ADVERTISEMENT

ಕೆರೆಗಳ ಒತ್ತುವರಿ ತೆರವು: ಭಿನ್ನ ನಿಲುವು

​ಪ್ರಜಾವಾಣಿ ವಾರ್ತೆ
Published 9 ಜೂನ್ 2017, 4:59 IST
Last Updated 9 ಜೂನ್ 2017, 4:59 IST
ಕೆರೆ ಒತ್ತುವರಿ ತೆರವಿಗೆ ಮುಂದಾಗಿರುವ ತಾಲ್ಲೂಕು ಆಡಳಿತ ಕ್ರಮ ವಿರೋಧಿಸಿ ಅರಬಿಳಚಿ ಗ್ರಾಮ ಪಂಚಾಯ್ತಿ ಎದುರು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಕೆರೆ ಒತ್ತುವರಿ ತೆರವಿಗೆ ಮುಂದಾಗಿರುವ ತಾಲ್ಲೂಕು ಆಡಳಿತ ಕ್ರಮ ವಿರೋಧಿಸಿ ಅರಬಿಳಚಿ ಗ್ರಾಮ ಪಂಚಾಯ್ತಿ ಎದುರು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಭದ್ರಾವತಿ: ಅರಬಿಳಚಿ ಗ್ರಾಮದ 11 ಕೆರೆಗಳ ಒತ್ತುವರಿ ತೆರವುಗೊಳಿಸುವ ಪ್ರಕ್ರಿಯೆಗೆ ಶೀಘ್ರ ಚಾಲನೆ ನೀಡಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜಾನುವಾರಿಗೆ ಕುಡಿಯುವ ನೀರು, ತೋಟ, ಜಮೀನಿಗೆ ನೀರಿನ ಸಮಸ್ಯೆ ಎದುರಾಗಿರುವುದರಿಂದ ಕೆರೆ– ಕಟ್ಟೆಗಳನ್ನು ರಕ್ಷಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಅಧಿಕಾರಿಗಳು, ಸರ್ಕಾರದ ಆದೇಶದಂತೆ ಕ್ರಮ ಜರುಗಿಸುತ್ತೇವೆ. ಯಾವುದೇ ರೀತಿಯ ವಿಳಂಬ ಮಾಡುವುದಿಲ್ಲ. ಸರ್ವೆ ಕೆಲಸ ನಡೆದಿದೆ ಎಂದು ಭರವಸೆ ನೀಡಿದರು.

ADVERTISEMENT

ದ.ಸಂ.ಸ ಪ್ರತಿಭಟನೆ: ಅರಬಿಳಚಿ ಗ್ರಾಮದ ನಾಗಸಮುದ್ರಕೆರೆ ಒತ್ತುವರಿ ತೆರವಿಗೆ ಮುಂದಾಗಿರುವ ತಾಲ್ಲೂಕು ಆಡಳಿತದ ಕ್ರಮ ವಿರೋಧಿಸಿ ದಲಿತ ಸಂಘರ್ಷ ಸಮಿತಿ ಗ್ರಾಮ ಪಂಚಾಯ್ತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.

ಕೆರೆ ಒತ್ತುವರಿ ತೆರವಿಗೆ ಸಂಬಂಧಿ ಸಿದಂತೆ ಯಾವ ಅನುದಾನದಡಿ ಕೆಲಸ ಮಾಡಲಾಗುತ್ತಿದೆ. ಎಷ್ಟು ಕೆರೆಗಳ ಅಭಿವೃದ್ಧಿಗೆ ಹಣ ಮಂಜೂರಾಗಿದೆ ಎಂಬ ಬಗ್ಗೆ ಮಾಹಿತಿ ನೀಡಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ದಲಿತರು ಮಾಡುತ್ತಿರುವ ಸಾಗುವಳಿ ಮೇಲೆ ಕಣ್ಣು ಹಾಕಿರುವ ಆಡಳಿತ ವರ್ಗ ಶ್ರೀಮಂತರು ಮಾಡಿರುವ ಒತ್ತುವರಿ ತೆರವುಗೊಳಿಸುವಲ್ಲಿ ವಿಫಲವಾಗಿದೆ. ಅನುದಾನ ಇಲ್ಲದಿದ್ದರೂ ಒಕ್ಕಲೆಬ್ಬಿಸುವ ಹುನ್ನಾರ ನಡೆಸಲಾಗಿದೆ ಎಂದು ದೂರಿದರು.

ಸದ್ಯಕ್ಕೆ ಸರ್ವೆ ಮಾಡಲಾಗುತ್ತಿದೆ. ಮುಂದಿನ ಹಂತದಲ್ಲಿ ಸ್ಥಳೀಯ ಪಂಚಾಯ್ತಿಗಳಿಗೆ ಸಿಗುವ ಅನುದಾನದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ಡಿಎಸ್‌ಎಸ್‌ ಮುಖಂಡರಾದ ಸುರೇಶ, ರಾಮಲಿಂಗಂ, ಯೋಗೇಶ್ವರ ನಾಯ್ಕ, ನರಸಿಂಹ ಶೆಟ್ಟಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.