ADVERTISEMENT

ಖಾತರಿ ಕೆಲಸಕ್ಕಾಗಿ ಪಂಚಾಯಿತಿಗೆ ಬೀಗ

​ಪ್ರಜಾವಾಣಿ ವಾರ್ತೆ
Published 29 ಜೂನ್ 2011, 19:30 IST
Last Updated 29 ಜೂನ್ 2011, 19:30 IST
ಖಾತರಿ ಕೆಲಸಕ್ಕಾಗಿ ಪಂಚಾಯಿತಿಗೆ ಬೀಗ
ಖಾತರಿ ಕೆಲಸಕ್ಕಾಗಿ ಪಂಚಾಯಿತಿಗೆ ಬೀಗ   

ಕವಿತಾಳ: ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡುವಂತೆ ಆಗ್ರಹಿಸಿ ಅಂದಾಜು 200ಕ್ಕೂ ಹೆಚ್ಚು ಮಹಿಳೆಯರು ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಬೀಗ ಜಡಿದ ಘಟನೆ ಸಮೀಪದ ತೋರಣದಿನ್ನಿಯಲ್ಲಿ ಬುಧವಾರ ನಡೆಯಿತು.

ಒಂದು ತಿಂಗಳ ಹಿಂದೆ ಕೆಲಸ ನೀಡುವಂತೆ ನಿಗದಿತ ಅರ್ಜಿಯಲ್ಲಿ ಮನವಿ ಸಲ್ಲಿಸಿದ್ದರೂ ಅಭಿವೃದ್ದಿ ಅಧಿಕಾರಿ 15 ದಿನಗಳ ನಂತರ ಸ್ವೀಕೃತಿ ನೀಡಿದ್ದಾರೆ. ಅವಧಿ ಮುಗಿದರೂ ಕೆಲಸ ನೀಡಿಲ್ಲ ಮತ್ತು 25ದಿನಗಳ ಹಿಂದೆ ಸಲ್ಲಿಸಿದ ಮನವಿ ಮೇರೆಗೆ ವಹಿಸಿಕೊಟ್ಟ ರಸ್ತೆ ಕಾಮಗಾರಿ ನಿರ್ವಹಿಸಲು ಜಮೀನು ಮಾಲೀಕರು ತಕರಾರು ಮಾಡಿದ್ದಾರೆ ಎಂದು ಆರೋಪಿಸಿದರು.

ಸರ್ಕಾರ ನೀಡಿದ ಮೊಬೈಲ್ ಸ್ವಿಚ್‌ಆಫ್ ಮಾಡಿ ಎರಡು ತಿಂಗಳಿಂದ ಪಂಚಾಯಿತಿಗೆ ಮುಖ ತೋರಿಸದ ಅಭಿವೃದ್ದಿ ಅಧಿಕಾರಿ ಶಂಕ್ರಪ್ಪ ಮ್ಯಾಗೇರಿ ಸಿರವಾರದ ಖಾಸಗಿ ವ್ಯಕ್ತಿಯೊಬ್ಬರ ಮನೆಯಲ್ಲಿ ಕುಳಿತು ಕಳೆದ 15 ದಿನಗಳಲ್ಲಿ ಉದ್ಯೋಗ ಖಾತರಿ ಯೋಜನೆಯ ಅಂದಾಜು ರೂ. 64 ಲಕ್ಷ ಮೊತ್ತದ ಚೆಕ್‌ಗಳನ್ನು ನೀಡಿದ್ದಾರೆ ಎಂದು ಕೆಲ ಯುವಕರು ಆರೋಪಿಸಿದರು. ಕೆಲಸಕ್ಕಾಗಿ ಅರ್ಜಿ ಸಲ್ಲಿಸಲು ತಿಂಗಳಿಂದ ಕಾಯುತ್ತಿದ್ದರೂ ಪಂಚಾಯಿತಿಯಲ್ಲಿ ಪಿಡಿಒ ಸಿಕ್ಕಿಲ್ಲ ಮತ್ತು ಅರ್ಜಿ ಸಲ್ಲಿಸಿದರೂ ಸ್ವೀಕೃತಿ ನೀಡಲು ನಿರಾಕರಿಸುತ್ತಾರೆ ಎಂದು ಕೆಲ ಮಹಿಳೆಯರು ದೂರಿದರು.

ನಾಲ್ಕು ದಿನಗಳಿಂದ ಪಂಚಾಯಿತಿಗೆ ಅಲೆದು ಬೇಸತ್ತ ಮಹಿಳೆಯರು ಬುಧವಾರ ಬೀಗ ಹಾಕಿದರು ಈ ಸಮಯದಲ್ಲಿ ಮಾಹಿತಿ ಪಡೆಯುತ್ತಿದ್ದ ಪತ್ರಕರ್ತರ ಮೇಲೆ ವ್ಯಕ್ತಿಯೊಬ್ಬ ಹಲ್ಲೆಗೆ ಮುಂದಾದ ಘಟನೆ ನಡೆಯಿತು. ಪಾರ್ವತಮ್ಮ, ರೇಣಕಮ್ಮ, ಹನುಮಂತಿ ಮುಂತಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.