ADVERTISEMENT

ದೇವಸ್ಥಾನದಲ್ಲಿ ರೂ. 20 ಲಕ್ಷ ಮೌಲ್ಯದ ನಗ ನಾಣ್ಯ ಅಪಹರಣ

​ಪ್ರಜಾವಾಣಿ ವಾರ್ತೆ
Published 12 ಜೂನ್ 2011, 19:30 IST
Last Updated 12 ಜೂನ್ 2011, 19:30 IST

ಚನ್ನಪಟ್ಟಣ: ಇತಿಹಾಸ ಪ್ರಸಿದ್ಧ ದೇವರಹೊಸಳ್ಳಿ ಸಂಜೀವರಾಯ ದೇವಸ್ಥಾನದಿಂದ ಸುಮಾರು 20 ಲಕ್ಷಕ್ಕೂ ಹೆಚ್ಚು ಮೌಲ್ಯದ ನಗದು, ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ  ಭಾನುವಾರ ಬೆಳಗಿನ ಜಾವ 2 ಗಂಟೆ ವೇಳೆಗೆ ನಡೆದಿದೆ.

ದೇವರಹೊಸಳ್ಳಿಯ ಮಧ್ಯಭಾಗದಲ್ಲಿರುವ ಈ ದೇವಸ್ಥಾನದ ಭದ್ರವಾದ ನಾಲ್ಕು ಕಬ್ಬಿಣದ ಬಾಗಿಲುಗಳನ್ನು ಸಲಾಕೆಯಿಂದ ಮೀಟಿ ಒಳನುಗ್ಗಿರುವ ಕಳ್ಳರು ಸುಮಾರು 16ಕೆ.ಜಿ. ಗೂ ಹೆಚ್ಚು ಬೆಳ್ಳಿ, ಅರ್ಧ ಕೆ.ಜಿ. ಚಿನ್ನ, ಹುಂಡಿಯಲ್ಲಿದ್ದ ಲಕ್ಷಾಂತರ ನಗದು ದೋಚಿ ಚಿಲ್ಲರೆ ಹಣ ಬಿಸಾಡಿ ಹೋಗಿದ್ದಾರೆ.

ಗರ್ಭಗುಡಿಯಲ್ಲಿರುವ ದೇವರ ಪ್ರಭಾವಳಿ, ಬಂಗಾರದ ಕಿವಿ, ಮೂಗು, ನಾಮ, ಕಂಠಾಭರಣ, ವಜ್ರದ ಕಣ್ಣುಬ್ಬು, ಗಂಟೆ, ಬೆಳ್ಳಿ ಕವಚ, ತಟ್ಟೆ, ವಜ್ರಾಂಗಿ ಸೇರಿದಂತೆ ಸುಮಾರು 50ರಿಂದ 60 ವರ್ಷಗಳ ಕಾಲದ ಚಿನ್ನಾಭರಣಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ದೇವಸ್ಥಾನದಲ್ಲಿ ಮಲಗಿದ್ದ ನಂಜಪ್ಪ ಹಾಗೂ ಸತ್ಯನಾರಾಯಣ ಅವರ ಕೊಠಡಿಗೆ ಬೀಗ ಹಾಕಿ ಅವರನ್ನು ಈಚೆ ಬರದಂತೆ ಕಳ್ಳರು ನೋಡಿಕೊಂಡಿದ್ದರು.

ADVERTISEMENT

ಭಾನುವಾರ ಬೆಳಿಗ್ಗೆ ದೇವರ ಪೂಜೆಗೆ ಅಣಿಯಾಗಿ ಬಂದ ಶಾಮಣ್ಣ ಭಟ್ಟರು ದೇವಸ್ಥಾನದ ಬಾಗಿಲು ತೆರೆದಿರುವುದು ನೋಡಿ ದಿಗ್ಭಾಂತರಾಗಿ ಪೊಲೀಸರಿಗೆ ಸುದ್ದಿ ತಿಳಿದರು.

ಕೂಡಲೇ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಸ್ನಳ್ಳಿ, ಡಿವೈಎಸ್‌ಪಿ ಟಿ. ಸಿದ್ದಪ್ಪ, ಸಿಪಿಐ ಸುಬ್ರಮಣ್ಯಂ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಬೆಂಗಳೂರಿನಿಂದ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಿ ಶೋಧ ನಡೆಸಲಾಯಿತು. ದೇವಸ್ಥಾನದ ಅರ್ಚಕ ದಯಾನಿಧಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.