ADVERTISEMENT

ಬಿಜೆಪಿ ಸರ್ಕಾರ ವಜಾಗೊಳಿಸಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2011, 19:30 IST
Last Updated 22 ಅಕ್ಟೋಬರ್ 2011, 19:30 IST

ಗುಲ್ಬರ್ಗ: ನೀಡಿದ ಭರವಸೆಯನ್ನು ಈಡೇರಿಸಲು ಶಕ್ತವಾಗದ ರಾಜ್ಯದ ಭ್ರಷ್ಟ ಬಿಜೆಪಿ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿ ಗುಲ್ಬರ್ಗ ದಕ್ಷಿಣ ಗ್ರಾಮೀಣ ಹಾಗೂ ದಕ್ಷಿಣ ನಗರ ಬ್ಲಾಕ್ ಕಾಂಗ್ರೆಸ್ ಮಿತಿ ಸದಸ್ಯರು ಶನಿವಾರ ಕಾಂಗ್ರೆಸ್ ಕಚೇರಿಯಿಂದ ತಹಸೀಲ್ದಾರ್ ಕಚೇರಿ ತನಕ ಪಾದಯಾತ್ರೆ ನಡೆಸಿದರು.

ಬಿಜೆಪಿ ಸರ್ಕಾರವು ಆಡಳಿತಕ್ಕೆ ಬಂದ ಬಳಿಕ ಜನ ಸಾಮಾನ್ಯರ ಯಾವುದೇ ಸಮಸ್ಯೆ ಪರಿಹರಿಸಿಲ್ಲ. ಪಡಿತರ ಚೀಟಿ, ಅಡುಗೆ ಅನಿಲ, ನಿರುದ್ಯೋಗ ಭತ್ಯೆ, ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಮತ್ತಿತರ ಆಶ್ವಾಸನೆಗಳನ್ನು ಗಾಳಿಗೆ ತೂರಿ ಬಿಟ್ಟರು. ಆಪರೇಷನ್ ಕಮಲ ಮೂಲಕ ಸ್ವೇಚ್ಛಾಚಾರ ನಡೆಸಿದರು. ರಾಜ್ಯ ರಾಜಕಾರಣಕ್ಕೆ ಕಪ್ಪು ಚುಕ್ಕಿ ಇಟ್ಟರು ಎಂದು ಪ್ರತಿಭಟನಾಕಾರರು ಆಪಾದಿಸಿದರು. 

ಬಿ.ಎಸ್.ಯಡಿಯೂರಪ್ಪ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ, ಹರತಾಳು, ಹಾಲಪ್ಪ, ಜನಾರ್ದನ ರೆಡ್ಡಿ ಮತ್ತಿತರರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ.

ಅಂದಿನ ಮುಖ್ಯಮಂತ್ರಿ ಆದಿಯಾಗಿ ಸಚಿವರು ಜೈಲು ದರ್ಶನ ಮಾಡಿದ್ದಾರೆ. ಅಂದು 8000ರಿಂದ 12000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಭರವಸೆ ನೀಡಿದ್ದರು. ಇದ್ದ ವಿದ್ಯುತ್ ಘಟಕಗಳನ್ನೇ ನಿರ್ವಹಿಸುತ್ತಿಲ್ಲ. ರಾಜ್ಯವನ್ನು ಕತ್ತಲಲ್ಲಿ ಮುಳುಗಿಸಿದ್ದಾರೆ.

84 ತಾಲ್ಲೂಕುಗಳನ್ನು ಬರ ಎಂದು ಘೋಷಿಸಿದರೂ, ಕಾಮಗಾರಿಗಳನ್ನು ಕೈಗೊಂಡಿಲ್ಲ ಎಂದು ಕಾಂಗ್ರೆಸ್ ಆರೋಪಿಸಿತು.ದಶರಥ ಬಾಬು ಒಂಟಿ, ನೀಲಕಂಠರಾವ ಮೂಲಗೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.