ADVERTISEMENT

ಪ್ರತ್ಯೇಕ ಅಪಘಾತ: ದಂಪತಿ ಸೇರಿ 6 ಸಾವು

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 19:30 IST
Last Updated 1 ಫೆಬ್ರುವರಿ 2012, 19:30 IST

ಹಾವೇರಿ/ಸಿಂದಗಿ: ಹಾವೇರಿ ಮತ್ತು ವಿಜಾಪುರ ಜಿಲ್ಲೆಗಳಲ್ಲಿ ಬುಧವಾರ ಸಂಭವಿಸಿದ ಮೂರು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ದಂಪತಿ ಸೇರಿ ಒಟ್ಟು ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ ಸಂಭವಿಸಿದ ಎರಡು ಅಪಘಾತಗಳಲ್ಲಿ ನಾಲ್ವರು ಮತ್ತು ಸಿಂದಗಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ದಂಪತಿ ಮೃತಪಟ್ಟಿದ್ದಾರೆ.

ಜಾತ್ರೆಗೆ ಹೊರಟವರಿದ್ದ ಟ್ರ್ಯಾಕ್ಟರ್‌ನ ಟ್ರೇಲರ್ ಬೇರ್ಪಟ್ಟು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಕ್ಯಾಲಕೊಂಡ ಗ್ರಾಮದ ಮಣಿಕಂಠ ಶಿವಪ್ಪ ಮೀಸೆ (13), ಉಮೇಶಗೌಡ ಮಂಜನಗೌಡ ರಾಯಗೌಡ್ರ (2) ಸ್ಥಳದಲ್ಲಿಯೇ ಮೃತಪಟ್ಟು, 20ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕು ಬೆಳವಲಕೊಪ್ಪ-ಕ್ಯಾಲಕೊಂಡ ಮಧ್ಯದ ರಸ್ತೆಯಲ್ಲಿ ನಡೆದಿದೆ.

ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲ್ಲೂಕಿನ ಚಿಕ್ಕೇರೂರ-ಯಲ್ಲಾಪುರ ರಸ್ತೆಯಲ್ಲಿ ಟ್ರ್ಯಾಕ್ಟರ್‌ವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಮುಳಕೊಪ್ಪ ಗ್ರಾಮದ ಕಾಂತೇಶ ಬಸವರಾಜ ಹರಿಜನ ಹಾಗೂ ರತ್ನವ್ವ ಬಸವರಾಜ ಹರಿಜನ ಸ್ಥಳದಲ್ಲಿಯೇ ಮೃತಪಟ್ಟು, ಒಬ್ಬ ತೀವ್ರವಾಗಿ ಗಾಯಗೊಂಡಿದ್ದಾನೆ. ಇನ್ನೊಬ್ಬರು ಗಾಯಗೊಂಡಿದ್ದಾರೆ.

ದಂಪತಿ ಸಾವು: ಸಿಂದಗಿ ತಾಲ್ಲೂಕಿನ ಸಾಸಾಬಾಳ ಗ್ರಾಮದ ಬಳಿ ಬೈಕ್ ಮತ್ತು ರಾಜ್ಯ ಸಾರಿಗೆ ಬಸ್ ಮಧ್ಯೆ ಡಿಕ್ಕಿ ಸಂಭವಿಸಿ ಬೈಕ್‌ನಲ್ಲಿದ್ದ ದಂಪತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮೃತರನ್ನು ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಯಾಳಗಿ ಗ್ರಾಮದ ಶರಣಪ್ಪ ಮಲ್ಲಪ್ಪ ಗುಗ್ಗರಿ (45) ಮತ್ತು ಶರಣಮ್ಮ (35) ಎಂದು ಗುರುತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.