ADVERTISEMENT

ದೇವನಗರಿಯಲ್ಲಿ ಹೆಚ್ಚಿದ ಹಚ್ಚೆಯ ‘ಹುಚ್ಚು’

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2017, 8:39 IST
Last Updated 18 ಡಿಸೆಂಬರ್ 2017, 8:39 IST

ದಾವಣಗೆರೆ: ‘ಅಣ್ಣಾ.. ನನ್ನ ಕೈ ಮೇಲೊಂದು ಫ್ಲವರ್, ಒಂದು ಹಾರ್ಟ್, ಎರಡು ಲೆಟರ್ಸ್ ಇರೋ ಹಾಗೆ ಸೂಪರ್ ಡಿಸೈನ್ ಟ್ಯಾಟೂ ಬೇಕು. ಒಂದೊಳ್ಳೆ ಡಿಸೈನ್ ತೋರ್ಸು..’ ‘ಸರ್, ನನ್ನ ಕತ್ತಿನ ಭಾಗದಲ್ಲಿ ಸಿಂಪಲ್ ಆದ ಡಿಸೈನ್ ಹಾಕ್ತೀರಾ.. ಲೇಟೆಸ್ಟ್ ಯಾವ್ದಿದೆ..?’ ‘ಗುರೂ.. ನನ್ನ ತೋಳಲ್ಲೊಂದು ಹಳೆಯದಾದ ಹಚ್ಚೆ ಐತಿ. ಅದ್ರ ಮೇಲೆ ಕವರ್ ಅಪ್ ಟ್ಯಾಟೂ ಹಾಕ್ತೀಯಾ..?’

ಇದು ಹಚ್ಚೆ ಕಲಾವಿದರ ಬಳಿಗೆ ಬರುವ ಗ್ರಾಹಕರು ವಿಚಾರಿಸುವ ಮಾದರಿಗಳು!. ದಾವಣಗೆರೆಯಲ್ಲಿ ಕೆಲವು ವರ್ಷಗಳ ಹಿಂದಿನವರೆಗೆ ತಮ್ಮ ಪ್ರೀತಿ‍ಪಾತ್ರರ ನೆನಪಿಗೆ, ಕುಲದೇವರ ಸ್ಮರಣೆಗೆ ಹಾಕಿಸಿಕೊಳ್ಳುತ್ತಿದ್ದ ‘ಹಚ್ಚೆ’ಯ ಸ್ವರೂಪ ಈಗ ಬದಲಾಗಿದೆ. ಯುವಕರ ಪಾಲಿಗೆ ‘ಟ್ಯಾಟೂ’ ಆಗಿ ಫ್ಯಾಷನ್‌ ಸ್ವರೂಪ ಪಡೆದುಕೊಂಡಿದೆ. ಕಪ್ಪು ಶಾಯಿಗೆ ಸೀಮಿತವಾಗಿದ್ದ ಜಾಗದಲ್ಲೀಗ ಹಲವು ಬಣ್ಣಗಳು, ವಿನ್ಯಾಸಗಳು ತಂತ್ರಜ್ಞಾನದ ಬಳಕೆಯೊಂದಿಗೆ ಕೂಡಿಕೊಂಡು ಆಕರ್ಷಣೆ ಹೆಚ್ಚಿಸುತ್ತಿವೆ.

‘ನಾನು 2010ರಿಂದ ಈ ವೃತ್ತಿಯಲ್ಲಿದ್ದೇನೆ. ಆ ದಿನಗಳಲ್ಲಿ ಟ್ಯಾಟೂ ಬಗ್ಗೆ ಅನೇಕರು ಸುಮ್ಮನೆ ಬಂದು ವಿಚಾರಿಸಿಕೊಂಡು ಹೋಗುತ್ತಿದ್ದರು. ಕೆಲಸ ಕಡಿಮೆಯಿತ್ತು. ಆದರೆ, ಈಗ ದಿನವಿಡೀ ಕೆಲಸವಿರುತ್ತದೆ’ ಎಂದು ಮಾತಿಗಿಳಿದವರು ಎಂಸಿಸಿ ‘ಬಿ ’ ಬ್ಲಾಕ್‌ನ ಟ್ಯಾಟೂ ಗ್ಯಾಲರಿಯ ಎನ್.ವಿ.ಭರತ್.

ADVERTISEMENT

‘ಸಿನಿಮಾ, ಪಾಪ್ ಆಲ್ಬಮ್‌ ನಟರು, ಡಬ್ಲ್ಯು.ಡಬ್ಲ್ಯು.ಇ.ನಂತಹ ಸ್ಪರ್ಧೆಗಳಲ್ಲಿ ಭಾಗವಹಿಸಿದವರು ಮೈಮೇಲೆ ಹಾಕಿಸಿಕೊಂಡ ಹಚ್ಚೆಗಳು ಕಾಲೇಜು ಯುವಕರ ಅಚ್ಚುಮೆಚ್ಚಿನವು. ಈಗ ನಗರದಲ್ಲಿ ಕಾಲೇಜುಗಳ ಸಂಖ್ಯೆ ಹೆಚ್ಚಿದೆ. ನಮ್ಮ ಜಿಲ್ಲೆ, ರಾಜ್ಯ, ಹೊರ ರಾಜ್ಯಗಳ, ಅಂತೆಯೇ ವಿದೇಶಗಳ ವಿದ್ಯಾರ್ಥಿಗಳೂ ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹಾಗಾಗಿ ಟ್ಯಾಟೂಗೆ ಬೇಡಿಕೆ ಹೆಚ್ಚಿದೆ’ ಎನ್ನುತ್ತಾರೆ ಅವರು.

ಟ್ಯಾಟೂ ಬರೆಸಿಕೊಳ್ಳುತ್ತಿದ್ದ ದಾವಣಗೆರೆಯ ಪ್ರಮೋದ್, ಒಂದೊಂದು ಸಂದರ್ಭದಲ್ಲಿ ಒಂದೊಂದು ವಿನ್ಯಾಸಕ್ಕೆ ಬೇಡಿಕೆ ಇರುತ್ತದೆ ಎಂದರು. ಕನ್ನಡದ ‘ಉಗ್ರಂ’ ಸಿನಿಮಾದಲ್ಲಿ ನಟ ಶ್ರೀಮುರಳಿ ಹಾಕಿಸಿಕೊಂಡಿದ್ದ ಟ್ಯಾಟೂಗೆ ಬೇಡಿಕೆ ಹೆಚ್ಚಿತ್ತು ಎಂದು ಅವರು ನೆನಪಿಸಿಕೊಂಡರು.

‘ನಾನು ಮಗಳ ಹೆಸರನ್ನು ತೋಳಿನಲ್ಲಿ ಬರೆಸುತ್ತಿದ್ದೇನೆ. ಸ್ವಲ್ಪ ನೋವಾಗುತ್ತದೆ. ಆದರೆ, ಗಾಯ ಒಣಗಿದ ಮೇಲೆ ಅದನ್ನು ನೋಡಲು ಖುಷಿಯಾಗುತ್ತದೆ’ ಎಂದು ಮುಗುಳ್ನಕ್ಕವರು ಪಿ.ಜೆ.ಬಡಾವಣೆಯ ಗೃಹಿಣಿ ಕಾವ್ಯಾ.

ಕಲಾವಿದರ ಮಾಹಿತಿ ಅಗತ್ಯ: ಟ್ಯಾಟೂ ಕಲಾವಿದರಾಗಲು ಕನಿಷ್ಠ 45 ದಿನಗಳ ತರಬೇತಿ ಪಡೆಯವುದು ಅಗತ್ಯ. ಇದಕ್ಕೆ ಸಂಬಂಧಿಸಿದ ಕೋರ್ಸ್ ಬೆಂಗಳೂರು, ಮುಂಬೈನಂತಹ ಮಹಾನಗರಗಳಲ್ಲಿಯೂ ಲಭ್ಯವಿದೆ. ತರಬೇತಿ ಇಲ್ಲದೇ ಈ ವೃತ್ತಿ ಮಾಡುವುದು ಸಾಧ್ಯವೇ ಇಲ್ಲ ಎನ್ನುತ್ತಾರೆ ಭರತ್‌.

ಹಚ್ಚೆ ಹಾಕಿಸಿಕೊಳ್ಳುವ ಮೊದಲು ಕಲಾವಿದರ ಬಗ್ಗೆ ತಿಳಿದುಕೊಳ್ಳಬೇಕು. ಆತ ಬಳಸುವ ಸೂಜಿ, ಶಾಯಿಯ ಮಾಹಿತಿ ಪಡೆದುಕೊಳ್ಳುವುದು ಅಗತ್ಯ. ಇಲ್ಲದಿದ್ದರೆ ಚರ್ಮಕ್ಕೆ ತೊಂದರೆಯಾಗುವ ಸಾಧ್ಯತೆಯಿದೆ ಎಂದು ಅವರು ಸಲಹೆ ನೀ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.