ADVERTISEMENT

ಒಳ ಮೀಸಲಾತಿ ಕಲ್ಪಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2011, 19:30 IST
Last Updated 14 ಏಪ್ರಿಲ್ 2011, 19:30 IST
ಒಳ ಮೀಸಲಾತಿ ಕಲ್ಪಿಸಲು ಒತ್ತಾಯ
ಒಳ ಮೀಸಲಾತಿ ಕಲ್ಪಿಸಲು ಒತ್ತಾಯ   

ಚಿತ್ರದುರ್ಗ: ಹಿಂದುಳಿದ ಕೊರಮ, ಕೊರಚ ಜನಾಂಗಕ್ಕೆ ಒಳಮೀಸಲಾತಿ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಯಿತು. ಗುರು ನೂಲಿ ಚಂದಯ್ಯ ಕೊರಮ, ಕೊರಚರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು. ನೀಲಕಂಠೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.

ಕೊರಚ, ಕೊರಮ ಜನಾಂಗ ಮಂಗಳ ಕಾರ್ಯಗಳಿಗೆ ವಾದ್ಯ ಮಾಡುವುದು, ಹಗ್ಗ, ಬುಟ್ಟಿ ಹೆಣೆಯುವುದು, ಕಟ್ಟಡ ಕೆಲಸ ಮಾಡುವುದು, ಹಂದಿ ಸಾಕಾಣಿಕೆ, ಹೈನುಗಾರಿಕೆ ಮುಂತಾದ ವೃತ್ತಿಯಲ್ಲಿ ತೊಡಗಿದ್ದು, ಪರಿಶಿಷ್ಟ ಜಾತಿಯಲ್ಲಿ ಅತಿ ಹಿಂದುಳಿದ ಜನಾಂಗವಾಗಿದೆ ಎಂದು ಸಂಘದ ಮುಖಂಡರು ತಿಳಿಸಿದರು. ಜಿಲ್ಲೆಯಲ್ಲಿ 40 ಸಾವಿರ ಜನಸಂಖ್ಯೆ ಹೊಂದಿದ್ದು, ವಿದ್ಯಾರ್ಥಿನಿಲಯ, ಸಮುದಾಯ ಭವನ, ಮನೆಗಳು ಸೇರಿದಂತೆ ಯಾವುದೇ ಸೌಲಭ್ಯಗಳನ್ನು ಜನಾಂಗಕ್ಕೆ ಕಲ್ಪಿಸಿಲ್ಲ. ನಗರ ಪ್ರದೇಶಗಳಲ್ಲಿ ಕಡಿಮೆ ಬಾಡಿಗೆಗೆ ಸಿಗುವ ಕೊಳೆಗೇರಿ ಪ್ರದೇಶಗಳಲ್ಲಿ ಜನಾಂಗದವರು ವಾಸಿಸುತ್ತಿದ್ದಾರೆ.
 
ಆದ್ದರಿಂದ ನಗರದಲ್ಲಿ ವಿದ್ಯಾರ್ಥಿ ವಸತಿನಿಲಯ, ಸಮುದಾಯ ಭವನ ನಿರ್ಮಿಸಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ಧನಸಹಾಯ ಒದಗಿಸಬೇಕು ಎಂದು ಒತ್ತಾಯಿಸಿದರು. ಕೊರಚ, ಕೊರಮ ಜನಾಂಗಕ್ಕೆ ಮೀಸಲಾತಿ ಕಲ್ಪಿಸಲಾಗಿದ್ದರೂ ಸರ್ಕಾರಿ ಸೌಲಭ್ಯಗಳು ಇತರೆ ಜನಾಂಗಗಳಿಗೆ ಮಾತ್ರ ದೊರೆಯುತ್ತಿವೆ ಎಂದು ಹೇಳಿದರು. ಕೊರಚ, ಕೊರಮ ಜನಾಂಗದ ಉಪಕಸಬುಗಳಿಗೆ ಸರ್ಕಾರದಿಂದ ಸಾಲ ಸೌಲಭ್ಯ ನೀಡಬೇಕು.

ಗುಡಿಸಲುಗಳಲ್ಲಿ ವಾಸಿಸುತ್ತಿರುವವರನ್ನು ಗುರುತಿಸಿ ಸರ್ಕಾರದಿಂದ ಮನೆ ನಿರ್ಮಿಸಿ ಕೊಡಬೇಕು ಎಂದು ಒತ್ತಾಯಿಸಿದರು. ಸಂಘದ ಗೌರವಾಧ್ಯಕ್ಷ ಅಂಜನಾಮೂರ್ತಿ, ಅಧ್ಯಕ್ಷ ಬಿ. ಕೃಷ್ಣಮೂರ್ತಿ, ಉಪಾಧ್ಯಕ್ಷ ಬಿ. ನರಸಿಂಹಮೂರ್ತಿ, ಪ್ರಧಾನ ಕಾರ್ಯದರ್ಶಿ ವೈ. ತಿಪ್ಪೇಸ್ವಾಮಿ, ಹರೀಶ್, ಎಸ್. ತಿಪ್ಪೇಸ್ವಾಮಿ, ಬಿ. ಕರಿಯಪ್ಪ, ಮಂಜುನಾಥ್, ಟಿ. ನಾಗರಾಜ್, ರಂಗಸ್ವಾಮಿ, ಪರಮೇಶ್ವರಪ್ಪ, ಪಾಂಡುರಂಗ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.