ADVERTISEMENT

ಆಸ್ತಿ ತೆರಿಗೆ ಪದ್ಧತಿ ಬದಲಾವಣೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2011, 17:25 IST
Last Updated 4 ಫೆಬ್ರುವರಿ 2011, 17:25 IST

ಶಿವಮೊಗ್ಗ: ನೋಂದಣಿ ಇಲಾಖೆ ನಿಗದಿಪಡಿಸಿದ ಭೂಮಿಯ ಮಾರುಕಟ್ಟೆ ದರದ ಅನ್ವಯ ಸ್ವಯಂಘೋಷಿತ ಆಸ್ತಿ ತೆರಿಗೆ ಪಾವತಿಸುವ ಪದ್ಧತಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ಜೆಡಿಎಸ್ ನಗರ ಘಟಕದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು. 

ನೋಂದಣಿ ಇಲಾಖೆ ಪ್ರತಿ ಎರಡು ವರ್ಷಕ್ಕೊಮ್ಮೆ ನಗರ ವ್ಯಾಪ್ತಿಗೆ ಬರುವ ಭೂಮಿಯ ಮಾರುಕಟ್ಟೆ ದರ ಏರಿಕೆ ಮಾಡುತ್ತದೆ. ಇದರಿಂದ ಸ್ವಯಂಘೋಷಿತ ಆಸ್ತಿ ತೆರಿಗೆ ಕೂಡ ಏರಿಕೆಯಾಗುತ್ತಿದೆ. ಇದು ಸಾರ್ವಜನಿಕರಿಗೆ ಹೊರೆಯಾಗಿ ಪರಿಣಮಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ವಯಂ ಘೋಷಿತ ಆಸ್ತಿ ತೆರಿಗೆ ಮಾರುಕಟ್ಟೆ ದರದ ಅನ್ವಯ ತೆರಿಗೆ ನಿಗದಿಪಡಿಸಿದ ನಂತರ 5ವರ್ಷ ಅದು ಜಾರಿಯಲ್ಲಿರುವಂತೆ ಕಾಯ್ದೆ ರೂಪಿಸಬೇಕು ಎಂದು ಒತ್ತಾಯಿಸಿದರು.

ರಸ್ತೆಗಳ ಕಾಮಗಾರಿ ಗುಣಮಟ್ಟ ಕಳಪೆಯಾಗಿದ್ದು, ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಹದಗೆಟ್ಟಿವೆ. ಗುಣಮಟ್ಟ ಪರಿಶೀಲಿಸಲು ಖಾಸಗಿ ಏಜೆನ್ಸಿಯನ್ನು ನೇಮಿಸಿದ್ದಾರೆ. ಆದರೆ, ಅದರಲ್ಲೂ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು.

ಈ ಮಧ್ಯೆ ದೂಳು ಹೆಚ್ಚಾಗಿದ್ದು, ಮುಕ್ತಿ ಒದಗಿಸಬೇಕು ಎಂದು ಒತ್ತಾಯಿಸಿದರು. ಅನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಪದಾಧಿಕಾರಿಗಳಾದ ಶ್ಯಾಮ್‌ಸುಂದರ್, ವಿಶ್ವೇಶ್ವರಯ್ಯ, ವೆಂಕಟೇಶ್, ಎಚ್. ಕೃಷ್ಣ, ಮೋಹನ್‌ಕುಮಾರ್ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.