ADVERTISEMENT

ಇದು ಬಾಲೇಪುರ... ಅಲ್ಲಲ್ಲ ದೂಳೀಪುರ...!

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2012, 19:30 IST
Last Updated 24 ಫೆಬ್ರುವರಿ 2012, 19:30 IST

ವಿಜಯಪುರ: ಸಮೀಪದ ಬಾಲೇಪುರ ಮಾರ್ಗವಾಗಿ ಸೂಲಿಬೆಲೆ ಮತ್ತು ದೇವನಹಳ್ಳಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 207 ರಲ್ಲಿ ಪಾದಚಾರಿ ರಸ್ತೆಗೆ ಸುದ್ದಮಣ್ಣು (ಕಳಪೆ ಕಾಮಗಾರಿ) ಹಾಕಿರುವ ಕಾರಣ ರಸ್ತೆ ತುಂಬ ದೂಳು ಆವರಿಸುತ್ತಿದ್ದು ಸಾರ್ವಜನಿಕರು ಇದರಿಂದ ತೀವ್ರ ತೊಂದರೆ ಅನುಭವಿಸುವಂತಾಗಿದೆ.

ನಿತ್ಯ ಸೂಲಿಬೆಲೆ ಮಾರ್ಗವಾಗಿ ಹೊಸಕೋಟೆ, ಮಾಲೂರು, ಹೊಸೂರು ಮುಂತಾದ ಕಡೆಯಿಂದ ನೂರಾರು ವಾಹನಗಳು ಬಾಲೇಪುರದಿಂದ ದೇವನಹಳ್ಳಿಗೆ ಹೋಗುತ್ತವೆ.

ಈ ಮಾರ್ಗದಲ್ಲಿ ಪಾದಚಾರಿ ರಸ್ತೆಗೆ ಉತ್ತಮ ಗುಣಮಟ್ಟದ ಜಲ್ಲಿ ಹಾಕವುದನ್ನೇ ಕಾಮಗಾರಿ ನಡೆಸುತ್ತಿರುವವರು ಮರೆತಂತಿದೆ. ಕೇವಲ ಸುದ್ದ ಮಣ್ಣಿಗೆ ನೀರನ್ನು ಹಾಕಿ ರೋಲರ್ ಮೂಲಕ ಸಮತಟ್ಟು ಮಾಡಲಾಗುತ್ತಿದ್ದು, ತೇವಾಂಶ ಆರಿದ ನಂತರ ವಿಪರೀತ ದೂಳು ಹಾರುತ್ತಿದ್ದು ಪರಿಸರವನ್ನು ಕಲುಷಿತಗೊಳಿಸಿದೆ.

ಭಾರಿ ವಾಹನಗಳು ಸಂಚರಿಸುವಾಗ ಕೆಲಕಾಲ ದಟ್ಟವಾದ ದೂಳು ಆವರಿಸಿ ರಸ್ತೆಯೇ ಕಾಣದಂತಾಗುತ್ತಿದೆ. ಇದರಿಂದ ಹಿಂದೆ ಬರುವ ವಾಹನಗಳಿಗೆ ಮುಂದಿನ ರಸ್ತೆಯೇ ಸರಿಯಾಗಿ ಕಾಣದೆ ಅಸ್ಪಷ್ಟವಾಗುತ್ತಿದೆ. ಇದು ಅಪಘಾತಗಳಿಗೂ ದಾರಿ ಮಾಡಿಕೊಟ್ಟಿದೆ. ರಸ್ತೆಯ ಬದಿಯಲ್ಲೇ ಸರ್ಕಾರಿ ಶಾಲೆಯಿದ್ದು, ವಾಹನ ಸಂಚಾರದಿಂದ ಉಂಟಾಗುವ ದೂಳಿನಿಂದ ಈ ಮಕ್ಕಳ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತಿದೆ. ಅಷ್ಟೇ ಅಲ್ಲ ಮಕ್ಕಳು ರಸ್ತೆ ದಾಟಲು ಸಹಾ  ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ತೆರವಿಗೆ ಒತ್ತಾಯ: ಸಾರ್ವಜನಿಕರ ಆರೋಗ್ಯ ಹಾಗೂ ವಾಹನ ಸವಾರರಿಗೆ ತೊಂದರೆ ಉಂಟು ಮಾಡುತ್ತಿರುವ ಕಳಪೆ ಗುಣಮಟ್ಟದ ಮಣ್ಣನ್ನು ತೆರವುಗೊಳಿಸಬೇಕೆಂದು ಬಾಲೆಪುರದ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪರಿಶೀಲನೆಯ ಭರವಸೆ: ಈ ಕುರಿತು ಪ್ರತಿಕ್ರಿಯಿಸಿರುವ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಮಂಜುನಾಥ್ ಅವರು ಶೀಘ್ರವೇ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.

 ಬಾಲೇಪುರ ಗ್ರಾಮದಿಂದ 500 ಮೀ. ದೂರಕ್ಕೆ ಮಾತ್ರ ಈ ಮಣ್ಣನ್ನು ಹಾಕಲಾಗಿದ್ದು ತಕ್ಷಣವೇ ಅದನ್ನು ಪರಿಶೀಲಿಸಿ ಅದರ ಮೇಲೆ ಕೆಂಪು ಜಲ್ಲಿ ಮಣ್ಣು ಹಾಕಿಸುವುದಾಗಿ ಪತ್ರಿಕೆಗೆ ತಿಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.