ADVERTISEMENT

ಬೇಲೂರಿನಲ್ಲಿ ಸರಣಿ ಕಳ್ಳತನ; ನಗದು ಲೂಟಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 19:30 IST
Last Updated 23 ಸೆಪ್ಟೆಂಬರ್ 2011, 19:30 IST

ಬೇಲೂರು: ತಾಲ್ಲೂಕಿನ ಸನ್ಯಾಸಿಹಳ್ಳಿ ಮತ್ತು ಪಟ್ಟಣದ ಚೆನ್ನಕೇಶವ ಸ್ವಾಮಿ ದೇವಾಲಯದ ಹಿಂಭಾಗ ಗುರುವಾರ ರಾತ್ರಿ ಸರಣಿ ಕಳ್ಳತನ ನಡೆದಿದ್ದು, ಕಳ್ಳರು ಸುಮಾರು ರೂ.25 ಸಾವಿರ ನಗದು ಹಾಗೂ ಇತರ ಪದಾರ್ಥ ಕಳವು ಮಾಡಿದ್ದಾರೆ.

ಪಟ್ಟಣಕ್ಕೆ 2 ಕಿ.ಮೀ. ದೂರದಲ್ಲಿರುವ ಸನ್ಯಾಸಿಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯ ರೋಲಿಂಗ್ ಶಟರ್‌ನ್ನು ಮೀಟಿ ಒಳ ನುಗ್ಗಿರುವ ಕಳ್ಳರು ಕಚೇರಿಯಲ್ಲಿನ ಗಾಡ್ರೇಜ್ ಅಲ್ಮೇರಾಗಳನ್ನು ಒಡೆದು ಅದರಲ್ಲಿನ ಕಾಗದ ಪತ್ರಗಳನ್ನು ಜಾಲಾಡಿದ್ದಾರೆ.

ಇದಾದ ಬಳಿಕ ಪಕ್ಕದಲ್ಲಿನ ಅಂಚೆ ಕಚೇರಿಯ ಬಾಗಿಲಿನ ಬೀಗವನ್ನು ಮುರಿದು ಅಲ್ಲಿಯೂ ದರೋಡೆ ಮಾಡಿದ್ದಾರೆ. ಇದರ ಪಕ್ಕದಲ್ಲಿರುವ ಸನ್ಯಾಸಿಹಳ್ಳಿ ಕೃಷಿ ಪತ್ತಿನ ಸಹಕಾರ ಬ್ಯಾಂಕಿನ ರೋಲಿಂಗ್ ಶಟರ್‌ನ್ನೂ ಹಾರೆಯಿಂದ ಮೀಟಿ ಒಳ ನುಗ್ಗಿ ದೋಚಿದ್ದಾರೆ.

ಇವುಗಳಲ್ಲದೆ ಬೇಲೂರು ಪಟ್ಟಣದ ಚೆನ್ನಕೇಶವಸ್ವಾಮಿ ದೇವಾಲಯದ ಹಿಂಭಾಗದಲ್ಲಿನ ಏಜಾಸ್ ಅವರ ಪೆಟ್ಟಿಗೆ ಅಂಗಡಿಯ ಬೀಗ ತೆರೆದು ಒಳ ನುಗ್ಗಿರುವ ಕಳ್ಳರು ಅಂಗಡಿಯಲ್ಲಿದ್ದ 8 ಸಾವಿರ ನಗದು ಮತ್ತು 13 ಸಾವಿರ ಬೆಲೆಯ ಸಿಗರೇಟ್ ಹಾಗೂ ಇತರ ಸರಕು ಕಳವು ಮಾಡಿದ್ದಾರೆ. ಸಿಪಿಐ ಮಂಜಯ್ಯ ಘಟನಾ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಶ್ವಾನ ದಳ ಆಗಮಿಸಿತ್ತು.

ಒಟ್ಟಾರೆ ಮೂರು ಕಡೆಗಳಲ್ಲಿ ಐದು ಸಾವಿರ ರೂಪಾಯಿ ನಗದನ್ನು ಅಪಹರಿಸಿದ್ಧಾರೆ. ಸನ್ಯಾಸಿಹಳ್ಳಿಯಲ್ಲಿನ ಶನಿದೇವರ ದೇವಸ್ಥಾನದಲ್ಲಿದ್ದ ಹುಂಡಿಯ ಬೀಗವನ್ನು ಈ ಹಿಂದೆ ಒಡೆದಿದ್ದ ಕಳ್ಳರು ಸಾವಿರಾರು ರೂ. ನಗದು ಕಳವು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT