ADVERTISEMENT

ಕೃಷ್ಣಮೃಗ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 29 ಮೇ 2012, 19:30 IST
Last Updated 29 ಮೇ 2012, 19:30 IST
ಕೃಷ್ಣಮೃಗ ರಕ್ಷಣೆ
ಕೃಷ್ಣಮೃಗ ರಕ್ಷಣೆ   

ಹುಬ್ಬಳ್ಳಿ: ತಾಯಿಯಿಂದ ಬೇರ್ಪಟ್ಟಿದ್ದ ಕೃಷ್ಣಮೃಗದ 20 ದಿನಗಳ ಪುಟ್ಟ ಮರಿಯನ್ನು ಶಾಲಾ ಸಿಬ್ಬಂದಿ ರಕ್ಷಿಸಿ ಮಂಗಳವಾರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

ನಗರದ ಗೋಪನಕೊಪ್ಪದಲ್ಲಿರುವ ಮನೋವಿಕಾಸ ಅಂಗವಿಕಲರ ವಸತಿ ಶಾಲೆಯ ಕಾಂಪೌಂಡ್ ಮುಂಭಾಗದಲ್ಲಿ ಸೋಮವಾರ ರಾತ್ರಿ 8 ಗಂಟೆ ವೇಳೆಯಲ್ಲಿ ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದ ಕೃಷ್ಣಮೃಗದ ಮರಿಯನ್ನು ಶಾಲೆಯ ಕಾವಲುಗಾರ ಖಾದರ್‌ಸಾಬ್ ರಕ್ಷಿಸಿದ್ದಾರೆ.

ಮರಿಯನ್ನು ಹಿಡಿದು ತಂದಾಗ ಶಾಲೆಯ ಮುಖ್ಯಸ್ಥ ಡಾ.ಹಿರೇಮಠ ಹಾಗೂ ನೀಲಾ ದಂಪತಿ ಬೆದರಿದ್ದ ಮರಿಯ ಮೈದಡವಿ ಬಾಟಲಿಯಲ್ಲಿ ಹಾಲು ಕುಡಿಸಿ ಉಪಚಾರ ಮಾಡಿದ್ದಾರೆ. ರಾತ್ರಿಯೆಲ್ಲಾ ಶಾಲೆಯ ಅಂಗಳದಲ್ಲಿ ಆಡಿಕೊಂಡಿದ್ದ ಕೃಷ್ಣಮೃಗದ ಮರಿಯನ್ನು ಮರಳಿ ಕಾಡಿಗೆ ಬಿಡುವ ಸಂಬಂಧ ಧಾರವಾಡ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಮಾಹಿತಿ ನೀಡಿದ್ದಾರೆ.

ಡಿಎಫ್‌ಒ ಕಚೇರಿಯಿಂದ ಬಂದ ಸೂಚನೆಯನ್ವಯ ಮಂಗಳವಾರ ಶಾಲೆಗೆ ತೆರಳಿದ ವಲಯ ಅರಣ್ಯ ಸಂರಕ್ಷಣಾಧಿಕಾರಿ ಆರ್.ಎಂ.ಪತ್ತಾರ ಹಾಗೂ ತಂಡ ಮರಿಯನ್ನು ಅಲ್ಲಿಂದ ತಂದು ನೃಪತುಂಗಬೆಟ್ಟದ ತಪ್ಪಲಲ್ಲಿರುವ ಅರಣ್ಯ ಇಲಾಖೆ ಕಚೇರಿಯಲ್ಲಿ ಸಂರಕ್ಷಿಸಿದ್ದರು.

ಉಣಕಲ್ ಹಿಂಭಾಗದ ಗುಡ್ಡಗಳಲ್ಲಿರುವ ಅರಣ್ಯದಿಂದ ನಗರದತ್ತ ಆಹಾರ ಹುಡುಕಿಕೊಂಡು ಬಂದ ಕೃಷ್ಣಮೃಗಗಳ ಗುಂಪಿನಿಂದ ಬೇರೆಯಾಗಿ ಮರಿ ನಗರದೊಳಗೆ ಪ್ರವೇಶಿಸಿರಬಹುದು ಎಂದು ಪತ್ತಾರ ಹೇಳುತ್ತಾರೆ.
ತಾಯಿಯಿಂದ ಬೇರೆ ಆಗಿರುವುದರಿಂದ ಸ್ವತಂತ್ರವಾಗಿ ಬದುಕಲು ಒಂದಷ್ಟು ದಿನ ಬೇಕಾಗುತ್ತದೆ. ಅಲ್ಲಿಯವರೆಗೆ ಅಗತ್ಯ ಆರೈಕೆ ಹಾಗೂ ಆಹಾರ ಒದಗಿಸಿ ಮರಿಯನ್ನು ರಕ್ಷಿಸಬೇಕಾಗಿದೆ.

ದಾಂಡೇಲಿ ಸಮೀಪದ ಕುಳಗಿ ನೇಚರ್ ಕ್ಯಾಂಪ್‌ನಲ್ಲಿರುವ ಪ್ರಾಣಿ ಸಂರಕ್ಷಣಾ ಕೇಂದ್ರಕ್ಕೆ ಕೊಂಡೊಯ್ದು ಅಲ್ಲಿಗೆ ಬಿಡುವುದಾಗಿ ಅವರು ಹೇಳಿದರು.ಅರಣ್ಯ ಇಲಾಖೆ ಕಚೇರಿಗೆ `ಪ್ರಜಾವಾಣಿ~ ಭೇಟಿ ನೀಡಿದಾಗ ಇಲಾಖೆಯ ಸಿಬ್ಬಂದಿ ಆನಂದ ಕಣವಿ, ಎಸ್.ತಡಕೋಳ ಹಾಗೂ ಶರಣಪ್ಪ ಅಣ್ಣಿಗೇರಿ ಅವರ ಆತಿಥ್ಯಕ್ಕೆ ಹೊಂದಿಕೊಂಡಿದ್ದ ಕೃಷ್ಣಮೃಗ ಒಂದಾದ ಮೇಲೊಂದು ಹಾಲಿನ ಬಾಟಲಿ ಖಾಲಿ ಮಾಡುತ್ತಾ, ಕಾಂಪೌಂಡಿನೊಳಗೆ ವಿಹರಿಸುತ್ತಿದ್ದದ್ದು ಕಂಡು ಬಂದಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.