
ಯಡತೊರೆ ಯೋಗಾನಂದೇಶ್ವರ ಸರಸ್ವತೀ ಮಠದ ವೇದಾಂತಭಾರತೀಯಿಂದ ‘ವಿವೇಕದೀಪ್ತಿ’ ದಕ್ಷಿಣಾಮೂರ್ತ್ಯಷ್ಟಕ ಮಹಾಸಮರ್ಪಣೆ ಹಾಗೂ ‘ದಕ್ಷಿಣಾಸ್ಯದರ್ಶಿನೀ’ ಕಾರ್ಯಕ್ರಮ ನಡೆಯಲಿದೆ.
ದಕ್ಷಿಣಾಸ್ಯದರ್ಶಿನೀ ಕಾರ್ಯಕ್ರಮ ಜನವರಿ 29ರಿಂದ ಫೆ.1ರ ವರೆಗೆ ನಡೆಯಲಿದೆ. ದಕ್ಷಿಣಾಮೂರ್ತ್ಯಷ್ಟಕ ಮಹಾಸಮರ್ಪಣೆ ಜನವರಿ 31ರಂದು ಬೆಂಗಳೂರು ಅರಮನೆ ಮೈದಾನದ 'ಕೃಷ್ಣವಿಹಾರ'ದಲ್ಲಿ ಹಮ್ಮಿಕೊಳ್ಳಲಾಗಿದೆ.
ಜಗದ್ಗುರು ಶಂಕರಾಚಾರ್ಯ ಭಾರತೀತೀರ್ಥ ಮಹಾಸ್ವಾಮಿಯವರ ದಿವ್ಯಾನುಗ್ರಹದೊಂದಿಗೆ ತತ್ಕರಕಮಲಸಂಜಾತರಾದ ಜಗದ್ಗುರು ಶಂಕರಾಚಾರ್ಯ ವಿಧುಶೇಖರಭಾರತೀ ಸ್ವಾಮಿಜಿಯವರ ದಿವ್ಯ ಸಾನ್ನಿಧ್ಯ ಈ ಕಾರ್ಯಕ್ರಮಕ್ಕೆ ಇರಲಿದ್ದು, ಯಡತೊರೆ ಶ್ರೀಗಳಾದ ಶಂಕರಭಾರತೀ ಮಹಾಸ್ವಾಮೀಜಿ ಹಾಗೂ ತತ್ಕರಕಮಲಸಂಜಾತರಾದ ಬ್ರಹ್ಮಾನಂದಭಾರತೀ ಸ್ವಾಮೀಜಿ ಉಪಸ್ಥಿತರಿರಲಿದ್ದಾರೆ. ಈ ಪ್ರಯುಕ್ತ ವೇದಾಂತಭಾರತೀಯ ಪರಿಚಯ ಇಲ್ಲಿದೆ.
ಜಗದ್ಗುರು ಶ್ರೀ ಶಂಕರಭಗವತ್ಪಾದರು ಉಪನಿಷತ್ ಪ್ರತಿಪಾದ್ಯವಾದ ಅದ್ವೈತಸಿದ್ಧಾಂತದ ತಳಹದಿಯ ಮೇಲೆ ಸನಾತನ ಧರ್ಮದ ಪುನಃಪ್ರತಿಷ್ಠಾಪನೆಯನ್ನು ಮಾಡಿದರು. ಭಾರತೀಯ ಜ್ಞಾನಪರಂಪರೆಯನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ಹಾಗೂ ಕಾಲಕಾಲಕ್ಕೆ ಇದರ ಮೌಲ್ಯವನ್ನು ಸಮಾಜಕ್ಕೆ ತಿಳಿಸಿ ಉತ್ತಮ ಸಮಾಜ ಸದಾ ಇರುವಂತೆ ನೋಡಿಕೊಳ್ಳುವ ದೃಷ್ಟಿಯಿಂದ ಮಠ ಪರಂಪರೆಯನ್ನು ಪ್ರಾರಂಭಿಸಿದರು.
ಹೀಗೆ ಸ್ಥಾಪಿತವಾದ ಅದ್ವೈತಪರಂಪರೆಯ ಮಠಗಳಲ್ಲಿ ಸುಮಾರು ಎಂಟುನೂರು ವರ್ಷಗಳ ಇತಿಹಾಸ ಇರುವ ಕಾವೇರಿತೀರದ ಕೃಷ್ಣರಾಜನಗರದ ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠದಲ್ಲಿ ಇಂದಿನವರೆಗೂ ಅನೇಕ ಯತಿವರೇಣ್ಯರು ಸನಾತನ ಧರ್ಮದ ಪೋಷಣೆಯ ಕಾರ್ಯವನ್ನು ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತ ಬಂದಿದ್ದಾರೆ. ಗ್ರಂಥರಚನೆ, ಸಾಮಾಜಿಕ ಕಾರ್ಯಗಳು, ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುವುದರೊಂದಿಗೆ ಮುಖ್ಯವಾಗಿ ಸಮಾಜಕ್ಕೆ ನೀಡಬೇಕಾದ ಆಧ್ಯಾತ್ಮಿಕ ಜ್ಞಾನವನ್ನು ಕಾಲಕಾಲಕ್ಕೆ ನೀಡುತ್ತ ಬಂದಿದ್ದಾರೆ.
ಈ ಹಿಂದಿನ ಎಲ್ಲ ಮಠಾಧೀಶರು ಹಾಕಿಕೊಟ್ಟ ಸಂಪ್ರದಾಯದಂತೆ ಮಠದ ಎಲ್ಲ ಧಾರ್ಮಿಕ ಆಚರಣೆಗಳನ್ನು ಮಾಡುತ್ತ, ಜೊತೆಜೊತೆಗೆ 1999ರಲ್ಲಿ ವೇದಾಂತಭಾರತೀ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಕಳೆದ 25ಕ್ಕೂ ಹೆಚ್ಚು ವರ್ಷಗಳಿಂದ ಆಧ್ಯಾತ್ಮಿಕ ವಿಚಾರವನ್ನು ಸಮಾಜಕ್ಕೆ ವ್ಯಾಪಕವಾಗಿ ತಲುಪಿಸುವ ಕಾರ್ಯವನ್ನು ಮಾಡಲಾಗುತ್ತಿದೆ.
ದಕ್ಷಿಣಾಮ್ನಾಯ ಶೃಂಗೇರಿ ಶಾರದಾಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರ ಮಹಾಸಂರಕ್ಷಕತ್ವದಲ್ಲಿ ಈಗಿನ ಪೀಠಾಧಿಪತಿಗಳಾದ ಶ್ರೀ ಶಂಕರಭಾರತೀ ಮಹಾಸ್ವಾಮಿಗಳವರ ಸಂರಕ್ಷಕತ್ತ್ವದಲ್ಲಿ ವೇದಾಂತಭಾರತೀ ಸಂಸ್ಥೆಯು ಸ್ಥಾಪಿತವಾಗಿದ್ದು ತನ್ಮೂಲಕ ದೇಶವ್ಯಾಪಿಯಾಗಿ ಶ್ರೀ ಶಂಕರಾಚಾರ್ಯರ ತತ್ತ್ವೋಪದೇಶಗಳನ್ನು ಜನಮನಕ್ಕೆ ತಲುಪಿಸುವ, ಆ ಮೂಲಕ ರಾಷ್ಟ್ರಿಯ ಭಾವೈಕ್ಯವನ್ನು ಮೂಡಿಸುವಂತಹ ಅನೇಕ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡುಬರಲಾಗುತ್ತಿದೆ.
ಹಿರಿಯ ನ್ಯಾಯವಾದಿಗಳು, ನಿವೃತ್ತ ಐಎಎಸ್. ಅಧಿಕಾರಿಗಳು, ಹಿರಿಯ ವೈದ್ಯರು, ಲೆಕ್ಕಪರಿಶೋಧಕರು, ಉದ್ಯಮಿಗಳು ಮುಂತಾದ ಸುಮಾರು ಹನ್ನೊಂದು ಜನ ಮಹನೀಯರು ವೇದಾಂತಭಾರತಿಯ ವಿಶ್ವಸ್ತರಾಗಿ ಸಂಸ್ಥೆಯ ಎಲ್ಲ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಹಕಾರ ಹಾಗೂ ಮಾರ್ಗದರ್ಶನ ನೀಡುತ್ತಿದ್ದಾರೆ. ಜೊತೆಗೆ ಸಾವಿರಾರು ಸಂಖ್ಯೆಯಲ್ಲಿ ಮಾತೆಯರು, ಪುರುಷರು, ಯುವಕರು ಕಾರ್ಯಕರ್ತರಾಗಿ ಎಲ್ಲ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಬಂದಿದ್ದಾರೆ.
ಭಾರತೀಯ ತತ್ತ್ವಶಾಸ್ತ್ರದ ಕುರಿತಾದ ಅಧ್ಯಯನ ಹಾಗೂ ಸಂಶೋಧನೆ, ವೇದಾಂತಕ್ಕೆ ಸಂಬಂಧಪಟ್ಟ ಗ್ರಂಥಗಳ ಪ್ರಕಾಶನ, ಭಾಷಾನುವಾದ, ಪ್ರಾಚೀನ ಶಾಸ್ತ್ರಗಳ ರಕ್ಷಣೆಗಾಗಿ ವಿದ್ವತ್‌ಗೋಷ್ಟಿ ಹಾಗೂ ರಾಷ್ಟ್ರಮಟ್ಟದ ವಿಚಾರಸಂಕಿರಣಗಳನ್ನು ನಿರಂತರವಾಗಿ ಹಮ್ಮಿಕೊಂಡು ಬರಲಾಗುತ್ತಿದೆ.
ಸಮಾಜಮುಖಿ ಅಭಿಯಾನದ ಭಾಗವಾಗಿ ಪ್ರಾರಂಭದಲ್ಲಿ ಶಂಕರಾಚಾರ್ಯರ ಉಪದೇಶಗಳನ್ನು ಸಮಾಜಕ್ಕೆ ತಲುಪಿಸಿ ಏಕಾತ್ಮಭಾವವನ್ನು ಉಂಟುಮಾಡುವ ದೃಷ್ಟಿಯಿಂದ ಶ್ರೀ ಶಂಕರಾಚಾರ್ಯರ ಉಪದೇಶ ಹಾಗೂ ಅವರು ರಚಿಸಿದ ಸ್ತೋತ್ರಗಳನ್ನು ಆಧರಿಸಿ ಉಪನ್ಯಾಸ ಸಪ್ತಾಹವನ್ನು ರಾಜ್ಯಾದ್ಯಂತ ಆಯೋಜಿಸಲಾಯಿತು. ಶೃಂಗೇರಿಯಲ್ಲಿ ಬೃಹತ್ ಸಮಾವೇಶದೊಂದಿಗೆ ಇದರ ಸಮಾರೋಪವನ್ನು ಸಹ ನೆರವೇರಿಸಲಾಯಿತು.
ಜನಸಾಮಾನ್ಯರು ಈ ಉಪದೇಶಗಳನ್ನು ಕೇಳುವುದಕ್ಕಿಂತ ಇವುಗಳನ್ನು ಆಚರಣೆಯಲ್ಲಿ ಇಟ್ಟುಕೊಂಡರೆ ಹೆಚ್ಚುಪರಿಣಾಮ ಎನ್ನುವ ಉದ್ದೇಶದಿಂದ ಶಂಕರಾಚಾರ್ಯ ವಿರಚಿತ ಸ್ತೋತ್ರಗಳನ್ನು ಸಮಾಜಕ್ಕೆ ಅಭ್ಯಾಸ ಮಾಡಿಸುವ ಸ್ತೋತ್ರಪಠನ ಮಹಾಭಿಯಾನಗಳನ್ನು ಹಮ್ಮಿಕೊಳ್ಳಲಾಯಿತು. ಪ್ರಾರಂಭದಲ್ಲಿ ಶಾರದಾಭುಜಂಗ, ಶಿವಾನಂದಲಹರೀ ಮುಂತಾದ ಸ್ತೋತ್ರಗಳನ್ನು ಹೇಳಿಕೊಟ್ಟುದ್ದು, 2007ರಲ್ಲಿ ಒಂದುಲಕ್ಷಕ್ಕಿಂತ ಹೆಚ್ಚು ಜನರಿಗೆ ಸೌಂದರ್ಯಲಹರಿಯನ್ನು ಹೇಳಿಕೊಟ್ಟು ಬೆಂಗಳೂರಿನ ಅರಮನೆ ಮೈದಾನದಲ್ಲಿ ಲಕ್ಷಾಂತರ ಜನರ ಸಮಾವೇಶವನ್ನು ಮಾಡಿ ಏಕಕಂಠದಲ್ಲಿ ಸ್ತೋತ್ರಸಮರ್ಪಣಾಕಾರ್ಯಕ್ರಮವನ್ನು ನೆರವೆರಿಸಲಾಯಿತು. ಇದರ ಪರಿಣಾಮವಾಗಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಹಾಗೂ ಬೇರೆ ರಾಜ್ಯಗಳಲ್ಲಿಯೂ ಈ ಸ್ತೋತ್ರಗಳ ಅಭ್ಯಾಸ ಪಾರಾಯಣ ಪ್ರಾರಂಭವಾಯಿತು.
ಇದಾದ ನಂತರ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕಾಗಿ ಪ್ರಶ್ನೋತ್ತರರತ್ನಮಾಲಿಕಾ ಗ್ರಂಥದ ಸಂಗ್ರಹವಾದ ವಿವೇಕದೀಪಿನೀ ಎನ್ನುವ ಗ್ರಂಥವನ್ನು ಬೋಧಿಸಿ ಲಕ್ಷಾಂತರ ವಿದ್ಯಾರ್ಥಿಗಳ ಐತಿಹಾಸಿಕ ಸಮಾವೇಶವನ್ನು ನೆರವೇರಿಸಲಾಯಿತು.
ಇಂತಹ ಕಾರ್ಯಗಳಿಂದ ವಿದ್ಯಾರ್ಥಿಗಳ ಹಾಗೂ ಹಿರಿಯರ ಮೇಲೆ ಆಗುತ್ತಿರುವ ಪರಿಣಾಮವನ್ನು ಗಮನಿಸಿ ಇಂದಿನ ಯುವ ಸಮಾಜಕ್ಕೆ ಮಾರ್ಗದರ್ಶನ ಹಾಗೂ ವಿಶೇಷವಾದ ಬೆಳಕನ್ನು ನೀಡುವ ಸಲುವಾಗಿ ದಕ್ಷಿಣಾಮೂರ್ತಿ ಸ್ತೋತ್ರವನ್ನು ಆಯ್ಕೆಮಾಡಿ ಇದನ್ನು ಯುವಜನತೆಗೆ ಬೋಧಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ.
ವಿಳಾಸ:
ವೇದಾಂತಭಾರತೀ
ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠ
ಚಂದ್ರಮೌಳಿ ರಸ್ತೆ, ಕೃಷ್ಣರಾಜನಗರ, ಮೈಸೂರು ಜಿಲ್ಲೆ-571602
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.