ADVERTISEMENT

ವೇದವ್ಯಾಸರ ಶಿವಪುರಾಣಸಾರ: ಶಿವೆಯ ತಪೋತಾಪಕ್ಕೆ ವಿಶ್ವ ತಲ್ಲಣ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 16 ಸೆಪ್ಟೆಂಬರ್ 2022, 19:30 IST
Last Updated 16 ಸೆಪ್ಟೆಂಬರ್ 2022, 19:30 IST
   

ಪಾರ್ವತಿ ಬಹುಕಾಲ ತಪಸ್ಸು ಮಾಡಿದರೂ, ಶಿವ ಪ್ರತ್ಯಕ್ಷನಾಗಲಿಲ್ಲ. ಶಿವ ಪ್ರತ್ಯಕ್ಷಾನಾಗುವವರೆಗೂ ತಪಸ್ಸನ್ನು ನಿಲ್ಲಿಸಲೇಬಾರದೆಂದು ದೃಢನಿಶ್ಚಯಮಾಡಿದ್ದ ಪಾರ್ವತಿ, ದಿನದಿಂದ ದಿನಕ್ಕೆ ತಪಸ್ಸು ಕಠಿಣಗೊಳಿಸುತ್ತಿದ್ದಳು. ಹೀಗಿರಲೊಂದು ದಿನ ಹಿಮವಂತ ಬಂದು ‘ಮಗಳೇ ಪಾರ್ವತಿ, ರುದ್ರ ವಿರಕ್ತನಾದವ. ಆತ ಸ್ತ್ರೀಯರಲ್ಲಿ ಆಸಕ್ತಿಯಿಲ್ಲದ ಯೋಗಿ. ಅದೀಗ ನಿನ್ನ ಘನಘೋರ ತಪಸ್ಸಿನ ನಂತರ ನಿಜವಾಗಿದೆ. ನೀನು ಇಷ್ಟೊಂದು ಕಠಿಣ ತಪಸ್ಸು ಮಾಡಿದರೂ ಆತ ಪ್ರತ್ಯಕ್ಷನಾಗಲಿಲ್ಲವೆಂದರೆ, ಈ ತಪಸ್ಸು ಮುಂದುವರೆಸುವುದರಲ್ಲಿ ಅರ್ಥ ಇಲ್ಲ. ನಿನ್ನ ಶರೀರವು ಕೋಮಲವಾದುದು. ಕಾಯಕ್ಲೇಶಗಳನ್ನು ಸಹಿಸಿ ಮಾಡಬೇಕಾದ ಈ ತಪಸ್ಸು ನಿನಗೆ ಯೋಗ್ಯವಲ್ಲ. ಆದುದರಿಂದ ಗಿರಿಜೆ, ಏಳು ಮನೆಗೆ ಹೋಗೋಣ. ರುದ್ರನು ಮಹಾವಿರಕ್ತನಾಗಿದ್ದರಿಂದಲೇ ಕಾಮವಿಕಾರಕ್ಕೊಳಗಾಗದೆ ಮನ್ಮಥನನ್ನು ಭಸ್ಮಮಾಡಿದ. ಇಂಥವನನ್ನು ಪತಿಯಾಗೆಂದು ಏಕೆ ಪ್ರಾರ್ಥಿಸುವೆ? ಆಕಾಶದಲ್ಲಿರುವ ಚಂದ್ರನನ್ನು ಹಿಡಿಯಲು ಹೇಗೆ ಸಾಧ್ಯವಿಲ್ಲವೊ, ಅದರಂತೆ ಶಂಕರನನ್ನು ಪಡೆಯಲು ಸಾಧ್ಯವಿಲ್ಲ’ ಎಂದ.

ಇದೇ ರೀತಿಯಲ್ಲಿ ತಾಯಿ ಮೇನಾದೇವಿ, ನೂರು ಸೋದರರಲ್ಲಿ ಶ್ರೇಷ್ಠನಾದ ಅಣ್ಣ ಮೈನಾಕ, ಬಂಧುಗಳಾದ ಸಹ್ಯಾದ್ರಿ, ಮೇರುಗಿರಿ, ಮಂದಾರಗಿರಿ, ಕ್ರೌಂಚಗಿರಿ ಮುಂತಾದವರು ಯುಕ್ತಿಯುಕ್ತವಾದ ಮಾತುಗಳನ್ನಾಡಿ ಗಿರಿಜೆಯನ್ನು ಮನೆಗೆ ಹಿಂತಿರುಗುವಂತೆ ಒತ್ತಾಯಿಸಿದರು.

ಎಲ್ಲರ ಹಿತವಚನಗಳನ್ನು ಕೇಳಿದ ನಂತರ ಪಾರ್ವತಿ ಹೇಳಿದಳು, ‘ಹಿಂದೆಯೇ ನಾನೊಂದು ಮಾತನ್ನು ಹೇಳಿದ್ದೆ, ಈಗಲೂ ಆ ಮಾತನ್ನೇ ಹೇಳುವೆನು ಕೇಳಿ. ಮಹಾದೇವ ಮಹಾವಿರಕ್ತ. ತನ್ನ ಮನಸ್ಸು ಬದಲಿಸಲು ಬಂದ ಮನ್ಮಥನನ್ನು ಭಸ್ಮಮಾಡಿರುವವ. ಆದರೂ ಅವನು ಭಕ್ತವತ್ಸಲ. ಅವನನ್ನು ತಪಸ್ಸಿನಿಂದ ಪ್ರಸನ್ನಗೊಳಿಸಿ, ಅವನ ಒಲವು ಗೆಲ್ಲುವೆ. ಇದರಲ್ಲಿ ನನಗೆ ಅಮಿತ ವಿಶ್ವಾಸವಿದೆ. ಆದ್ದರಿಂದ ಈಗ ನೀವೆಲ್ಲರೂ ನಿಮ್ಮ ನಿಮ್ಮ ಮನೆಗಳಿಗೆ ತೆರಳಿರಿ. ಪರಮೇಶ್ವರನು ನನ್ನ ತಪಸ್ಸಿಗೆ ಪ್ರಸನ್ನನಾಗಿಯೇ ಆಗುವನು. ಇದರಲ್ಲಿ ಮತ್ತೊಮ್ಮೆ ಯೋಚಿಸುವಂಥದ್ದೇನು ಇಲ್ಲ. ಮನ್ಮಥನನ್ನು ಭಸ್ಮಮಾಡಿದ ಶಿವನನ್ನು ಕೇವಲ ತಪಸ್ಸಿನಿಂದಲೇ ಮತ್ತೆ ಇಲ್ಲಿಗೆ ಕರೆದುಕೊಂಡು ಬರುವೆ’ ಎಂದು ಹೇಳಿದಳು.

ADVERTISEMENT

ಗಿರಿಜೆಯ ಯುಕ್ತವಾದ ಮಾತನ್ನು ಕೇಳಿ ಮೇರು ಮತ್ತು ಹಿಮಾಲಯ ಮೊದಲಾದ ಬಂಧುಗಳು ಪಾರ್ವತಿಯನ್ನು ಪ್ರಶಂಸಿಸುತ್ತಾ ಹಿಂತಿರುಗಿದರು. ನಂತರ ಗಿರಿಜೆ ಹಿಂದೆಂದಿಗಿಂತ ಘೋರವಾದ ತಪಸ್ಸನ್ನು ಸ್ಥಿರಪ್ರಜ್ಞೆಯಿಂದ ಮಾಡತೊಡಗಿದಳು. ಪಾರ್ವತಿಯ ಘೋರತಪಸ್ಸಿನಿಂದ ದೇವ, ಮನುಷ್ಯ, ದೈತ್ಯ, ಪಶು ಮುಂತಾದ ಜಗತ್ತೆಲ್ಲವೂ ತಾಪಗೊಂಡು ತಲ್ಲಣಿಸಿಹೋದವು. ಆಗ ದೇವತೆಗಳು, ಅಸುರರು, ಯಕ್ಷ, ಕಿನ್ನರ, ಚಾರಣರು, ಸಿದ್ಧರು, ಸಾಧ್ಯರು, ಮುನಿಗಳು, ವಿದ್ಯಾಧರರು, ಸರ್ಪಕುಲಗಳು, ಪ್ರಜಾಪತಿಗಳು, ಗುಹ್ಯಕರು ಮುಂತಾದವರೆಲ್ಲರೂ ತುಂಬಾ ದುಃಖಿತರಾದರು.

ಪಾರ್ವತಿಯ ತಪೋಜ್ವಾಲೆಯಿಂದ ಕಂಗಾಲಾದ ದೇವತೆಗಳೆಲ್ಲರೂ ಬೃಹಸ್ಪತಿಯೊಡನೆ ಬ್ರಹ್ಮನ ಬಳಿಗೆ ಶರಣು ಬಂದರು. ಅವರ ಮುಖವು ಚಿಂತೆಯಿಂದ ಕಾಂತಿಹೀನವಾಗಿ ಬಾಡಿಹೋಗಿತ್ತು. ಅವರೆಲ್ಲರೂ ಬ್ರಹ್ಮನನ್ನು ಸ್ತುತಿಸಿ, ‘ನಿನ್ನಿಂದ ಸೃಷ್ಟಿಯಾದ ಸ್ಥಿರಚರಾತ್ಮಕವಾದ ಜಗತ್ತು ಈಗ ತುಂಬಾ ಸಂತಪ್ತವಾಗಿದೆ. ಇದಕ್ಕೆ ಕಾರಣವೇನೆಂದು ನಮಗೆ ತಿಳಿಯದು. ಇದಕ್ಕೆ ಕಾರಣವೇನೆಂಬುದನ್ನು ಯೋಚಿಸಿ ಹೇಳು. ಸಂತಾಪಗೊಂಡಿರುವ ದೇವತೆಗಳನ್ನು ನಿನ್ನ ಹೊರತು ಇನ್ನಾರೂ ರಕ್ಷಿಸಲಾರರು’ ಎಂದು ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.