ಹಾಸನ: ದೆಹಲಿ ಹೈಕೋರ್ಟ್ ಆವರಣದಲ್ಲಿ ಬುಧವಾರ ನಡೆದ ಬಾಂಬ್ ದಾಳಿಯನ್ನು ಖಂಡಿಸಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಗುರುವಾರ ವಕೀಲರು ನ್ಯಾಯಾಲಯದ ಕಲಾಪಗಳನ್ನು ಕೆಲ ಕಾಲ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ.
ವಕೀಲರ ಸಂಘದ ನೇತೃತ್ವದಲ್ಲಿ ಹಾಸನದಲ್ಲಿ ವಕೀಲರು ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.`ಉಗ್ರರು ಭಾರತದ ಅಖಂಡತ್ವದ ಮೇಲೆ ದಾಳಿ ಮಾಡುತ್ತಿದ್ದಾರೆ. ಇಂಥ ಕೃತ್ಯಗಳನ್ನು ಮಟ್ಟ ಹಾಕುವತ್ತ ಸರ್ಕಾರ ಗಮನಹರಿಸಬೇಕಾಗಿದೆ. ಭಯೋತ್ಪಾದನೆಯಲ್ಲಿ ಭಾಗಿಯಾಗಿರುವವರಿಗೆ ನ್ಯಾಯಾಲಯಗಳು ವಿಧಿಸುವ ಶಿಕ್ಷೆಯನ್ನು ಕೂಡಲೇ ಜಾರಿ ಮಾಡಲು ಸರ್ಕಾರ ಮುಂದಾಗಬೇಕು~ ಎಂದು ವಕೀಲರು ಆಗ್ರಹಿಸಿದರು.
ದೆಹಲಿ ಮಾತ್ರವಲ್ಲ, ದೇಶದ ವಿವಿಧ ಭಾಗಗಳಲ್ಲಿ ದಾಳಿಗಳು ನಡೆಯುತ್ತಿವೆ. ನೂರಾರು ಅಮಾಯಕರು ಭಯೋತ್ಪಾದಕರ ದಾಳಿಗೆ ತುತ್ತಾಗುತ್ತಿದ್ದಾರೆ. ಇಷ್ಟಾದರೂ ಸರ್ಕಾರ ಭಯೋತ್ಪಾದನೆ ಮಟ್ಟಹಾಕಲು ಸೂಕ್ತ ಕ್ರಮ ಕೈಗೊಳ್ಳದಿರುವುದು ಆತಂಕದ ವಿಚಾರವಾಗಿದೆ. ಈಗಲಾದರೂ ಎಚ್ಚೆತ್ತುಕೊಂಡು ಸೂಕ್ತ ಕಾನೂನುಗಳನ್ನು ರಚಿಸಿ ಉಗ್ರರನ್ನು ನಿಗ್ರಹಿಸುವ ಕಾರ್ಯ ಆರಂಭಿಸಬೇಕು~ ಎಂದು ಆಗ್ರಹಿಸಿದರು.
ವಕೀಲರ ಸಂಘದ ಅಧ್ಯಕ್ಷ ಎಲ್.ಎನ್. ನರಸಿಂಹ ಮೂರ್ತಿ ನೇತೃತ್ವದಲ್ಲಿ ಕೋರ್ಟ್ ಸಮೀಪದಿಂದ ಮೆರವಣಿಗೆ ಆರಂಭಿಸಿದ ವಕೀಲರು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಆಗಮಿಸಿದರು. ಇಲ್ಲಿ ಭಯೋತ್ಪಾದಕರ ಕೃತ್ಯವನ್ನು ಖಂಡಿಸುವ ಮತ್ತು ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಹಾನುಭೂತಿ ವ್ಯಕ್ತಪಡಿಸುವ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಕಳುಹಿಸುವ ಮೂಲಕ ಪ್ರತಿಭಟನೆಯನ್ನು ಕೊನೆಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.