ADVERTISEMENT

ಗಮನ ಸೆಳೆದ ಪ್ರತಿಭೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2013, 9:50 IST
Last Updated 20 ಏಪ್ರಿಲ್ 2013, 9:50 IST

ಕೊಳ್ಳೇಗಾಲ: ಕೊಳ್ಳೇಗಾಲ ಶೈಕ್ಷಣಿಕ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿಬಿಎಂ ವಿದ್ಯಾರ್ಥಿ ಜಿ.ಎನ್.ಮಹೆಶ್‌ಕುಮಾರ್ ಈಚೆಗೆ ಆಂಧ್ರಪ್ರದೇಶದ ಎನ್.ಟಿ.ಆರ್. ವಿಶ್ವವಿದ್ಯಾನಿಲಯದ ವತಿಯಿಂದ ಏರ್ಪಡಿಸಿದ್ದ ಅಂತರಾಜ್ಯ ವಿಶ್ವವಿದ್ಯಾನಿಲಯ ಬ್ಯಾಸ್ಕೆಟ್‌ಬಾಲ್ ಪಂದ್ಯಾವಳಿಯಲ್ಲಿ ಮೈಸೂರು ವಿಶ್ವವಿದ್ಯಾನಿಲ ಪ್ರತಿನಿಧಿಸಿದ್ದಾರೆ. ಪಠ್ಯದೊಂದಿಗೆ ಪಠ್ಯೇತರ ಚಟುವ ಟಿಕೆಯಲ್ಲೂ ಇವರು ಮುಂದಿದ್ದಾರೆ.

ಮಹೇಶ್‌ಕುಮಾರ್ ಕೊಳ್ಳೇಗಾಲ ಪಟ್ಟಣದ ಮುಖಂಡ ಜಿ.ಎನ್.ನಂಜಪ್ಪ ಹಾಗೂ ಪ್ರಮೀಳಾ ಜಿ.ಎಂ ದಂಪತಿಯ ಪುತ್ರ. ಬಾಲ್ಯದಿಂದಲೂ ಈತನಲ್ಲಿದ್ದ ಪ್ರತಿಭೆ ಗುರುತಿಸಿದ ಪೋಷಕರು ಪ್ರೋತ್ಸಾಹ ನೀಡಿದರು.

ಪಟ್ಟಣದ ವಾಸವಿ ವಿದ್ಯಾಕೇಂದ್ರದಲ್ಲಿ ಪ್ರೌಢಶಿಕ್ಷಣ ಪಡೆಯುತ್ತಿರುವಾಗಲೇ ಜಿಲ್ಲಾ ಮಟ್ಟದ ಕೊಕ್ಕೋ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನಪಡೆದ ಈತ ಪಿಯುಸಿಯಲ್ಲಿ ಷಟಲ್, ಹ್ಯಾಂಡ್‌ಬಾಲ್ ಮತ್ತು ಬ್ಯಾಸ್ಕೆಟ್‌ಬಾಲ್, ಅಥ್ಲೆಟಿಕ್ಸ್ ,ಕೋಕೋ ಪಂದ್ಯಗಳಲ್ಲಿ ಉತ್ತಮ ಪ್ರತಿಭೆ ತೋರಿ ವಲಯಮಟ್ಟದ ಕ್ರೀಡಾಕೂಟದಲ್ಲಿ ಬಹುಮಾನ ಗಳಿಸಿದ್ದಾರೆ. ಶಾಲಾ ಮಟ್ಟದಲ್ಲಿ ಪ್ರತಿವರ್ಷ ನಡೆಯುವ ವಾರ್ಷಿಕ ಕ್ರೀಡಾಕೂಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವ ಈತ ವಿವಿಧ ಕ್ರೀಡಾಕೂಟಗಳಲ್ಲಿ ಅನೇಕ ಬಹುಮಾನ ಮುಡಿಗೇರಿಸಿಕೊಂಡಿದ್ದಾನೆ. ಮೈಸೂರು ವಿಶ್ವವಿದ್ಯಾನಿಲಯದ ಬ್ಯಾಸ್ಕೆಟ್‌ಬಾಲ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಅಂತರಾಜ್ಯ ವಿಶ್ವವಿದ್ಯಾನಿಲಯ ಮಟ್ಟದ ಕ್ರೀಡಾಕೂಟದಲ್ಲಿ ಮೈಸೂರು ವಿಶ್ವವಿದ್ಯಾನಿ ಲಯವನ್ನು ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡಿರುವುದು ಈತನ ಪ್ರಮುಖ     ಸಾಧನೆಯಾಗಿದೆ.

`ಕಾಲೇಜು ದೈಹಿಕ ಶಿಕ್ಷಣ ನಿರ್ದೆಶಕ ಮೋಸೆಸ್ ಅವರ ಮಾರ್ಗ ದರ್ಶನ, ಪ್ರೋತ್ಸಾಹ ಮತ್ತು ತಂದೆ ತಾಯಿ ಗಳ ಬೆಂಬಲ ನನ್ನ ಸಾಧನೆ ಸ್ಫೂರ್ತಿ. ರಾಜ್ಯದ ಜನತೆ ಗುರುತಿಸುವಂತಹ ಕ್ರೀಡಾಪಟುವಾಗಿ ಹೊರಹೊಮ್ಮಬೇಕು, ಈ ಸಾಧನೆ ನನ್ನ ಗುರಿ' ಎನ್ನುತ್ತಾರೆ ಮಹೇಶ್‌ಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.