ರಾಯಚೂರು: ರಾಯಚೂರು ತಾಲ್ಲೂಕು ಅರಷಿಣಗಿ ಗ್ರಾಮದಲ್ಲಿ ಮಂಗಳವಾರ ಸಂಜೆ ಭಾರಿ ಗಾಳಿ ಬೀಸಿದ್ದರಿಂದ ಗುಡಿಸಲು, ಸಣ್ಣಪುಟ್ಟ ಮನೆ ಸೇರಿ ಸುಮಾರು 70ಕ್ಕೂ ಹೆಚ್ಚು ಮನೆಗಳು ನೆಲಕ್ಕುರುಳಿವೆ.
ಗ್ರಾಮದಲ್ಲಿನ ಸುಮಾರು 12ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಬಿದ್ದಿವೆ. ಸಂಜೆ ಗಾಳಿ ಬೀಸಿ ಮನೆ ಬಿದ್ದ ಸಂದರ್ಭದಲ್ಲಿ ಗ್ರಾಮದ ಮೂರ‌್ನಾಲ್ಕು ಜನರಿಗೆ ಗಾಯಗಳಾಗಿವೆ. ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗಿನವರೆಗೂ ಕತ್ತಲೆಯಲ್ಲೇ ಇಡೀ ಗ್ರಾಮದ ಜನತೆ ಜೀವನ ಕಳೆದರು.
ಬಿದ್ದ ಮನೆಗಳಲ್ಲಿನ ಬಟ್ಟೆ, ಪಾತ್ರೆ ಹಾಗೂ ಇತರ ವಸ್ತುಗಳನ್ನು ಬುಧವಾರ ಮುಂಜಾನೆ ತೆಗೆಯುತ್ತಿದ್ದ ದೃಶ್ಯ ಕಂಡುಬಂದಿತು.
ಸಂಜೆ ಸುಮಾರು 6.30ರ ವೇಳೆಯಲ್ಲಿ ಭಾರಿ ಗಾಳಿ ಬೀಸಿತು. ಗುಡಿಸಲುಗಳು ನೆಲಕ್ಕುರುಳಿದರೆ ಚಿಕ್ಕ ಮನೆಗಳ ಮೇಲಿನ ಟಿನ್ ಶೆಡ್‌ಗಳು ಹಾರಿ ಹೋದವು. ಕೆಲವೇ ಕ್ಷಣದಲ್ಲಿ ಮಳೆ ಶುರುವಾಗಿ ಕೆಲ ಹೊತ್ತು ಸುರಿಯಿತು ಎಂದು ಗ್ರಾಮಸ್ಥರು ಬುಧವಾರ ಸ್ಥಳಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ ಅಶೋಕ ಜಹಗೀರದಾರ ವಿವರಿಸಿದರು.
ನಾವೆಲ್ಲ ಬಡವರು. ಇದ್ದ ಗುಡಿಸಲು, ಮನೆ ಬಿದ್ದಿದೆ. ಮನೆ ದೊರಕಿಸಬೇಕು. ಆಶ್ರಯ ಮನೆ ಯೋಜನೆಯಡಿಯೂ ತಮಗೆ ಮನೆ ದೊರಕಿಲ್ಲ. ಪರಿಹಾರ ದೊರಕಿಸಬೇಕು ಎಂದರು.
ತಹಶೀಲ್ದಾರ ಹೇಳಿಕೆ: ಇಲ್ಲಿನ ನಿವಾಸಿಗಳು ಆಶ್ರಯ ಮನೆ, ಪರಿಹಾರ ಕೇಳಿದ್ದು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಹಶೀಲ್ದಾರ ಅಶೋಕ ಜಹಗೀರದಾರ ಹೇಳಿದರು. ಈ ರೀತಿ ಘಟನೆ ನಡೆದಿದ್ದರೂ ಪಿಡಿಒ ಸ್ಥಳಕ್ಕೆ ಬಂದಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.