ADVERTISEMENT

ತಂತ್ರಜ್ಞಾನದ ಜೊತೆಗೆ ಸಂಸ್ಕೃತಿ ಬೇಕು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2011, 19:00 IST
Last Updated 30 ಮಾರ್ಚ್ 2011, 19:00 IST
ತಂತ್ರಜ್ಞಾನದ ಜೊತೆಗೆ ಸಂಸ್ಕೃತಿ ಬೇಕು
ತಂತ್ರಜ್ಞಾನದ ಜೊತೆಗೆ ಸಂಸ್ಕೃತಿ ಬೇಕು   

ಹುಬ್ಬಳ್ಳಿ: ’ನಮ್ಮ ಯುವ ಜನತೆ ತಂತ್ರಜ್ಞಾನದ ನಾಗಾಲೋಟದಲ್ಲಿ ಕಳೆದುಹೋಗದೇ ಕನಸುಗಳನ್ನು ಕಾಪಿಟ್ಟು, ಕಟ್ಟಿಕೊಳ್ಳಬೇಕಾದರೆ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಯ ಗೀಳು ಹಚ್ಚಿಕೊಳ್ಳಬೇಕು. ಯುವಜನೋತ್ಸವದಂತಹ ಪ್ರತಿಭಾ ಪ್ರೇರಣಾ ವೇದಿಕೆಗಳು ಸ್ವತಂತ್ರ ಆಲೋಚನೆ ಹಾಗೂ ಆತ್ಮವಿಶ್ವಾಸದ ಸ್ವಾವಲಂಬಿತನ ಕಲಿಸುತ್ತವೆ’ ಎಂದು ಹಿರಿಯ ಕವಿ ಡಾ. ಚೆನ್ನವೀರ ಕಣವಿ ಹೇಳಿದರು.

ಎರಡನೇ ವಿಶ್ವ ಕನ್ನಡ ಸಮ್ಮೇಳನ -2011ರ ಸ್ಮರಣಾರ್ಥ, ನಗರದ ವಿಶ್ವಚೇತನ ಪ್ರತಿಷ್ಠಾನದ ಆಕ್ಸ್‌ಫರ್ಡ್ ಪಾಲಿಟೆಕ್ನಿಕ್ ಬುಧವಾರ ಹಮ್ಮಿಕೊಂಡಿದ್ದ ಅಂತರಪಾಲಿಟೆಕ್ನಿಕ್ ಸಾಂಸ್ಕೃತಿಕ ಯುವಜನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.’ವಿಜ್ಞಾನ ಕಾಲೇಜುಗಳಿಗೆ ಇಂದು ನಮ್ಮಲ್ಲಿ ಬರವಿಲ್ಲ. ವೈಜ್ಞಾನಿಕ ಪ್ರಗತಿಯೂ ಗಣನೀಯವಾಗಿ ಆಗಿದೆ. ಆದರೂ, ನಮ್ಮ ಜನರಲ್ಲಿ ವೈಜ್ಞಾನಿಕ ಮನೋಭಾವ ನಿರೀಕ್ಷಿತ ಮಟ್ಟದಲ್ಲಿ ಬೆಳೆದಿಲ್ಲ. ಭವಿಷ್ಯ ನಂಬುವುದು, ಮಾಟ-ಮಂತ್ರ-ತಂತ್ರ, ಅಂಧಶ್ರದ್ಧೆ, ಪವಾಡ, ಪ್ರಳಯ, ಪುನರ್ಜನ್ಮ ಮೊದಲಾದ ಕೆಲಸಕ್ಕೆ ಬಾರದ ವಿಷಯಗಳಲ್ಲಿ ತೊಡಗಿಸಿಕೊಂಡಿದ್ದೇವೆ’ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ವಿಶ್ವಚೇತನ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ವಿನಯಚಂದ್ರ ಮಹೇಂದ್ರಕರ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಆಕ್ಸಫರ್ಡ್ ಮಹಾವಿದ್ಯಾಲಯ ಹಾಗೂ ರೋಟರಿ ಕ್ಲಬ್ ವತಿಯಿಂದ ಕಣವಿ ಅವರನ್ನು ಸನ್ಮಾನಿಸಲಾಯಿತು. ಹುಡಾ ಅಧ್ಯಕ್ಷ ದತ್ತಾ ಡೋರ್ಲೆ, ವಿಶ್ವಚೇತನ ಪ್ರತಿಷ್ಠಾನದ ನಿರ್ದೇಶಕ ಶಾಂತಿಲಾಲ್ ಜೈನ್ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದರು.

ಉಮಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪ್ರಾಚಾರ್ಯ ಹಾಗೂ ತಾಂತ್ರಿಕ ನಿರ್ದೇಶಕ ಡಿ.ಕೆ. ಕುಲಕರ್ಣಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಧಾ ರಾಮದುರ್ಗ ನಿರೂಪಿಸಿದರು. ಸಾಂಸ್ಕೃತಿಕ ಸಂಘಗಳ ಕಾರ್ಯಾಧ್ಯಕ್ಷ ಎಂ.ಕೆ. ನಾರಾಯಣ ವಂದಿಸಿದರು.ನಂತರ ನಡೆದ ವಿವಿಧ ಸ್ಪರ್ಧೆಗಳಲ್ಲಿ ಉತ್ತರ ಕರ್ನಾಟಕದ 22 ಪಾಲಿಟೆಕ್ನಿಕ್ ಮಹಾವಿದ್ಯಾಲಯಗಳಿಂದ 210 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.