ADVERTISEMENT

ಪಿಂಚಣಿಗಾಗಿ ಶೀಘ್ರಲಿಪಿಗಾರ ಪರದಾಟ

​ಪ್ರಜಾವಾಣಿ ವಾರ್ತೆ
Published 2 ಜೂನ್ 2012, 19:30 IST
Last Updated 2 ಜೂನ್ 2012, 19:30 IST
ಪಿಂಚಣಿಗಾಗಿ ಶೀಘ್ರಲಿಪಿಗಾರ ಪರದಾಟ
ಪಿಂಚಣಿಗಾಗಿ ಶೀಘ್ರಲಿಪಿಗಾರ ಪರದಾಟ   

ಹುಬ್ಬಳ್ಳಿ:  `ಇದು ಗೌರವದ ಪ್ರಶ್ನೆ. ಹಸಿವಿನ ಪ್ರಶ್ನೆಯೂ ಹೌದು. ಸರ್ಕಾರಿ ಇಲಾಖೆ ಅಧಿಕಾರಿಗಳ ಅಮಾನವೀಯ ವರ್ತನೆ ನನ್ನ ಈ ಸ್ಥಿತಿಗೆ ಕಾರಣ. ಪ್ರಾಮಾಣಿಕತೆಗೆ ಇಲ್ಲಿ ಸ್ಥಾನವಿಲ್ಲ. ನನ್ನ ಪಾಲಿಗೆ ಉಳಿದಿರುವುದು ಕುಟುಂಬ ಸಹಿತ ಸಾವು ಮಾತ್ರ.~

- ನಿವೃತ್ತ ಸರ್ಕಾರಿ ಶೀಘ್ರಲಿಪಿಗಾರರ ರವೀಂದ್ರನಾಥ ಸಂಗಪ್ಪ ಶೆಟ್ಟರ್ ಒಂದೇ ಸಮನೆ ಕಣ್ಣೀರಿಟ್ಟರು. ಪತ್ನಿ ಅಕ್ಕಮಹಾದೇವಿ ಮತ್ತು ನಾಲ್ವರು ಮಕ್ಕಳ ಕಣ್ಣಂಚುಗಳೂ ಒದ್ದೆಯಾದವು!

ಚಿಕ್ಕಮಗಳೂರು ಕಾರ್ಮಿಕ ಕಚೇರಿಯಿಂದ ಈ ವರ್ಷ ಮಾರ್ಚ್ 31ರಂದು ನಿವೃತ್ತಿಯಾದ ಎಂ.ಎ., ಎಲ್.ಎಲ್.ಬಿ. (ಸ್ಪೆಷಲ್) ಪದವೀಧರ ಶೆಟ್ಟರ್, ನಿವೃತ್ತಿ ನಂತರದ ವೇತನ, ಸೌಲಭ್ಯ ಸಿಗದೆ ಹತಾಶರಾಗಿದ್ದಾರೆ. ಈ ನಿಟ್ಟಿನಲ್ಲಿ ಹೋರಾಟದ ಹಾದಿ ಹಿಡಿದು ಸೋತು ಸುಣ್ಣವಾಗಿರುವ ಅವರು `ಪ್ರಜಾವಾಣಿ~ ಜೊತೆ ಅಂತರಂಗ ಬಿಚ್ಚಿಟ್ಟರು.

ಶೆಟ್ಟರ್ ಮೂಲತಃ ಬಾಗಲಕೋಟೆ ಜಿಲ್ಲೆಯ ಇಳಕಲ್ ಬಳಿಯ ಚಿಕ್ಕಕೊಡಗಲಿಯವರು. ಐದು ಎಕರೆಯಷ್ಟು ಜಮೀನು ಇದೆ. ಅದನ್ನು ನಂಬಿ ಬದುಕು ಸಾಧ್ಯವಿಲ್ಲ ಎಂದು ಸರ್ಕಾರಿ ಉದ್ಯೋಗ ಆರಿಸಿಕೊಂಡ ಅವರು1992ರಿಂದ ಹಳೇ ಹುಬ್ಬಳ್ಳಿಯ ನವ ಅಯೋಧ್ಯಾನಗರದಲ್ಲಿ ಬಾಡಿಗೆ ಮನೆಯಲ್ಲಿ  ನೆಲೆಸಿದ್ದಾರೆ.

1985ರಲ್ಲಿ ಟೈಪಿಸ್ಟ್ ಆಗಿ ವಿಜಾಪುರದಲ್ಲಿ ಕಾರ್ಮಿಕ ಇಲಾಖೆ ಸೇರಿ ಬೆಳಗಾವಿ, ಬಳ್ಳಾರಿ, ಹುಬ್ಬಳ್ಳಿ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಮತ್ತಿತರ ಕಡೆ ಕೆಲಸ ಮಾಡಿದ್ದೇನೆ. 26 ವರ್ಷದ ಸೇವಾ ಅವಧಿ ಮಧ್ಯೆ ಸ್ನಾತಕೋತ್ತರ, ಕಾನೂನು ಪದವಿ (2002) ಮುಗಿಸಿದೆ. ನನ್ನ ಈ ಅತಿ ಓದಿನ ಪರಿಣಾಮವೋ ಏನೋ ಗೊತ್ತಿಲ್ಲ. ಸೇವಾ ಅವಧಿಯ ಆರಂಭದಿಂದಲೂ ದ್ವೇಷದಿಂದ ಕಾಡುತ್ತಲೇ ಬಂದ ಇಲಾಖಾ ಅಧಿಕಾರಿಗಳು ನಿವೃತ್ತಿ ಬಳಿಕದ ಸವಲತ್ತುಗಳನ್ನು ತಡೆಹಿಡಿದಿದ್ದಾರೆ. ನಿವೃತ್ತಿಗೆ ಮೂರು ತಿಂಗಳ ಮೊದಲೇ ಸೇವಾ ಪುಸ್ತಕದೊಂದಿಗೆ ನಿವೃತ್ತಿ ವೇತನ ನಿಗದಿಗೊಳಿಸಬೇಕಾಗಿದ್ದ ಇಲಾಖೆ ಸುಮ್ಮನಿದೆ. ಯಾವುದೇ ಪ್ರತಿಕ್ರಿಯೆ ನೀಡಲು ತಯಾರಿಲ್ಲ~ ಎಂದು ಶೆಟ್ಟರ್ ಆರೋಪಿಸಿದ್ದಾರೆ. `20 ವರ್ಷಗಳಿಂದ ಈ ಮನೆಯಲ್ಲೆ ಇದ್ದೇವೆ. ದೊಡ್ಡ ಮಗಳಿಗೆ ಮದುವೆಯಾಗಿದೆ. ನಂತರದವನು ಊರಲ್ಲಿದ್ದಾನೆ. ಇನ್ನೊಬ್ಬಳು ಎಂಜಿಯರಿಂಗ್ ಓದುತ್ತಿದ್ದಾಳೆ. ಸಣ್ಣ ಮಗ ಪಿಯುಸಿ ಮುಗಿಸಿದ್ದಾನೆ. ನನ್ನ ಸಂಬಳವೊಂದೇ ಆದಾಯ. ನಿವೃತ್ತಿ ಬಳಿಕ ಮಕ್ಕಳ ಶಿಕ್ಷಣ, ಕಿರಾಣಿ ಖರ್ಚು ಮನೆ ಬಾಡಿಗೆ ನಿಭಾಯಿಸುವುದು ಕಷ್ಟವಾಗಿದೆ. ಕುಟುಂಬ ಬೀದಿಗೆ ಬಿದ್ದರೂ ಅಚ್ಚರಿ ಇಲ್ಲ~ ಎಂದು ಕಣ್ಣೀರು ಸುರಿಸಿದರು.

`ಈವರೆಗೆ ಇನ್ನೊಬ್ಬರ ಮುಂದೆ ಸಾಲಕ್ಕಾಗಿ ಕೈಚಾಚಿದವನಲ್ಲ. ಪ್ರಾಮಾಣಿಕತೆಯಿಂದ ಸರ್ಕಾರಿ ಸೇವೆ ಮಾಡಿದ್ದೇನೆ. ವಿಜಾಪುರ ಮತ್ತು ಬೆಳಗಾವಿಯಲ್ಲಿದ್ದಾಗ ಮೂಗರ್ಜಿಗಳನ್ನು ಆಧರಿಸಿ ಇಲ್ಲಸಲ್ಲದ ಆರೋಪ ಹೊರಿಸಿ ಸೇವೆಯಿಂದ ಅಮಾನತುಗೊಳಿಸಿ ಮೇಲಧಿಕಾರಿಗಳು ಕಿರುಕುಳ ನೀಡಿದರು. ಎಲ್ಲವನ್ನೂ ಸಹಿಸಿ ಬದುಕಿದೆ.

ಆದರೆ ನಿವೃತ್ತಿ ಬಳಿಕವೂ ಬೇತಾಳದಂತೆ ಕಾಡುತ್ತಿದ್ದಾರೆ. ನಾನೇ ಕೆಲಸ ಮಾಡುತ್ತಿದ್ದ ಕಾರ್ಮಿಕ ಇಲಾಖೆಯ ಭ್ರಷ್ಟ ಅಧಿಕಾರಿಗಳ ಪ್ರತೀಕಾರ ಮನೋಭಾವ ಪರಿಣಾಮ ನಿವೃತ್ತಿ ನಂತರದ ಸೌಲಭ್ಯದಿಂದ ವಂಚಿತನಾಗಿದ್ದೇನೆ. ಈ ಬಗ್ಗೆ ರಾಜ್ಯಪಾಲರು, ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ, ಮಾನವಹಕ್ಕುಗಳ ಆಯೋಗದ ಅಧ್ಯಕ್ಷರಿಗೆ ಫ್ಯಾಕ್ಸ್ ಮೂಲಕ ಗಮನ ಸೆಳೆದಿದ್ದೇನೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.