
ಎಚ್.ಡಿ.ಕೋಟೆ: ತಾಲ್ಲೂಕಿನ ಬೂದನೂರು ಗ್ರಾಮದ ಜಮೀನಿನಲ್ಲಿ ಹೆಣ್ಣಾನೆ (25) ಭಾನುವಾರ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಆನೆ ಜಮೀನಿನ ಬೇಲಿ ದಾಟುವ ಸಂದರ್ಭದಲ್ಲಿ ಮೃತಪಟ್ಟಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಈ ಆನೆಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಅರಣ್ಯ ಅಧಿಕಾರಿಗಳು ಆನೆಯ ಚಲನವಲನದ ಮೇಲೆ ನಿಗಾ ಇಟ್ಟಿದ್ದರು ಎನ್ನಲಾಗಿದೆ. ಆನೆಯ ದೇಹದ ವಿವಿಧ ಭಾಗಗಳಲ್ಲಿ ಗಾಯಗಳಾಗಿದ್ದು, ಕೀವು ಬಂದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಆನೆಯ ದೇಹದ ಮೇಲೆ ಗುಂಡಿನ ಗುರುತು ಇದ್ದು, ಇದು ಗಾಯಗಳಾಗಿ ಮಾರ್ಪಟ್ಟು ನೋವಿನಿಂದ ಬಳಲಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ರಾತ್ರಿ ಬೂದನೂರು ಹಾಗೂ ಇತರ ಗ್ರಾಮಗಳ ಜಮೀನುಗಳಲ್ಲಿ ಆಹಾರವನ್ನು ಸೇವಿಸಿ ಹೊರಡುವ ಸಂದರ್ಭದಲ್ಲಿ ಚಿಕ್ಕ ತಂತಿ ಬೇಲಿ ದಾಟಲು ಸಾಧ್ಯವಾಗದೆ ಸ್ಥಳದಲ್ಲೇ ಒದ್ದಾಡಿ ಮೃತಪಟ್ಟಿರುವುದು ಕಂಡು ಬಂದಿದೆ.
ಡಿಎಫ್‌ಒ ಮನೋಜ್ ಕುಮಾರ್ `ಪ್ರಜಾವಾಣಿ~ಯೊಂದಿಗೆ ಮಾತನಾಡಿ, ಆನೆಯ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತ ಆನೆಯ ಕೀವು ಮತ್ತು ದೇಹದ ಭಾಗಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು.
ಮೈಸೂರು ಮೃಗಾಲಯದ ಡಾ. ಪ್ರಯಾಗ್ ಮತ್ತು ಎಚ್.ಡಿ. ಕೋಟೆ ಪಶುವೈದ್ಯ ಡಾ.ಪ್ರದೀಪ್ ಮರಣೋತ್ತರ ಪರೀಕ್ಷೆಯನ್ನು ನಡೆಸಿದರು. ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಪ್ರವೀಣ್‌ಕುಮಾರ್ ಮತ್ತು ಸಿಬ್ಬಂದಿ ಭೇಟಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.