ADVERTISEMENT

ಧರ್ಮ ಪಾಲನೆಗೆ ಆಡಂಬರ ಬೇಡ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2011, 19:30 IST
Last Updated 14 ಮಾರ್ಚ್ 2011, 19:30 IST

ರಾಯಚೂರು: ಬಸವಧರ್ಮ ಸರಳ ಮತ್ತು ಸೂಕ್ಷ್ಮ. ಅದನ್ನು ಯಾವುದೇ ರೀತಿಯ ಆಡಂಬರವಿಲ್ಲದೇ ಅನುಸರಿಸಬೇಕು. ಸಾಧಕರಿಗೆ ಪೂಜಾ ಪರಿಕರಗಳಿಗಿಂತ ಜ್ಞಾನ ಮಾರ್ಗವೇ ಯೋಗ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಚಿತ್ರದುರ್ಗದ ಮುರುಘಾಮಠದ ಡಾ.ಶಿವಮೂರ್ತಿ ಶರಣರು ನುಡಿದರು.

ಸೋಮವಾರ ಇಲ್ಲಿನ ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ಸಹಜ ಶಿವಯೋಗ ಮತ್ತು ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ಸಹಜ ಶಿವಯೋಗ ನೆರವೇರಿಸಿ ಆಶೀರ್ವಚನ ನೀಡಿದರು. ಸದ್ಬುದ್ಧಿ ಇದ್ದವರೆಲ್ಲರೂ ಸಾಧಕರೆ. ಅದಕ್ಕೆ ಕಾವಿಧಾರಿಗಳೇ ಆಗಿರಬೇಕು ಅಥವಾ ಅದಕ್ಕೆ ಆದ ಲಾಂಛನ ಬೇಕಾಗಿಲ್ಲ. ಶುದ್ಧಬುದ್ಧಿ ಇದ್ದಲ್ಲಿ ಸಿದ್ಧಿ ಸಾಧ್ಯ. ಸಂಕಲ್ಪ ವಿಕಲ್ಪ ಸಾಧನೆ ಎಂದು ವಿವರಿಸಿದರು.

ಅಸಮಾನತೆ, ಅಂಧಶ್ರದ್ಧೆ ಹಾಗೂ ಅವೈಜ್ಞಾನಿಕ ವಿಚಾರಗಳನ್ನು ಹೋಗಲಾಡಿಸಲು 12ನೇ ಶತಮಾನದಲ್ಲಿ ಅನುಭವ ಮಂಟಪ ಕಾರ್ಯನಿರ್ವಹಿಸಿತ್ತು. ಇದರಿಂದ ಬಸವಾದಿ ಶರಣರು ಜಗತ್ ಕಲ್ಯಾಣ ಸಾಧಿಸಲು ಸಾಧ್ಯವಾಯಿತು ಎಂದು ನುಡಿದರು. ಇದೇ ಸಂದರ್ಭದಲ್ಲಿ ಬಸವ ಪದ್ಧತಿಯ ಪ್ರಕಾರ ಕಲ್ಯಾಣ ಮಹೋತ್ಸವ ನಡೆಯಿತು. ಮುರುಘಾ ಶರಣರು ಬಸವಾದಿ ಶರಣರು ಬೋಧಿಸಿದ ವಚನಗಳ ಮೂಲಕ  ಮಲ್ಲಿಕಾರ್ಜುನ ನೀರಮಾನ್ವಿ ಹಾಗೂ ಭಾಗ್ಯ ಚಿಂಚರಕಿ ಅವರ ವಿವಾಹ ನೆರವೇರಿಸಿದರು.

 ಸೋಮವಾರಪೇಟೆಮಠದ ರಾಚೋಟಿ ವೀರ ಶಿವಾಚಾರ್ಯ ಸ್ವಾಮೀಜಿ, ಬಸವ ಪ್ರಸಾದ ಸ್ವಾಮಿಗಳು, ಬಸವಭೂಷಣ ಸ್ವಾಮಿಗಳು, ಬಸವಕೇಂದ್ರದ ಅಧ್ಯಕ್ಷರು, ಸದಸ್ಯರು ಹಾಜರಿದ್ದರು.  ಬಸವ ಕೇಂದ್ರದ ಬಸವರಾಜಪ್ಪ ವಕೀಲ, ಮಾಚನೂರು ಶರಣಪ್ಪ ಪಾಟೀಲ, ಚನ್ನಬಸವಣ್ಣ ಮಹಾಜನಶೆಟ್ಟಿ ಹಾಗೂ ಮತ್ತಿತರರು ಹಾಜರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.