ADVERTISEMENT

ತಂಡ್ರ ಹೊಳೆ ಸೇತುವೆ ಶಿಥಿಲ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2011, 19:30 IST
Last Updated 16 ಅಕ್ಟೋಬರ್ 2011, 19:30 IST

ನಾಪೋಕ್ಲು: ಸಮೀಪದ ದೊಡ್ಡ ಪುಲಿಕೋಟು, ಸಣ್ಣಪುಲಿಕೋಟು, ಅಯ್ಯಂಗೇರಿ ಹಾಗೂ ಕೋರಂಗಾಲ ಗ್ರಾಮಗಳು ಮಳೆಗಾಲದಲ್ಲಿ ಬರುವ ಪ್ರವಾಹದಿಂದಾಗಿ ಸಂಕಷ್ಟ ಎದುರಿಸಬೇಕಾಗಿದೆ. ಬಲ್ಲಮಾವಟಿ ಹಾಗೂ ಪುಲಿಕೋಟು ಗ್ರಾಮಗಳ ನಡುವೆ ಹರಿಯುವ ತಂಡ್ರ ಹೊಳೆ ಸೇತುವೆ ಶಿಥಿಲಗೊಂಡಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ತಂಡ್ರ ಹೊಳೆ ಸಮೀಪದಲ್ಲಿಯೇ ಕಾವೇರಿ ನದಿ ಹರಿಯುತ್ತಿದ್ದು, ಕಾವೇರಿಯಲ್ಲಿ ಪ್ರವಾಹ ಹೆಚ್ಚಾದಂತೆ ತಂಡ್ರ ಹೊಳೆಯ ನೀರಿನ ಮಟ್ಟವೂ ಹೆಚ್ಚಾಗಿ ಸೇತುವೆ ಮೇಲೆ ನೀರು ಹರಿಯುತ್ತದೆ.

ಇದರಿಂದಾಗಿ ನಾಪೋಕ್ಲು-ಭಾಗಮಂಡಲ ನಡುವಿನ ಸಂಚಾರ ಕಡಿತಗೊಳ್ಳುತ್ತದೆ. ಭಾಗಮಂಡಲದ ಕಾವೇರಿ ನದಿಯಲ್ಲಿ ಪ್ರವಾಹ ಉಂಟಾಗಿ ಅಲ್ಲಿಯೂ ಸಂಚಾರ ಅಸ್ತವ್ಯಸ್ತಗೊಳ್ಳುತ್ತದೆ.

ತಂಡ್ರ ಹೊಳೆಗೆ ನಿರ್ಮಿಸಲಾದ ಸೇತುವೆ ಸ್ವಾತಂತ್ರ್ಯಪೂರ್ವ ಕಾಲದ್ದಾಗಿದ್ದು, ಇದೀಗ ಶಿಥಿಲಾವಸ್ಥೆ ತಲುಪಿದೆ. ಹೊಸ ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಪ್ರಸ್ತುತ ಹುಣಸೂರಿನಿಂದ ತಲಕಾವೇರಿಗೆ ಹೆದ್ದಾರಿ ನಿರ್ಮಿಸುವ ಯೋಜನೆ ಚಾಲನೆಯಲ್ಲಿದ್ದು, ಈಗಲಾದರೂ ಹೊಸ ಸೇತುವೆ ನಿರ್ಮಾಣಗೊಳ್ಳಬಹುದು ಎಂಬುದು ಗ್ರಾಮಸ್ಥರ ಆಶಯ.

ನಾಪೋಕ್ಲು-ಭಾಗಮಂಡಲ ನಡುವಿನ ರಸ್ತೆಯು ವಿರಾಜಪೇಟೆಯಿಂದ ಕಕ್ಕಬ್ಬೆ, ನಾಪೋಕ್ಲು, ನೆಲಜಿ ಮೂಲಕ ತಲಕಾವೇರಿಗೆ ಸಾಗುವ ಮುಖ್ಯರಸ್ತೆ ಆಗಿದ್ದರೂ ಸರ್ಕಾರದ ನಿರ್ಲಕ್ಷ್ಯದಿಂದ ಅಭಿವೃದ್ಧಿಯಾಗಿಲ್ಲ ಎಂಬುದು ಗ್ರಾಮಸ್ಥರ ಅಳಲು.

ಈಗಾಗಲೇ ತಂಡ್ರ ಹೊಳೆಗೆ ನೂತನ ಸೇತುವೆ ನಿರ್ಮಿಸುವ ಬಗ್ಗೆ ಜಿ.ಪಂ. ಅಧ್ಯಕ್ಷ ಶಾಂತೇಯಂಡ ರವಿಕುಶಾಲಪ್ಪ ಹಾಗೂ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರ ಗಮನಕ್ಕೆ ತರಲಾಗಿದೆ ಎಂದು ಬಲ್ಲಮಾವಟಿ ಗ್ರಾ.ಪಂ. ಸದಸ್ಯರಾದ ಕರವಂಡ ಲವನಾಣಯ್ಯ, ಚೋಕಿರ ಭೀಮಯ್ಯ, ಎಪಿಎಂಸಿ ಸದಸ್ಯ ದಯಾಕುಟ್ಟಪ್ಪ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.