ADVERTISEMENT

ಕೃಷ್ಣ ನನ್ನೂ ಕಾಡಿದ ಹುಸಿ ಬಾಂಬ್ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 19:30 IST
Last Updated 17 ಸೆಪ್ಟೆಂಬರ್ 2011, 19:30 IST

ಉಡುಪಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಬಾಂಬ್ ಇಡಲಾಗಿದೆ ಎಂದು ಕಿಡಿಗೇಡಿಗಳು ಶುಕ್ರವಾರ ರಾತ್ರಿ ಹಬ್ಬಿಸಿದ ಸುದ್ದಿಯ ಪರಿಣಾಮ ಪೊಲೀಸರು ಮಠದೊಳಗೆ ತಪಾಸಣೆ ನಡೆಸಿದರು. ಅದು ಹುಸಿ ಬಾಂಬ್ ಬೆದರಿಕೆ ಎನ್ನುವುದು ತಪಾಸಣೆ ಬಳಿಕ ತಿಳಿದುಬಂತು.

ಮಠದಲ್ಲಿ ಬಾಂಬ್ ಇಡಲಾಗಿದೆ ಎಂದು ರಾತ್ರಿ 11.45ರ ಸುಮಾರಿಗೆ ನಗರ ಪೊಲೀಸ್ ಠಾಣೆಗೆ ಅನಾಮಿಕರು ದೂರವಾಣಿ ಕರೆ ಮಾಡಿ ತಿಳಿಸಿದ್ದರು. ಕೂಡಲೇ ಬಾಂಬ್ ನಿಷ್ಕ್ರಿಯದಳ, ಶ್ವಾನದಳದೊಂದಿಗೆ ಧಾವಿಸಿದ  ಪೊಲೀಸರು ಮಠದ ಎಲ್ಲ ಸ್ಥಳವನ್ನೂ ತಪಾಸಣೆ ಮಾಡಿದರು. ಆದರೆ ಏನೂ ಪತ್ತೆಯಾಗಲಿಲ್ಲ. ಇದರಿಂದಾಗಿ ಮಠದಲ್ಲಿದ್ದವರು ನಿಟ್ಟುಸಿರುಬಿಟ್ಟರು.

ಈ ಹಿಂದೆ `ಸಾಗರ್ ರಕ್ಷಾ ಕವಚ್~ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಪೊಲೀಸರು ಕೃಷ್ಣಮಠದಲ್ಲಿ ಅಣಕು ಕಾರ್ಯಾಚರಣೆ ಮಾಡಿದ್ದರು. ಆದರೆ ತದನಂತರ ಬಾಂಬ್ ಇದೆ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ಮಠದಲ್ಲಿ ನಿಜವಾದ ತಪಾಸಣೆ ಮಧ್ಯರಾತ್ರಿ ಮೂರು ಗಂಟೆಯವರೆಗೂ ನಡೆಯಿತು.

ತಪಾಸಣೆ ನೇತೃತ್ವ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠ ಡಾ.ವೈ.ಎಸ್.ರವಿಕುಮಾರ್, `ನಾವು ಸುಮಾರು ಮೂರು ತಾಸು ಅಲ್ಲಿ ತಪಾಸಣೆ ನಡೆಸಿದೆವು. ಆದರೆ ಯಾವುದೂ ಪತ್ತೆಯಾಗಿಲ್ಲದ ಕಾರಣ ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ತಿಳಿಯಿತು. ನಾವು ಮಠಕ್ಕೆ ಭದ್ರತಾ ವ್ಯವಸ್ಥೆ ಹೆಚ್ಚಿಸಿದ್ದೇವೆ~ ಎಂದು `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದರು.

ಹೆಚ್ಚಿನ ಭದ್ರತೆ: ಹುಸಿಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ  ಕೃಷ್ಣಮಠಕ್ಕೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಮಠದ ದ್ವಾರಗಳಲ್ಲಿ ನಿಷ್ಕ್ರಿಯವಾಗಿದ್ದ ಲೋಹ ಶೋಧಕ ಯಂತ್ರ (ಮೆಟಲ್ ಡಿಟೆಕ್ಟರ್)ಗಳನ್ನು ಮತ್ತೆ ಚಾಲನೆಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.