ADVERTISEMENT

ಮತದಾರರ ನೋಂದಣಿ ದಿನಾಂಕ ವಿಸ್ತರಣೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2011, 19:30 IST
Last Updated 18 ಅಕ್ಟೋಬರ್ 2011, 19:30 IST

ಶಿವಮೊಗ್ಗ: ನೈರುತ್ಯ ಪದವೀಧರರ/ಶಿಕ್ಷಕರ ಕ್ಷೇತ್ರ ಚುನಾವಣೆ ಮತದಾರರ ನೋಂದಣಿ ದಿನಾಂಕವನ್ನು ವಿಸ್ತರಿಸಿ ಪದವೀಧರರಿಗೆ ಮತದಾನಕ್ಕೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿ ವಕೀಲರು ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ನೈರುತ್ಯ ಪದವೀಧರರ/ಶಿಕ್ಷಕರ ಮತದಾರರ ಪಟ್ಟಿ ಪರಿಷ್ಕರಣೆ ದಿನಾಂಕವನ್ನು ಈಗಾಗಲೇ ಘೋಷಿಸಿದ್ದು, ಮತದಾರರ ಪಟ್ಟಿ ನೋಂದಣಿಗೆ ನ. 4 ಕೊನೆ ದಿನವಾಗಿದೆ. ಆದರೆ, ಈಗಿರುವ ಕಡಿಮೆ ಅವಧಿಯಲ್ಲಿ ಸರಿಯಾದ ರೀತಿಯಲ್ಲಿ ಪದವೀಧರ ಮತದಾರರಿಗೆ ಮಾಹಿತಿ ನೀಡಲು ಹಾಗೂ ಪಟ್ಟಿ ನೋಂದಣಿ ಮಾಡಲು ಅಸಾಧ್ಯ ಎಂದು ಹೇಳಿದರು.

ಈ ಕ್ಷೇತ್ರಕ್ಕೆ ಐದು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಮಡಿಕೇರಿ, ದಕ್ಷಿಣಕನ್ನಡ ಜಿಲ್ಲೆ ಹಾಗೂ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ಚನ್ನಗಿರಿ ಸಹ ಸೇರಿದ್ದು, 50 ಲಕ್ಷಕ್ಕೂ ಹೆಚ್ಚು ಮತದಾರರು ಇದ್ದಾರೆ.

ಪ್ರಚಾರ ಕೊರತೆಯಿಂದಾಗಿ ಇಲ್ಲಿಯವರೆಗೆ ಕೇವಲ 26 ಸಾವಿರ ಮತದಾರರು ಮಾತ್ರ ನೋಂದಣಿ ಮಾಡಿಸಿದ್ದಾರೆ. ಪ್ರತಿ ಪಂಚಾಯ್ತಿ ಕೇಂದ್ರಗಳಲ್ಲಿ ಪದವೀಧರ ಕ್ಷೇತ್ರದ ಮತದಾರರ ನೋಂದಣಿ ಅತಿ ಅಗತ್ಯವಿದೆ. ಆದರೆ, ನೋಂದಣಿಗೆ ನಿಗದಿಪಡಿಸಿರುವ ದಿನಾಂಕದ ಒಳಗೆ ಎಲ್ಲಾ ಪದವೀಧರ ಮತದಾರರ ನೋಂದಣಿ ಮಾಡುವುದಾದರೂ ಹೇಗೆ ಎಂದು ಅವರು ಪ್ರಶ್ನಿಸಿದರು.

ಮತದಾನ ಮಾಡುವುದರಿಂದ ಯಾರೂ ಮತದಾನದಿಂದ ವಂಚಿತರಾಗಬಾರದು. ನೋಂದಣಿ ಪಟ್ಟಿ ದಿನಾಂಕ ವಿಸ್ತರಿಸಬೇಕು ಎಂದರು.

ವಕೀಲರಾದ ಬಿ.ಎನ್. ಅನಿಲ್‌ಕುಮಾರ್, ಕೆ.ಎಲ್. ಉಮೇಶ್, ಉಮಾಶಂಕರ್, ಎಸ್.ಎಲ್. ಹರ್ಷ ಮತ್ತು ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.