ADVERTISEMENT

ಬ್ರಹ್ಮಾಂಡಸೃಷ್ಟಿಗೆ ವಿಷ್ಣು ನೆರವು

ಭಾಗ 106

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 27 ಏಪ್ರಿಲ್ 2022, 19:30 IST
Last Updated 27 ಏಪ್ರಿಲ್ 2022, 19:30 IST
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ   

ರುದ್ರಾವತಾರ ವರ್ಣನ – ಎಂಬ ಅಧ್ಯಾಯದಲ್ಲಿ ನಾರದ ತನ್ನ ತಂದೆ ಬ್ರಹ್ಮನಿಗೆ ಲಿಂಗೋತ್ಪತ್ತಿ ನಂತರದ ಚರಿತ್ರೆಯ ಬಗ್ಗೆ ಕೇಳುತ್ತಾನೆ. ಆಗ ಬ್ರಹ್ಮನು ಶಿವಚರಿತ್ರೆಯ ಸ್ವರೂಪ ಮತ್ತು ಸೃಷ್ಟಿಯ ಕ್ರಮವನ್ನ ತಿಳಿಸುತ್ತಾನೆ.

‘ಎಲೈ ನಾರದನೇ, ಲಿಂಗೋತ್ಪತ್ತಿಯಾದನಂತರ ಶಿವಸ್ವರೂಪನೂ ಆದ್ಯಂತರಹಿತನೂ ಆದ ದೇವನು ನಮ್ಮನ್ನು ಹರಸಿ ಅಂತರ್ಧಾನನಾದ. ನಾನೂ ಮತ್ತು ವಿಷ್ಣುಲೋಕದ ಸೃಷ್ಟಿ ಮತ್ತು ಪಾಲನೆಗಳಿಗಾಗಿ ನಮ್ಮ ಹಂಸ ಮತ್ತು ವರಾಹರೂಪಗಳನ್ನು ಉಪಸಂಹಾರ ಮಾಡಿದೆವು’ ಎಂದು ಬ್ರಹ್ಮ ಹೇಳುತ್ತಾನೆ. ಆಗ ಮಧ್ಯ ಪ್ರವೇಶಿಸಿದ ನಾರದ ‘ನೀವಿಬ್ಬರು ಹಂಸ ಮತ್ತು ವರಾಹಗಳ ರೂಪವನ್ನೇ ಧರಿಸಲು ಕಾರಣವೇನು?’ ಎಂದು ಪ್ರಶ್ನಿಸುತ್ತಾನೆ.

ಆಗ ಬ್ರಹ್ಮ ‘ಎಲೈ ನಾರದ, ಹಂಸವು ನಿಶ್ಚಲವಾಗಿ ಮೇಲಗಡೆ ಹಾರುವುದು. ಅದಕ್ಕೆ ಊರ್ಧ್ವಗತಿಯಿರುವುದು. ಹಾಲು–ನೀರುಗಳನ್ನು ಬೇರೆಮಾಡುವಂತೆ ಆ ಹಂಸಕ್ಕೆ ಇದು ತತ್ವ, ಇದು ಅತತ್ವವೆಂಬ ವಿವೇಕಜ್ಞಾನವಿರುವುದು. ಅದರಂತೆ ಜ್ಞಾನ ಮತ್ತು ಅಜ್ಞಾನಗಳ ತತ್ವವನ್ನೂ ತಿಳಿಯಬಲ್ಲದು. ಈ ಎಲ್ಲಾ ಕಾರಣಗಳಿಂದ ಹಂಸವು ಉತ್ತಮವಾದ ಪಕ್ಷಿ. ಅದಕ್ಕಾಗಿಯೇ ಬ್ರಹ್ಮನಾದ ನಾನು ಹಂಸರೂಪವನ್ನು ಧರಿಸಿದೆ. ಆದರೆ ನನಗೆ ಜ್ಯೋತಿಸ್ವರೂಪವಾದ ಪರಮೇಶ್ವರತತ್ವದ ವಿವೇಕ ಮಾತ್ರ ತಿಳಿಯಲಿಲ್ಲ. ಆದುದರಿಂದ ಪ್ರಯೋಜನವಿಲ್ಲದ ಹಂಸರೂಪವನ್ನು ತ್ಯಜಿಸಿದೆ.

ADVERTISEMENT

‘ಲಿಂಗದ ಮೂಲವನ್ನು ನೋಡಲು ಭೂಮಿಯನ್ನು ಕೊರೆದುಕೊಂಡು ಹೋಗಬೇಕೆಂದು ಯೋಚಿಸಿದ ವಿಷ್ಣು ಕಾಡುವರಾಹದ ರೂಪವನ್ನು ಧರಿಸಿದ. ಅಲ್ಲದೆ, ವರಾಹರೂಪವು ಭೂಮಿಯನ್ನು ಕಲ್ಪಿಸುವುದು. ಜಗದ್ರಕ್ಷಕನಾದ ವಿಷ್ಣುವು ಜಗತ್ತನ್ನು ರಕ್ಷಿಸಲು ವರಾಹರೂಪವನ್ನು ಧರಿಸಿದ. ಹರಿಯು ವರಾಹರೂಪವನ್ನು ಧರಿಸಿದ್ದರಿಂದ ಆ ಕಲ್ಪಕ್ಕೆ ‘ವಾರಾಹಕಲ್ಪ’ವೆಂದು ಹೆಸರಾಯಿತು’ ಎಂದ ಬ್ರಹ್ಮ, ಮುಂದೆ ಸೃಷ್ಟಿಕ್ರಮವನ್ನು ಹೇಳುತ್ತಾನೆ.

‘ಲೋಕಪಿತಾಮಹನೆನಿಸಿದ ನಾನು, ಶಿವನ ಆಜ್ಞೆಯನ್ನು ಪಾಲಿಸಲು ನಿರ್ಧರಿಸಿದೆ. ಹರಿಯಿಂದ ಸೃಷ್ಟಿಸುವ ಕ್ರಮವನ್ನು ತಿಳಿದು ಸೃಷ್ಟಿಕರ್ಮವನ್ನಾರಂಭಿಸಿದೆ. ನನಗೆ ಸೃಷ್ಟಿಕ್ರಮವನ್ನು ಉಪದೇಶಿಸಿ ಅಂತರ್ಧಾನನಾದ ಹರಿಯು ವೈಕುಂಠಕ್ಕೆ ಹೋಗಿ ವಾಸಮಾಡತೊಡಗಿದ. ಸೃಷ್ಟಿಕಾರ್ಯ ಆರಂಭಿಸಲು ನಾನು ಹಿಂದೆ ಸೃಷ್ಟಿಸಿದ ಜಲರಾಶಿಯಲ್ಲಿ ಅಂಜಲಿಯ(ವೀರ್ಯ)ನ್ನು ಹಾಕಿದೆ. ಅದರಿಂದ ‘ಚತುರ್ವಿಂಶತಿ’ ಎಂಬ ಸಂಜ್ಞೆಯುಳ್ಳ ವಿರಾಟ್‍ರೂಪವೆಂದು ಪ್ರಸಿದ್ಧವಾದ ಜ(ಡ)ಲ ರೂಪದ ಗೋಳವಾಯಿತು. ಆಗ ನನಗೆ ಮುಂದೆ ಏನು ಮಾಡಬೇಕೆಂದು ತೋಚದೆ ವಿಷ್ಣುವನ್ನು ಧ್ಯಾನಿಸುತ್ತಾ, ಹನ್ನೆರಡು ವರ್ಷಗಳ ಪರ್ಯಂತ ಘೋರವಾದ ತಪಸ್ಸನ್ನಾಚರಿಸಿದೆ.

‘ವಿಷ್ಣುವು ನನ್ನ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದ. ಆಗ ನಾನು ‘ಓ ವಿಷ್ಣುವೇ, ಚತುರ್ವಿಂಶತಿ ಸಂಜ್ಞವಾದ ಈ ವಿರಾಡ್ರೂಪದ ಗೋಳವು ಚೈತನ್ಯವುಳ್ಳದ್ದಾಗಿಲ್ಲ, ಜಡವಾಗಿದೆ. ಶಿವನ ಅನುಗ್ರಹದಿಂದ ಆವಿರ್ಭವಿಸಿದ ನೀನು, ಈ ಅಂಡವನ್ನು ಪ್ರವೇಶಿಸಿ ಗೋಳಕ್ಕೆ ಚೈತನ್ಯ ನೀಡು’ ಎಂದು ಕೋರಿದೆ. ಅದರಂತೆ ಹರಿಯು ಮಹಾರೂಪವನ್ನು ಧರಿಸಿ ಆ ಅಂಡವನ್ನು ಪ್ರವೇಶಿಸಿದ. ಸಾವಿರಾರು ತಲೆಗಳುಳ್ಳ, ಸಾವಿರಾರು ಕಣ್ಣುಗಳುಳ್ಳ, ಸಾವಿರಾರು ಕಾಲುಗಳುಳ್ಳ ವಿರಾಡ್ರೂಪವನ್ನು ಧರಿಸಿದ್ದ ವಿಷ್ಣು, ಅಂಡವನ್ನು ಸಂಪೂರ್ಣವಾಗಿ ವ್ಯಾಪಿಸಿದ. ಇದರಿಂದ ‘ಚತುರ್ವಿಂಶತಿ’ ಎಂದು ಹೆಸರುಳ್ಳ ಆ ಅಂಡವು ಸಚೇತನವಾಯಿತು. ಅಂಡದಲ್ಲಿ ಹರಿಯು ಪಾತಾಳ ಮೊದಲುಗೊಂಡು ಏಳು ಲೋಕಗಳಿಗೆ ಅಧಿಪತಿಯಾಗಿ ವಿರಾಟ ಪುರುಷರೂಪದಿಂದ ಪ್ರಕಾಶಿಸಿದ. ಎಲ್ಲ ಲೋಕಗಳಿಗೂ ಮೇಲ್ಭಾಗದಲ್ಲಿ ಕೈಲಾಸವೆಂಬ ಸುಂದರವಾದ ನಗರವನ್ನು ಶಂಕರನು ತನ್ನ ವಾಸಕ್ಕಾಗಿ ಕಲ್ಪಿಸಿಕೊಂಡ. ನಾನು ಸೃಷ್ಟಿಸಿದ ಬ್ರಹ್ಮಾಂಡವೆಲ್ಲ ನಾಶವಾದರೂ, ವಿಷ್ಣು-ಪರಮೇಶ್ವರ ವಾಸಿಸುವ ವೈಕುಂಠ-ಕೈಲಾಸಲೋಕಗಳಿಗೆ ಮಾತ್ರ ನಾಶವಿಲ್ಲ. ಅಂಥ ಚಿರಾವಸ್ಥೆ ಆ ಎರಡು ಲೋಕಗಳಿಗಿವೆ.

‘ಏಳು ಲೋಕಗಳು ಸೃಷ್ಟಿಯಾದ ನಂತರ ನನ್ನಿಂದ ಅಂಧಕಾರ ಸದೃಶವಾದ ಮತ್ತು ಪಾಪವನ್ನು ಬೆಳೆಸುವಂತಹ ಅವಿದ್ಯಾ, ಅಸ್ಮಿತ, ರಾಗ, ದ್ವೇಷ, ಮೋಹ ಎಂಬ ಐದು ವಸ್ತುಗಳು ಜನಿಸಿದುವು. ಅವುಗಳಿಂದ ಸ್ಥಾವರ ಸೃಷ್ಟಿಸಿದೆ. ಅಂದರೆ ಅಚಲವಾದ ಪರ್ವತ ಮೊದಲಾದ ಸುಖದುಃಖಾದಿಗಳನ್ನು ತಿಳಿಯಲಾರದ ಜಡವಸ್ತುಗಳು’ ಎಂದು ಸ್ಪಷ್ಟಪಡಿಸುತ್ತಾನೆ ಬ್ರಹ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.