ADVERTISEMENT

ದೇವರ ಸೃಷ್ಟಿಯ ಬಾಳಿನ ಗೋಳು!

​ಪ್ರಜಾವಾಣಿ ವಾರ್ತೆ
Published 10 ಜೂನ್ 2012, 10:20 IST
Last Updated 10 ಜೂನ್ 2012, 10:20 IST
ದೇವರ ಸೃಷ್ಟಿಯ ಬಾಳಿನ ಗೋಳು!
ದೇವರ ಸೃಷ್ಟಿಯ ಬಾಳಿನ ಗೋಳು!   

ಎಲ್ಲ ಧರ್ಮಿಯರಿಗೂ ತೃಪ್ತಿ ಆಗುವಂತೆ  ಭವಾನಿ, ದುರ್ಗೆ, ಭಗವಂತ, ಶ್ರೀಕೃಷ್ಣ, ವಿಷ್ಣು, ರೇಣುಕ, ಯೇಸು, ಪೈಗಂಬರ್... ಹೀಗೆ ಎಲ್ಲ ದೇವರ ಮೂರ್ತಿಯೂ ಸಿದ್ಧ ಮಾಡುತ್ತಾರೆ. ಉತ್ತಮ ತಾಮ್ರ, ಹಿತ್ತಾಳೆ ಮಿಶ್ರಮಾಡಿ ನಡು ರಸ್ತೆಮೇಲೆ ಕುಳಿತು ಆಕರ್ಷಕವಾಗಿ ಮೂರ್ತಿ ಸಿದ್ಧಪಡಿಸಿ ಕೊಟ್ಟು, ದೇವರ ಮೂರ್ತಿ ಪಡೆದ ವ್ಯಕ್ತಿ ಕೊಟ್ಟಷ್ಟು ಕಾಸು ಪಡೆದುಕೊಂಡು ಹೊರಡುತ್ತಾರೆ. ಊರಿಂದ ಊರಿಗೆ ಅಲೆಯುತ್ತ ಹೊಟ್ಟೆ ತುಂಬಿಸಿಕೊಳ್ಳುವ ಕಾಯಕ ಜೀವಿ ರುಖಿಯಾಬಿ ಅಲ್ಲಾಬಕ್ಷ ಶೇಕ್. ಅವರಂತಹ ಮೂರ್ತಿ ತಯಾರಿಸುವ ಕಾಯಕ ಜೀವಿಗಳ ಬದುಕು ಇಂದಿನ ಯಾಂತ್ರಿಕ ಯುಗದಲ್ಲಿ ಬೀಸುವ ಗಾಳಿಯ ಮುಂದಿರುವ ದೀಪದಂತೆ ಆಗಿದೆ.

ಪ್ರತಿ ತಿಂಗಳಿಗೆ ಒಮ್ಮೆ ಕರಾರುವಕ್ಕಾಗಿ ಚಿಟಗುಪ್ಪಾ ಪಟ್ಟಣಕ್ಕೆ ಬರುತ್ತಾರೆ. ಬಹುತೇಕ ಎಲ್ಲ ಗಲ್ಲಿ ಗಲ್ಲಿ ಸುತ್ತಾಡಿ, ಎಲ್ಲ ಜಾತಿ ಜನಾಂಗದವರ ಮನೆಗಳಿಗೆ ಹೋಗಿ ಅವರಲ್ಲಿದ್ದ ಹಳೆ ತಾಮ್ರ, ಹಿತ್ತಾಳೆ ಪಾತ್ರೆಗಳು ಪಡೆದುಕೊಳ್ಳುತ್ತಾರೆ. ಅವರು ತಿಳಿಸಿದ ದೇವರ ಮೂರ್ತಿಯನ್ನು ರಸ್ತೆ ಬದಿಯಲ್ಲಿ ಒಲೆ ಹಾಕಿಕೊಂಡು  ಲೋಹದಿಂದ ನಾಜೂಕಾಗಿ ಸಿದ್ಧಪಡಿಸುತ್ತಾರೆ. ಆಕೃತಿ ನೀಡಿ, ಸಿದ್ಧಪಡಿಸಿ ಕೊಡುತ್ತಾರೆ. ಆ ಬಳಿಕ  ಮನೆಯವರು ಕೊಟ್ಟಷ್ಟು ಹಣ ಪಡೆದುಕೊಂಡು ಬದುಕು ಸಾಗಿಸುತ್ತಾರೆ.

ಇದುವರೆಗೂ ಸಹಸ್ರಾರು ದೇವರ ಮೂರ್ತಿಗಳು ಸಿದ್ಧಪಡಿಸಿದ್ದು, ಪಟ್ಟಣದ ಪ್ರತಿ ಮನೆಗಳಲ್ಲಿ ಒಂದಾದರು ನಾವು ಮಾಡಿಕೊಟ್ಟ ದೇವರ ಮೂರ್ತಿ ಸಿಗುತ್ತವೆ. ದೇವರ ಮೂರ್ತಿ ಮಾಡುವ ಕಾಯಕ ಪವಿತ್ರವಾದದ್ದು ಎಂದು ನಮ್ಮ ಹಿರಿಯರು ಹೇಳುತ್ತಿದ್ದರು. ಅದಕ್ಕಾಗಿ ಬಾಲ್ಯದಿಂದಲೇ ಈ ಕಾಯಕ ಮಾಡುತ್ತ ಬರುತ್ತಿದ್ದೇವೆ. ಆದರೆ ಇದುವರೆಗೂ ವಾಸಿಸಲು ಸ್ವಂತ ಮನೆಯಿಲ್ಲ, ತೊಡಲು ಬಟ್ಟೆ ಸಿಗುವುದಿಲ್ಲ. ಸಂಕಷ್ಟದ ಬದುಕು ನಮ್ಮದಾಗಿದೆ. ದೇವರು ನಮಗ್ಯಾಕೆ ಹೀಗೆ ಮಾಡಿದ್ದಾನೋ ತಿಳಿಯುತ್ತಿಲ್ಲ,  ನಮ್ಮ ಕಾಯಕದ ಬಗ್ಗೆ ಯಾರು ಕಾಳಜಿ ವಹಿಸೋದಿಲ್ಲ~ ಎಂದು ಹೇಳುವ ರುಖಿಯಾಬಿ ಅವರ ಮಾತು ದೇವರಿಗೆ, ಪ್ರಜ್ಞಾವಂತ ಸಮಾಜಕ್ಕೆ ಸವಾಲು ಹಾಕುವಂತೆ ಕಂಡುಬರುತ್ತದೆ. 

    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.