ADVERTISEMENT

ಆಕರ್ಷಕ ಉತ್ಪನ್ನಗಳ ಖಾದಿ ಉತ್ಸವ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2011, 19:30 IST
Last Updated 3 ಮಾರ್ಚ್ 2011, 19:30 IST
ಆಕರ್ಷಕ ಉತ್ಪನ್ನಗಳ ಖಾದಿ ಉತ್ಸವ
ಆಕರ್ಷಕ ಉತ್ಪನ್ನಗಳ ಖಾದಿ ಉತ್ಸವ   

ಶಿವಮೊಗ್ಗ: ಅಲ್ಲಿ ಖಾದಿ ಲೋಕವೇ ಅನಾವರಣಗೊಂಡಿದೆ. ಖಾದಿಯಿಂದ ತಯಾರಿಸಿದ ಉತ್ಪನ್ನಗಳು, ಆಟಿಕೆ ಸಾಮಗ್ರಿಗಳಿಂದ ಹಿಡಿದು ವಿವಿಧ ಪ್ರಕಾರದ ಸ್ವದೇಶಿ ವಸ್ತುಗಳು ಅಲ್ಲಿವೆ. ಅಷ್ಟೇ ಅಲ್ಲ, ನಮ್ಮಲ್ಲಿ ‘ಖಾದಿ ಪ್ರೇಮ’ ಬೆಳೆಸುವಂತಹ ಮಹಾತ್ಮ ಗಾಂಧೀಜಿ ಅವರ ಉಕ್ತಿಗಳೂ ಕಾಣುತ್ತವೆ.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದ ಆವರಣದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಹಮ್ಮಿಕೊಂಡ ಹತ್ತು ದಿನಗಳ ‘ಖಾದಿ ಉತ್ಸವ’ ಈಗ ಜನರ ಆಕರ್ಷಣೆ ಕೇಂದ್ರವಾಗಿದೆ.

ನೂಲಿನ ಎಳೆಗಳಲ್ಲಿಯೇ ‘ಫ್ಯಾಶನ್’ ರೂಪ ಪಡೆದ ಆಕರ್ಷಕ ಬಟ್ಟೆಗಳು, ವಸ್ತ್ರವಿನ್ಯಾಸ, ಸೀರೆಗಳು, ಮಹಿಳೆಯರ ಬ್ಯಾಗ್‌ಗಳು ಉತ್ಸವದ ಪ್ರಮುಖ ಆಕರ್ಷಣೆ. ಕಾಲೇಜು ವಿದ್ಯಾರ್ಥಿಗಳಿಂದ ಹಿಡಿದು ಹಿರಿಯ ನಾಗರಿಕರ ವರೆಗೆ ಎಲ್ಲರನ್ನೂ ಸೆಳೆಯುವ ಖಾದಿ ಉತ್ಪನ್ನಗಳು ಇಲ್ಲಿವೆ.

ಉತ್ಸವದಲ್ಲಿ 50ಕ್ಕೂ ಹೆಚ್ಚು ಮಳಿಗೆಗಳಿದ್ದು, ಜಿಲ್ಲೆ ಸೇರಿದಂತೆ ಕೋಲಾರ, ರೋಣ, ಬೆಳಗಾವಿ, ಹರಿಹರ, ಚಿತ್ರದುರ್ಗ, ಬೆಂಗಳೂರು ಮತ್ತಿತರ ಭಾಗಗಳ ಗ್ರಾಮೋದ್ಯೋಗ ಸಂಘ-ಸಂಸ್ಥೆಗಳು ಬೀಡುಬಿಟ್ಟಿವೆ. ಖಾದಿ ಉತ್ಪನ್ನಗಳ ಜತೆಗೆ ಜೇನುತುಪ್ಪ, ಉಪ್ಪಿನಕಾಯಿ, ಆಯುರ್ವೇದ ಉತ್ಪನ್ನಗಳು, ಕುರುಕಲು ಖಾದ್ಯಗಳು, ಸೋಲಾರ್ ಉಪಕರಣಗಳನ್ನು ಜನರಿಗೆ ಪರಿಚಯಿಸಲಾಗುತ್ತಿದೆ.

ತೂಗು ಹಾಕಿರುವ ಬರಹಗಳು ಖಾದಿ ಬಗ್ಗೆ ಜಾಗೃತಿ ಮೂಡಿಸುತ್ತವೆ. ಪ್ರತಿ ದಿನ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣವೂ ಇದೆ. ಮಾರ್ಚ್ 6ರ ವರೆಗೆ ನಡೆಯುವ ಉತ್ಸವ, ನಿತ್ಯ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ಗ್ರಾಹಕರನ್ನು ಎದುರು ನೋಡುತ್ತದೆ. ಗ್ರಾಹಕರ ಬರ!

ಆದರೆ, ಉತ್ಸವಕ್ಕೆ ಗ್ರಾಹಕರ ಬರ! ಉತ್ಸವ ಆರಂಭವಾಗಿ ಏಳು ದಿನಗಳಾದರೂ ಹಲವರಿಗೆ ಗೊತ್ತಿಲ್ಲ. ಕೆಲವರು ಬಂದರೂ ಬಟ್ಟೆ ಮಳಿಗೆಗಳಿಗೆ ಭೇಟಿ ನೀಡುತ್ತಾರೆ. ಉಳಿದ ಮಳಿಗೆಗಳು ಭಣಗುಡುತ್ತಿವೆ. ಮಳಿಗೆ ಹಾಕಿದವರಿಗೆ ಸೂಕ್ತ ವಾಸ್ತವ್ಯ ವ್ಯವಸ್ಥೆ ಇಲ್ಲ ಎಂದು ಬೆಂಗಳೂರಿನಿಂದ ಬಂದ ಪಾದರಕ್ಷೆ ಮಾರಾಟ ಮಳಿಗೆ ಮಾಲೀಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.