ಮಣ್ಣಿಲ್ಲದೆ ಮಡಿಕೆ ಮಾಡಲು ಸಾಧ್ಯವಿಲ್ಲ. ಹಾಗೆಯೇ ಮಾನವನಲ್ಲಿ ಮಹಾದೇವನಿರುವುದು ಸತ್ಯ. ಮಹಾತ್ಮ ಬಸವಣ್ಣನವರು ಅಂತರಂಗ ಮತ್ತು ಬಹಿರಂಗದ ಕಲ್ಪನೆಯನ್ನು ತಂದು ಕೊಡುವುದರ ಸಲುವಾಗಿ ಒಂದು ಲೌಕಿಕ ಉದಾಹರಣೆಯನ್ನು ಕೊಟ್ಟು ಸುಂದರವಾದ ವಚನದ ಮೂಲಕ ತಿಳಿಸಿದ್ದಾರೆ. ಅಂತರಂಗ, ಬಹಿರಂಗ ಎರಡು ಶುದ್ಧವಾಗಿದ್ದರೆ ಮಾತ್ರವೇ ನೆಮ್ಮದಿಯ ಬದುಕು ಸಾಧ್ಯವಾಗುತ್ತದೆ. ಅದಕ್ಕೆ ಉದಾಹರಣೆಯಾಗಿ ಬಸವಣ್ಣನವರು ಮನೆಯನ್ನು ಬಳಸಿಕೊಂಡಿದ್ದಾರೆ.
ಮನೆಯೊಳಗೆ ಮನೆಯ ಯಜಮಾನ ಇದ್ದಾನೆ ಇಲ್ಲವೋ ಅನ್ನುವುದು ಹೂರಗಿನಿಂದಲೇ ಗೊತ್ತಾಗುತ್ತದೆ. ಶರಣರು ಭಕ್ತನ ಮನೆಯ ಅಂಗಳವೇ ಕೈಲಾಸ ಎನ್ನುವ ಮಾತನ್ನು ಬಹಳ ಸಂತೋಷದಿಂದ ಹೇಳಿದ್ದಾರೆ. ಹಾಗಿದ್ದ ಮೇಲೆ ಮನೆಯ ಮುಂದೆ ಕಸ ಕಡ್ಡಿ ದೂಳು ತುಂಬಿದ ಮನೆ ಇದ್ದಾಗ ಅಲ್ಲಿ ಯಜಮಾನ ಇಲ್ಲ ಎನ್ನುವುದು ಗೊತ್ತಾಗುತ್ತದೆ. ಹಾಗೆಯೇ ಅಂತರಂಗದ ಬಗ್ಗೆಯೂ ಅರಿವು ಮೂಡಿಸಿದ್ದಾರೆ. ಮನಸ್ಸಿನಲ್ಲಿ ಕೆಟ್ಟ ವಾಸನೆ, ಆಸೆ, ದ್ವೇಷ, ದುಷ್ಟ ಸ್ವಭಾವಗಳು ಇದ್ದಾಗ ಆ ವ್ಯಕ್ತಿಯು ಒಳ್ಳೆಯವನಾಗಲು ಹೇಗೆ ಸಾಧ್ಯ? ಹೆಂಡದ ಮಡಿಕೆಯನ್ನು ಹೊರಗೆ ತೊಳೆದರೆ ಹೇಗೆ?
ಭಗವಂತನ ವಾಸಸ್ಥಾನವು ಶಿವಭಕ್ತನ ಕಾಯವೇ ಶಿವನ ಕಾಯ. ಶಿವನ ಕಾಯವೇ ಭಕ್ತನ ಕಾಯ. ಶಿವ ಶಿವ ಭಕ್ತ ಬೇರೆ. ಶಿವ ಬೇರೆ ಒಂದೇ ಕಾಣಿರಣ್ಣಾ ಅದೆಂತೆಂದೊಡೆ ಭಕ್ತ ದೇಹಿಕ ದೇವ, ದೇವ ದೈಹಿಕ ಭಕ್ತನೆಂದು ಶ್ರುತಿಗಳು ಹೊಗಳುವ ಕಾರಣ ಭಕ್ತರಿಗೂ ದೇವರಿಗೂ ಕಾಯವೊಂದೇ ಪ್ರಾಣ ಒಂದೇ ಎರಡೆಂಬ ಪರಿಭಾಷೆಯ ನುಡಿಯಲಾಗದು.
ಶಿವಭಕ್ತರಾದವರು ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರ. ಒಂದನ್ನು ಬಿಟ್ಟು ಮತ್ತೊಂದಿಲ್ಲ. ದೇಹಬಿಟ್ಟು ದೇವರಿಲ್ಲ. ದೇವರನ್ನು ಬಿಟ್ಟು ದೇಹವಿಲ್ಲ. ಆದ್ದರಿಂದ ಅಂತರಂಗ ಬಹಿರಂಗ ಶುದ್ಧವಾಗಿದ್ದರೆ ಅಲ್ಲಿ ದೇವರಿದ್ದಾನೆ ಎನ್ನುವುದು ಅಣ್ಣ ಬಸವಣ್ಣನವರ ಭಾವ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.