತ್ರ ನಿರಂತರ ಉಳಿದೇ ಬಂದಿದೆ ಎಂಬ ತ್ರಿಕಾಲಸತ್ಯವನ್ನು ಎತ್ತಿ ಹಿಡಿಯುತ್ತಾನೆ. ಹಾಗಾಗಿಯೇ ಲಿಂಗವು ಬಿದ್ದಿತೆಂದು ಹೇಳುವುದೇ ದ್ರೋಹದ ಮಾತು ಎಂಬುದು ಅಲ್ಲಮನ ಅಭಿಪ್ರಾಯ. ಕಟ್ಟಲಾಗದ್ದು ಬೀಳುವುದು ಹೇಗೆ?

ಲಿಂಗ ಸ್ವರೂಪಿಯಾದ “ಅರಿವು”, ಸದಾ ಜಾಗೃತವಾಗಿರುವ ಒಂದು ಮಹಾಪ್ರಜ್ಞೆ. ಅದನ್ನು ಮರೆತವರು ಮಾತ್ರ ಕಟ್ಟುವ ಮತ್ತು ಕೆಡಹುವ ನಿರರ್ಥಕ ಕೃತ್ಯಗಳಿಗೆ ಕೈ ಹಾಕುತ್ತಾರೆ. ಅದನ್ನು ಕಟ್ಟಲೂ ಆಗದು; ಕೆಡಹಲೂ ಆಗದು. ಇಂಥ “ಅರಿವೇ” ಜಗತ್ತನ್ನು ತಾಳಿಸಿದೆ, ಬಾಳಿಸಿದೆ ಮತ್ತು ಉಳಿಸಿದೆ. ಅದು ಎಲ್ಲರಲ್ಲೂ ಯಾವಾಗಲೂ ಸದಾ ಜಾಗೃತವಾಗಿರುವ ಅಗತ್ಯವಿದೆ. ಹಾಗೆ ಅದು ನಿರಂತರ ಜಾಗೃತಿಯಾಗಿ, ಮನುಕುಲವನ್ನು ಸೂಕ್ತ ಮಾರ್ಗದಲ್ಲಿ ನಡೆಸುವ ಪ್ರಜ್ಞೆಯಾಗಿಯೇ ಇರಬೇಕೆಂಬುದು ಇಲ್ಲಿ ಅಲ್ಲಮಪ್ರಭುವಿನ ಮುಖ್ಯ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.