ADVERTISEMENT

ಬೆಸ್ಕಾಂ ಕಚೇರಿಗೆ ಜೆಡಿಎಸ್ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 19:30 IST
Last Updated 1 ಅಕ್ಟೋಬರ್ 2012, 19:30 IST

ತುಮಕೂರು: ವಿದ್ಯುತ್ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಜೆಡಿಎಸ್ ಕಾರ್ಯಕರ್ತರು ನಗರದ ಬೆಸ್ಕಾಂ ಕೇಂದ್ರ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿದದರು.

ಮನವಿ ಸಲ್ಲಿಸಲು ಕಚೇರಿ ಆವರಣದೊಳಗೆ ಮುಖಂಡರನ್ನು ಹೋಗದಂತೆ ಕಚೇರಿಗೆ ಗೇಟ್‌ಗೆ ಬೀಗ ಹಾಕಿ ತಡೆದಿದ್ದರಿಂದ ಅಧಿಕಾರಿಗಳು ಮತ್ತು ಪ್ರತಿಭಟನಾನಿರತರ ನಡುವೆ ಮಾತಿನ ಚಕಮಕಿ ನಡೆಯಿತು.

 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಆರ್.ಸುರೇಶ್ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದರೂ ಕಿವಿಗೊಡಲಿಲ್ಲ. ರಕ್ಷಣೆಯ ದೃಷ್ಟಿಯಿಂದ ಕಚೇರಿ ಆವರಣದೊಳಗೆ ಬಿಡಲು ಸಾಧ್ಯವಿಲ್ಲ ಎಂದು ಸುರೇಶ್ ಹೇಳಿದರು. ಇದರಿಂದ ಕೆರಳಿದ ಜೆಡಿಎಸ್ ಮುಖಂಡರು, ಕಾರ್ಯಕರ್ತರು ರಸ್ತೆಯಲ್ಲೇ ಕೂಳಿತು ಧರಣಿ ನಡೆಸಿದರು.

ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ರೈತರ ಸಮಸ್ಯೆಗಳನ್ನು ಆಲಿಸದಂತೆ ಅಧಿಕಾರಿಗಳ ಮೇಲೆ ಒತ್ತಡ ಹಾಕಲಾಗಿದೆ. ಅಧಿಕಾರಿಗಳು ಯಾರಿಗೂ ಹೆದರುವುದು ಬೇಡ. ರೈತರನ್ನು ಹೀನಾಯವಾಗಿ ನಡೆಸಿಕೊಳ್ಳುವುದು ಅಧಿಕಾರಿಗಳಿಗೆ ತರವಲ್ಲ ಎಂದು ಮಾಜಿ ಶಾಸಕ ಎಚ್.ನಿಂಗಪ್ಪ ಕಿಡಿಕಾರಿದರು.

ಪ್ರತಿಭಟನಾಕಾರರ ಧಿಕ್ಕಾರದ ನಡುವೆಯೇ ಸ್ಥಳಕ್ಕೆ ಬಂದ ಬೆಸ್ಕಾಂ ಜಿಲ್ಲಾ ಅಧೀಕ್ಷಕ ಚಂದ್ರಶೇಖರ್ ಮನವಿ ಸ್ವೀಕರಿಸಿದರು. ಇಷ್ಟು ದಿನ ಸಮಸ್ಯೆ ಇತ್ತು. ಆದರೆ ಇನ್ನೂ ಮುಂದೆ ಸಮಸ್ಯೆ ಇರುವುದಿಲ್ಲ. ಸಮರ್ಪಕ ವಿದ್ಯುತ್ ನೀಡಲಾಗುವುದು ಎಂದು ಭರವಸೆ ನೀಡಿದ ಬಳಿಕ ಧರಣಿ ವಾಪಸ್ ಪಡೆಯಲಾಯಿತು. 

 ಇದಕ್ಕೂ ಮುನ್ನ ಪ್ರತಿಭಟನಾಕಾರರು ನಗರದ ಟೌನ್‌ಹಾಲ್ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಪ್ರತಿಭಟನೆ ನೇತೃತ್ವವನ್ನು ಮುಖಂಡರಾದ ಬೆಳ್ಳಿಲೋಕೇಶ್, ಚಿಕ್ಕನರಸಯ್ಯ, ಗೂಳೂರು ನವೀನ್, ರಾಣಿಚಂದ್ರಶೇಖರ್, ಸರ್ವಮಂಗಳಾ, ಸರೋಜಾ, ಸುಮಾ, ವಿಜಯಕುಮಾರ್ ಸೇರಿದಂತೆ ಇನ್ನಿತರರ ಮುಖಂಡರು ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.