ತುಮಕೂರು: ಆಹಾರ ಹಕ್ಕು ಕಡ್ಡಾಯಗೊಳಿಸಬೇಕೆಂದು ಆಗ್ರಹಿಸಿ ಸಿಐಟಿಯು, ಸಿಪಿಐಎಂ, ಡಿವೈಎಫ್‌ಐ, ಎಸ್‌ಎಫ್‌ಐ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಟೌನ್‌ಹಾಲ್ ವೃತ್ತದಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ತಲುಪಿ, ಧರಣಿ ನಡೆಸಿದರು. ಪಡಿತರ ಚೀಟಿ ಪಡೆಯಲು ಆದಾಯ ಪತ್ರ ಕಡ್ಡಾಯಗೊಳಿಸಿರುವುದನ್ನು ಹಿಂತೆಗೆದುಕೊಳ್ಳಬೇಕು. ಸರ್ಕಾರ ಎಲ್ಲ ಸಾಮಾಜಿಕ ಭದ್ರತಾ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಬೇಕು. ಬಡವರು ಆಹಾರವಿಲ್ಲದೆ ಸಾಯುವಂತಾಗಬಾರದು ಎಂದು ಮನವಿ ಸಲ್ಲಿಸಿದರು.
ಬಿಪಿಎಲ್ ಕಾರ್ಡ್ ಪಡೆಯಲು ಆದಾಯ ಪ್ರಮಾಣಪತ್ರ ಕಡ್ಡಾಯ ಮಾಡಿರುವುದನ್ನು ರದ್ದು ಮಾಡಬೇಕು. ಎಲ್ಲ ಕುಟುಂಬಗಳಿಗೆ ರೂ. 2ರಂತೆ ಮಾಸಿಕ 35 ಕೆ.ಜಿ. ಅಕ್ಕಿ ನೀಡಬೇಕು. ಬರ ಹಾಗೂ ನೆರೆ ಪೀಡಿತ ಪ್ರದೇಶಗಳಲ್ಲಿ ಉಚಿತ ಪಡಿತರ ನೀಡಬೇಕು ಎಂದು ಒತ್ತಾಯಿಸಿದರು.
ರೈತರಿಗೆ ಬೆಂಬಲ ಬೆಲೆ ಮತ್ತು ಬೆಳೆದ ಬೆಳೆಗೆ ಮಾರುಕಟ್ಟೆ ಒದಗಿಸುವ ಅಂಶಗಳಿರುವ ಡಾ.ಸ್ವಾಮಿನಾಥನ್ ಆಯೋಗದ ವರದಿಯನ್ನು ತಕ್ಷಣ ಜಾರಿ ಮಾಡಬೇಕು. ಕೇಂದ್ರದ ಆಹಾರ ನಿಗಮದ ಉಗ್ರಾಣಗಳಲ್ಲಿ ಸಂಗ್ರಹಿಸಿದ 770 ಲಕ್ಷ ಟನ್ ಅಕ್ಕಿ ಮತ್ತು ಗೋದಿ ಯನ್ನು ಬಡವರಿಗೆ ಹೆಚ್ಚುವರಿಯಾಗಿ ಹಂಚಬೇಕು ಎಂದು ಆಗ್ರಹಿಸಿದರು.
ಸಿಪಿಐಎಂನ ಸೈಯದ್ ಮುಜೀಬ್, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಜಿ.ಉಮೇಶ್, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಹ್ಮಣ್ಯ, ಕೊಳಗೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ನರಸಿಂಹಮೂರ್ತಿ, ಸೈಯದ್‌ಅಲ್ತಾಫ್, ಎಸ್.ರಾಘವೇಂದ್ರ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.