Varamahalakshmi Festival 2025: ಮಹಿಳೆಯರಿಗೆ ಲಕ್ಷ್ಮೀ ವ್ರತ ಎಂದರೆ ಸಡಗರ ಸಂಭ್ರಮ. ಅದು ಸಮೃದ್ಧಿ ಮತ್ತು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯನ್ನು ಪೂಜಿಸುವ ಹಬ್ಬವೆಂದು ಹೇಳಲಾಗಿದೆ. ಈ ಹಬ್ಬವನ್ನು ಮುಖ್ಯವಾಗಿ ವಿವಾಹಿತ ಮಹಿಳೆಯರು ತಮ್ಮ ಕುಟುಂಬದ ಯೋಗಕ್ಷೇಮಕ್ಕಾಗಿ ಆಚರಿಸುತ್ತಾರೆ. ಲಕ್ಷ್ಮೀದೇವಿಯ ವರಲಕ್ಷ್ಮಿ ರೂಪವನ್ನು ಪೂಜಿಸುವುದರಿಂದ ತನ್ನ ಭಕ್ತರ ಎಲ್ಲಾ ಆಸೆಗಳನ್ನು ಪೂರೈಸುತ್ತಾಳೆ ಎಂಬುವುದು ನಂಬಿಕೆಯಾಗಿದೆ.
ಲಕ್ಷ್ಮೀ ಹಬ್ಬದಂದು ಮಹಿಳೆಯರು ಪಾಲಿಸಲೇಬೇಕಾದ ಮುಖ್ಯ ಕ್ರಮಗಳ ಬಗ್ಗೆ ನೋಡುವುದಾದರೆ...
ಹಬ್ಬದ ದಿನದಿಂದು ಮಹಿಳೆಯರು ಬೇಗನೆ ಎದ್ದು ಸ್ನಾನ ಇತ್ಯಾದಿ ಕರ್ಮಗಳನ್ನು ಮುಗಿಸಿದ ನಂತರ, ಉಪವಾಸ ವ್ರತವನ್ನು ಮಾಡಿ ಸಣ್ಣ ಉಕ್ಕಿನ ಬಿಂದಿಗೆ ಅಥವಾ ಬೆಳ್ಳಿ ಚೆಂಬನ್ನು ಕಲಶದ ರೂಪದಲ್ಲಿ ಇಟ್ಟು ಅದರಲ್ಲಿ ನೀರನ್ನು ತುಂಬಿಸಿ, ಬಳಿಕ ಆ ಚೊಂಬಿಗೆ ಸ್ವಲ್ಪ ಖರ್ಜೂರ ಹಾಗೂ ದ್ರಾಕ್ಷಿಯನ್ನು ಹಾಕಿದ ನಂತರ ತಟ್ಟೆಯಲ್ಲಿ ಅಕ್ಕಿಯನ್ನು ಹರಡಿ ಅದರಲ್ಲಿ ಕಲಶವನ್ನು ಇಟ್ಟು. ಮಾವಿನ ಎಲೆ ಹಾಗೂ ವೀಳ್ಯದೆಲೆಯನ್ನು ಕಲಶ ಸುತ್ತ ಜೋಡಿಸಿ, ಅದರ ಮೇಲೆ ಅರಶಿಣ ಹಚ್ಚಿದ ತೆಂಗಿನ ಕಾಯಿಯನ್ನು ಇಟ್ಟು ಅದಕ್ಕೆ ಸೀರೆಯನ್ನು ಉಡಿಸಿ ಒಡವೆಗಳನ್ನು ಹಾಕಿ ಅಲಂಕರಿಸಿ ಇಡಿ.
ಕೈ ಕಂಕಣ ವಿಶೇಷತೆ
ಕೈ ಕಂಕಣವು ಮಂಗಳಕರ ಮತ್ತು ಪವಿತ್ರ ಸಂಕೇತ ಹಾಗೂ ಇದು ಪೂಜೆಯ ಒಂದು ಪ್ರಮುಖ ಭಾಗವಾಗಿದೆ. ಇದನ್ನು ಸಾಮಾನ್ಯವಾಗಿ ಅರಶಿಣ ಬಣ್ಣದ ದಾರದಿಂದ ತಯಾರಿಸಿ ಕೈ ಕಂಕಣವಾಗಿ ಕಟ್ಟಿಕೊಳ್ಳಲಾಗುತ್ತದೆ.
ದೇವರಿಗೆ ಪೂಜೆ ಸಲ್ಲಿಸುವ ಮುನ್ನ ಕೈಗೆ ಕಂಕಣ ಕಟ್ಟಿಕೊಂಡು ತಾಯಿ ಲಕ್ಷ್ಮೀಗೆ ಪೂಜೆ ಮಾಡುವುದು ಪದ್ಧತಿಯಾಗಿದೆ.
ಸಂಜೆಯ ಸಮಯದಲ್ಲಿ ದೇವಿಗೆ ಆರತಿಯನ್ನು ಮಾಡಿ, ಮರುದಿನ ಕಲಶದ ನೀರನ್ನು ಮನೆಯ ಸುತ್ತಲೂ ಚುಮುಕಿಸಬೇಕು. ಬಳಿಕ ಕಲಶದಲ್ಲಿದ್ದ ಅಕ್ಕಿ ಕಾಳುಗಳನ್ನು ಬಿಸಾಡದೆ ಆ ಅಕ್ಕಿಕಾಳುಗಳಿಂದ ಸಿಹಿಯನ್ನು ತಯಾರಿಸಿ ಮನೆಯ ಸದಸ್ಯರಿಗೆಲ್ಲ ಹಂಚುವುದರಿಂದ ಶ್ರೇಯಸ್ಸು ಎಂದು ಹೇಳುತ್ತಾರೆ ಹಿರಿಯರು.
ಹಬ್ಬ ಎಂದರೆ ನೈವೇದ್ಯ ಇಟ್ಟು ಪೂಜೆ ಸಲ್ಲಿಸಿದರೆ ಅದು ಪರಿಪೂರ್ಣ ಎನಿಸಿಕೊಳ್ಳುವುದು.
ವರಲಕ್ಷ್ಮೀ ಹಬ್ಬಕ್ಕೆ ನೈವೇದ್ಯ ತಯಾರಿಸುವ ವಿಧಾನ
ದೇವಿಗೆ ಕಡಲೆಬೇಳೆ ಎಂದರೆ ಅಚ್ಚು ಮೆಚ್ಚು. ಆದ್ದರಿಂದ ಹಬ್ಬದ ದಿನ ಕಡಲೆಬೇಳೆಯಿಂದ ತಯಾರಿಸಿದ ಪಾಯಸ ಹೋಳಿಗೆ ಇತ್ಯಾದಿ ಸಿಹಿತಿನಿಸುಗಳನ್ನು ನೈವೇದ್ಯವಾಗಿ ಅರ್ಪಿಸಬಹುದು.
ಪೂಜೆ ಮಾಡುವ ವಿಧಾನ: ವ್ರತದ ನಿಯಮದ ಪ್ರಕಾರ ಪೂಜೆಯ ಸಿದ್ಧತೆಗಳೆಲ್ಲ ಆದ ನಂತರ ಮೊದಲು ವಿಘ್ನ ನಿವಾರಕ ಗಣಪತಿಯನ್ನು ಪೂಜಿಸಿ, ನಂತರ ವರಲಕ್ಷ್ಮಿಗೆ ಓಂ ಹೀಂ ಶ್ರೀ ಲಕ್ಷ್ಮೀಭ್ಯೋ ನಮಃ ಈ ಮಂತ್ರವನ್ನು 21 ಬಾರಿ ಪಠಿಸುವ ಮೂಲಕ ದೇವಿಗೆ ಪೂಜೆ ಸಲ್ಲಿಸಿ.
ಮನೆಗೆ ಮುತ್ತೈದೆಯರನ್ನು ಕರೆದು ಅರಶಿನ ಕುಂಕುಮ ಸಿಹಿ ಹಂಚುವುದರಿಂದ ಹಬ್ಬವನ್ನು ಇನ್ನಷ್ಟು ಸಂಭ್ರಮದಿಂದ ಆಚರಿಸಲು ಸಹಕಾರಿಯಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.