ADVERTISEMENT

‘ಮಠಗಳು ಸಮಾಜಮುಖಿಯಾಗಬೇಕು’

​ಪ್ರಜಾವಾಣಿ ವಾರ್ತೆ
Published 30 ಮೇ 2018, 12:21 IST
Last Updated 30 ಮೇ 2018, 12:21 IST

ವಿರಾಜಪೇಟೆ: ‘ರಾಜಕಾರಣಿಗಳು ನಿರ್ದಿಷ್ಟ ಸಮುದಾಯಗಳನ್ನು ಸಂಶಯದ ದೃಷ್ಟಿಯಿಂದ ನೋಡುತ್ತಿರು ವುದು ವಿಷಾದನೀಯ’ ಎಂದು ಗಾವಡ ಗೆರೆಯ ಗುರುಲಿಂಗ ಜಂಗಮ ಮಠದ ನಟರಾಜ ಸ್ವಾಮೀಜಿಗಳು ಹೇಳಿದರು.

ಸಮೀಪದ ಅರಮೇರಿಯ ಕಳಂಚೇರಿ ಮಠದಲ್ಲಿ ಭಾನುವಾರ ನಡೆದ ಅಖಿಲ ಭಾರತ ವೀರಶೈವ ಮಹಾಸಭಾದ ತಾಲ್ಲೂಕು ಘಟಕದ ವಾರ್ಷಿಕ ಮಹಾಸಭೆಯ ಸಂದರ್ಭ ಆಯೋಜಿಸಿದ್ದ ಮಿಲನ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

‘ಸಮುದಾಯದ ಮಠಗಳು ಸಮಾಜಮುಖಿಯಾಗಬೇಕು. ಜನರ ಸರ್ವತೋಮುಖ ಕಲ್ಯಾಣ ಮಠದ ಮೂಲಕ ನಡೆಯಬೇಕು. ಸರ್ವರ ಆರೋಗ್ಯ, ಶಿಕ್ಷಣ, ಸಾಮಾಜಿಕ, ಕೌಟುಂಬಿಕ, ರಾಜಕೀಯ ಸಮಸ್ಯೆಗಳ ಪರಿಹಾರ ಮಠಗಳ ಮೂಲಕ ನೆರವೇರ ಬೇಕು. ಮಠಗಳು ಸಂಬಂಧಗಳನ್ನು ಹೆಣೆದು ಸಂತೋಷ ಮತ್ತು ಸಮೃದ್ಧಿ ಯನ್ನು ಬೆಳೆಸುವಂತಾಗಬೇಕು. ಇತ್ತೀಚಿನ ದಿನಗಳಲ್ಲಿ ಹದಗೆಡುತ್ತಿರುವ ಸಂಬಂಧಗಳನ್ನು ಬೆಸೆಯುವಲ್ಲಿ ಮಠ ಗಳು ಮಹತ್ತರ ಪಾತ್ರವನ್ನು ವಹಿಸಿವೆ. ಸಮಾಜದ ಹಿರಿಯರು ಮುಂದಿನ ಪೀಳಿಗೆಗೆ ಮಾದರಿಯಾದಲ್ಲಿ ಕಿರಿಯರಿಗೆ ಮಾರ್ಗದರ್ಶನದ ಅಭಾವವಿರುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಕಳಂಚೇರಿ ಮಠಾಧಿಪತಿಗಳಾದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಈ ಸಂದರ್ಭ ಮಾತನಾಡಿದರು. ಅಖಿಲ ಭಾರತ ವೀರಶೈವ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಕೆ.ಎನ್.ಸಂದೀಪ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಬಿ.ಧರ್ಮಪ್ಪನವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಮಹೇಶ್, ಉಪಾಧ್ಯಕ್ಷ ಎಸ್.ಎಸ್.ಸುರೇಶ್, ಮಹಾಸಭಾ ಪ್ರಧಾನ ಕಾರ್ಯದರ್ಶಿ ಜಿ.ಎಂ.ಕಾತರಾಜ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ವೀರಶೈವ ಸಮಾಜದ ಬಾಂಧವರಿಗಾಗಿ ಈ ಸಂದರ್ಭ ವಿವಿಧ ಆಟೋಟಗಳು ಹಾಗೂ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಸನ್ಮಾನ: ಮಿಲನ ಕಾರ್ಯಕ್ರಮಕ್ಕೂ ಮೊದಲು ನಡೆದ ಅಖಿಲಭಾರತ ವೀರಶೈವಸಭಾದ ವಾರ್ಷಿಕ ಮಹಾಸಭೆ ಯಲ್ಲಿ ವಿಶಿಷ್ಟ ಸಾಧನೆಗೈದವರನ್ನು ಸನ್ಮಾನಿಸಲಾಯಿತು.

ರಾಜ್ಯ ಪ್ರಶಸ್ತಿ ವಿಜೇತ ಛಾಯಾ ಗ್ರಾಹಕ ಎಸ್.ಎಸ್.ಶಿವಣ್ಣ, ಶ್ರೀಮಂಗಲ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎನ್.ಸಂದೀಪ್, ಅಮ್ಮತ್ತಿ ಗ್ರಾಮ ಪಂಚಾಯಿತಿ ಸದಸ್ಯ ವಿ.ಎನ್.ಸುರೇಶ್, ನಿವೃತ್ತ ಸೈನಿಕ ಎಸ್.ಜಿ.ಮರಿಸ್ವಾಮಿ, ಎಸ್.ಪಿ.ಮೋಹನ್ ಚಂದ್ರ, ಜೆ.ಎನ್.ಬಸವಣ್ಣ, ಶಿಕ್ಷಣ ಕ್ಷೇತ್ರದ ಸಾಧಕರಾದ ಡಿ.ಎನ್.ಉದ್ದಾನಪ್ಪ, ಎಂ.ಆರ್.ಪ್ರೇಮಕುಮಾರಿ, ಮೈಸೂರು ವಿಶ್ವವಿದ್ಯಾನಿಲಯದ ಚಿನ್ನದ ಪದಕ ವಿಜೇತೆ ಎಸ್.ಎಸ್.ಪಂಚಮ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.