ತುಮಕೂರು: ರಾಜ್ಯ ಸರ್ಕಾರ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಸೀಟುಗಳನ್ನು ಕಡಿತ ಮಾಡಿ ಖಾಸಗಿ ಕಾಲೇಜುಗಳಿಗೆ ನೀಡುವುದನ್ನು ವಿರೋಧಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಏಕರೂಪ ಸಿಇಟಿ ಜಾರಿಗೊಳಿಸಿ ಸರ್ಕಾರಿ ಕೋಟಾದಲ್ಲಿ ಶೇ. 85 ಮತ್ತು ಖಾಸಗಿ ಕೋಟಾ ಶೇ. 15 ನಿಗದಿ ಮಾಡಬೇಕು. ಹೊರ ರಾಜ್ಯದವರಿಗೆ ಸರ್ಕಾರಿ ಕೋಟಾದಲ್ಲಿ ಪ್ರವೇಶ ನೀಡಬಾರದು. ಪ್ರವೇಶ ನೀತಿಯನ್ನು ಸರ್ಕಾರವೇ ನಿರ್ಧರಿಸಬೇಕು ಎಂದು ಆಗ್ರಹಿಸಿದರು.
ಉನ್ನತ ಶಿಕ್ಷಣ ಶುಲ್ಕ ಏರಿಕೆಯನ್ನು ತಡೆಯಬೇಕು. ಖಾಸಗಿ ಕಾಲೇಜುಗಳ ಪ್ರವೇಶದಲ್ಲಿಯೂ ಸರ್ಕಾರಿ ಶುಲ್ಕವನ್ನು ಪಡೆಯಬೇಕು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕನಿಷ್ಠ ಒಂದು ಸರ್ಕಾರಿ ಎಂಜಿನಿಯರಿಂಗ್, ಮೆಡಿಕಲ್ ಮತ್ತು ಡೆಂಟಲ್ ಕಾಲೇಜು ತೆರೆಯಬೇಕು. ರಾಜ್ಯದ ಎಲ್ಲ ವಿ.ವಿ. ಮತ್ತು ಡೀಮ್ಡ್ ವಿ.ವಿ.ಗಳ ಉನ್ನತ ಶಿಕ್ಷಣ ಪ್ರವೇಶಕ್ಕೆ ಏಕರೂಪ ಸಿಇಟಿ ವ್ಯವಸ್ಥೆ ಜಾರಿ ಮಾಡಬೇಕು. ಸರ್ಕಾರಿ ಮತ್ತು ಅನುದಾನಿತ ವೈದ್ಯಕೀಯ ಕಾಲೇಜುಗಳನ್ನು ಎಂಸಿಐ ದರ್ಜೆಗೆ ಏರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಬಿವಿಪಿ ಮುಖಂಡರಾದ ಕುಮಾರಿ, ಆಶ್ವಿನಿ, ವಿದ್ಯಾ, ದಿವ್ಯಾ, ಕಾವ್ಯ, ಪ್ರವೀಣ್, ಶ್ರೀನಿವಾಸ ಮುಂತಾದವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.