ADVERTISEMENT

ಚರ್ಚ್ ದಾಳಿ: ಸಿಬಿಐ ತನಿಖೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 17:30 IST
Last Updated 1 ಫೆಬ್ರುವರಿ 2011, 17:30 IST

ಚಿಕ್ಕಮಗಳೂರು: ಚರ್ಚ್ ದಾಳಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಆಗ್ರಹಿಸಿ ಅಖಿಲ ಭಾರತ ಕ್ರಿಶ್ಚಿಯನ್ ಮಂಡಳಿ ಜಿಲ್ಲಾ ಘಟಕ ನೇತೃತ್ವದಲ್ಲಿ ಕ್ರೈಸ್ತರು ಜಿಲ್ಲಾಧಿಕಾರಿ ಕಚೇರಿ ಸಮೀಪ ಮಂಗಳವಾರ ಧರಣಿ ನಡೆಸಿದರು. ರಾಜ್ಯಪಾಲರಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದರು.

2008ರಲ್ಲಿ ಮಂಗಳೂರು, ಚಿಕ್ಕಮಗಳೂರು, ಉಡುಪಿ, ದಾವಣಗೆರೆ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಚರ್ಚ್‌ಗಳ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು, ಪೀಠೋಪಕರಣ, ಪೂಜಾ ಸಾಮಗ್ರಿ ಜಖಂಗೊಳಿಸಿದ್ದನ್ನು ಮಂಡಳಿ ಪ್ರಧಾನ ಕಾರ್ಯದರ್ಶಿ ಸುಂದರ್ ಬಾಬು ನೆನಪಿಸಿದರು.

ನಿವೃತ್ತ ನ್ಯಾ. ಬಿ.ಕೆ.ಸೋಮಶೇಖರ ಅವರ ಆಯೋಗ ನ್ಯಾಯ ಸಮ್ಮತ ವರದಿ ಸಲ್ಲಿಸಿಲ್ಲ. ಕ್ರೈಸ್ತ ಸಮುದಾಯದ ಬಗ್ಗೆ ತಾರತಮ್ಯ ತೋರಿ ರಾಜ್ಯ ಸರ್ಕಾರ ಮತ್ತು ಕೋಮುವಾದಿ ಸಂಘಟನೆಗಳ ಪರ ವರದಿ ನೀಡಿದೆ ಎಂದು ಆರೋಪಿಸಿದರು. ಪ್ರಕರಣದ ಹಿಂದಿರುವ ಯಾರ ಬಗ್ಗೆಯೂ ಆಯೋಗ ಮುಕ್ತವಾಗಿ ಪ್ರಸ್ತಾಪಿಸಿಲ್ಲ ಎಂದು ವಿಷಾದಿಸಿದರು.

ಕ್ರೈಸ್ತ ಮಂಡಳಿ ಮುಖಂಡರಾದ ಜೋಸೆಫ್, ಗಿಲ್ಬರ್ಟ್, ರವಿ ಏಂಜಲಸ್, ಸಂತೋಷ್ ಪಿ.ಜಾರ್ಜ್, ಆನಂದ್ ಕುಮಾರ್, ಬಾಬು ಪೌಲಸ್, ಚಾಕೋ, ಆಶೀರ್ವಾದ್, ರೂಬೆನ್, ಬಿಎಸ್‌ಪಿಯ ರಾಧಾಕೃಷ್ಣ, ಕಾಂಗ್ರೆಸ್‌ನ ಎಂ.ಎಲ್.ಮೂರ್ತಿ, ಜೆಡಿಎಸ್‌ನ ಚಂದ್ರಪ್ಪ, ಕೋಮು ಸೌಹಾರ್ದ ವೇದಿಕೆಯ ಗೌಸ್‌ಮೊಹಿದ್ದೀನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.