ADVERTISEMENT

ಚನ್ನರಾಯಪಟ್ಟಣ: ಸಮಾರಂಭದಲ್ಲಿ ಕಪ್ಪು ಬಾವುಟ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 19:30 IST
Last Updated 12 ಅಕ್ಟೋಬರ್ 2012, 19:30 IST

ಚನ್ನರಾಯಪಟ್ಟಣ: ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಕಚೇರಿ ಉದ್ಘಾಟನಾ ಸಮಾರಂಭಕ್ಕೆ ಕೆಡಿಪಿ ನಾಮನಿರ್ದೇಶನ ಸದಸ್ಯರನ್ನು ಆಹ್ವಾನಿಸಿಲ್ಲ ಎಂದು ಆರೋಪಿಸಿ ನಾಮ ನಿರ್ದೇಶನ ಸದಸ್ಯ ಪಿ.ಎ.ನಾಗರಾಜು ಕಪ್ಪುಬಾವುಟ ಪ್ರದರ್ಶಿಸಿದ ಘಟನೆ ನಡೆಯಿತು.

 ಕಚೇರಿ ಉದ್ಘಾಟನೆ ನಂತರ ವೇದಿಕೆ ಕಾರ್ಯಕ್ರಮ ಆರಂಭವಾಯಿತು. ವೇದಿಕೆಯಲ್ಲಿ ಶಾಸಕ ಸಿ.ಎಸ್. ಪುಟ್ಟೇಗೌಡ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಂಗಮ್ಮ ರಾಮಕೃಷ್ಣೇಗೌಡ, ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ ಸೇರಿ ಅನೇಕ ಜನಪ್ರತಿನಿಧಿಗಳು ಭಾಗವಹಿಸಿದ್ದರು.
 
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೆ.ಬಿ. ನಿಂಗರಾಜಪ್ಪ ಸ್ವಾಗತ ಭಾಷಣ ಮಾಡಲು ಮುಂದಾದರು. ಆಗ ಸಭಿಕರ ಸಾಲಿನಲ್ಲಿ ಕುಳಿತಿದ್ದ ನಾಮ ನಿರ್ದೇಶನ ಸದಸ್ಯ ಪಿ.ಎ. ನಾಗರಾಜು ಅವರು ಎದ್ದು ನಿಂತು ಕಪ್ಪು ಬಾವುಟ ಪ್ರದರ್ಶಿಸಿದರು. ಇಂದಿನ ಕಾರ್ಯಕ್ರಮಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದರು.
 
ಇಷ್ಟಾದ ಮೇಲೆ ಶಾಸಕರು, ನಾಗರಾಜು ಅವರನ್ನು ವೇದಿಕೆಗೆ ಆಹ್ವಾನಿಸಿದರು. ಆದರೆ ನಾಗರಾಜು ವೇದಿಕೆಗೆ ಬರಲಿಲ್ಲ. ಸ್ವಾಗತ ಭಾಷಣ ಮುಗಿದ ಬಳಿಕ ನಾಗರಾಜು ಅವರಿಗೆ ಮಾತನಾಡಲು ಅವಕಾಶ ನೀಡಲಾಯಿತು.

ಆಗ ಮಾತನಾಡಿದ ನಾಗರಾಜು, `ಇಂದಿನ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಸೌಜನ್ಯಕ್ಕಾದರೂ ನಾಮನಿರ್ದೇಶಿತ ಸದಸ್ಯರನ್ನು ಆಹ್ವಾನಿಸಿಲ್ಲ. ಇದಕ್ಕೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಧೋರಣೆ ಕಾರಣ. ಹಿಂದಿನಿಂದಲೂ ನಾಮ ನಿರ್ದೇಶನ ಸದಸ್ಯರನ್ನು ಕಡೆಗಣಿಸಲಾಗುತ್ತಿದೆ ಎಂದು ಆಪಾದಿಸಿದರು. ಮಾತನಾಡಿದ ನಂತರ ಪುನಃ ಸಭಿಕರ ಸಾಲಿನಲ್ಲಿ  ಸ್ವಲ್ಪ ಹೊತ್ತು ಕುಳಿತು ನಂತರ ಸಭೆಯಿಂದ ಹೊರ ನಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.