ತುಮಕೂರು: ಸೇವೆಗೆ ಅನುಗುಣವಾಗಿ ವೇತನ ನೀಡುವುದು, ಸೇವಾ ಜೇಷ್ಠತೆ ಹಾಗೂ ನೇಮಕಾತಿ ನಿಯಮಾವಳಿ 2003ಕ್ಕೆ ತಿದ್ದುಪಡಿ ತರುವಂತೆ ಆಗ್ರಹಿಸಿ ಗ್ರಾಮೀಣ ಕೃಪಾಂಕ ಶಿಕ್ಷಕರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಭಾರತ ಪ್ರಜಾಸತ್ತಾತ್ಮಕ ಯುವ ಜನ ಫೆಡರೇಷನ್ ಮತ್ತು ನೌಕರರ ವೇದಿಕೆ ನೇತೃತ್ವದಲ್ಲಿ ಧರಣಿ ನಡೆಸಿದರು.
ಗ್ರಾಮೀಣ ಪ್ರದೇಶದ ವಿದ್ಯಾವಂತ ನಿರುದ್ಯೋಗಿಗಳಿಗೆ ಗ್ರಾಮೀಣ ಕೃಪಾಂಕ ಅನುಕೂಲವಾಗಿತ್ತು. ಹೋರಾಟದ ಮೂಲಕ ಈ ಸೌಲಭ್ಯ ಪಡೆದುಕೊಳ್ಳಲಾಗಿತ್ತು ಎಂದರು.
ಗ್ರಾಮೀಣ ಕೃಪಾಂಕದ ನೆರವಿನಲ್ಲಿ ಉದ್ಯೋಗ ಪಡೆದಿರುವ ಶಿಕ್ಷಕರು, ನೌಕರರಿಗೆ ಸರ್ಕಾರಿ ನೌಕರರಿಗೆ ಸಿಗುವ ಎಲ್ಲ ಸವಲತ್ತುಗಳನ್ನು ಸರ್ಕಾರ ಒದಗಿಸಬೇಕು. ಇದರಲ್ಲಿ ಮಲತಾಯಿ ಧೋರಣೆ ಅನುಸರಿಸಬಾರದು ಎಂದು ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿ ಪ್ರಗತಿಪರ ಚಿಂತಕ ಕೆ.ದೊರೈರಾಜು ಒತ್ತಾಯಿಸಿದರು.
ಸರ್ಕಾರ 12 ವರ್ಷದ ಸೇವೆ ಪರಿಗಣಿಸಿ ವೇತನ ಜಾರಿ ಮಾಡಬೇಕು. ಕಡಿತ ಮಾಡುತ್ತಿರುವ ವೇತನವನ್ನು ಬಿಡುಗಡೆ ಮಾಡಬೇಕು ಎಂದು ಕೃಪಾಂಕ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಮಮತ ಆಗ್ರಹಿಸಿದರು.
ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ, ಮುಖಂಡರಾದ ಈರಸಿದ್ದಯ್ಯ, ರಾಜಶೇಖರ, ಆರ್.ನಾಗೇಂದ್ರಕುಮಾರ್, ಕಾಮರಾಜ್ ಮಧುಗಿರಿ, ದಾಕ್ಷಾಯಿಣಿ, ಗೀತಾಂಜಲಿ, ಅನುಸೂಯಮ್ಮ, ಎನ್.ಕೆ.ಸುಬ್ರಹ್ಮಣ್ಯ, ಶಿವಣ್ಣ, ದರ್ಶನ್, ಗೋವಿಂದರಾಜು, ಅಜ್ಜಪ್ಪ ಇನ್ನಿತರರು ಧರಣಿ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.