ADVERTISEMENT

ಮಧ್ಯಂತರ ಚುನಾವಣೆಗೆ ಸಿದ್ಧರಾಗಲು ಕರೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 7:30 IST
Last Updated 18 ಫೆಬ್ರುವರಿ 2011, 7:30 IST

ಸಾಗರ: ಹಗರಣಗಳ ಸರಮಾಲೆಯನ್ನೇ ತಮ್ಮ ಕೊರಳಿಗೆ ಹಾಕಿಕೊಂಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೆತ್ತಿಯ ಮೇಲೆ ಕ್ರಿಮಿನಲ್ ಕೇಸುಗಳ ಕತ್ತಿ ತೂಗಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಹೇಳಿದರು.ನಗರದಲ್ಲಿ ಗುರುವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದ ರಾಜಕಾರಣದಲ್ಲಿ ಈಗ ಯಾವ ಹೊತ್ತಿನಲ್ಲಿ ಏನು ಬೇಕಾದರೂ ನಡೆಯಬಹುದು. ಯಾವ ಕ್ಷಣದಲ್ಲಾದರೂ ಮಧ್ಯಂತರ ಚುನಾವಣೆಗೆ ಹೋಗಬೇಕಾದ ಸಂದರ್ಭ ಬಂದರೆ ಆಶ್ಚರ್ಯವಿಲ್ಲ. ಅದಕ್ಕಾಗಿ ಈಗಿನಿಂದಲೇ ಸಿದ್ಧರಾಗಿ ಎಂದು ಜೆಡಿಎಸ್ ಕಾರ್ಯಕರ್ತರಿಗೆ ಹೇಳಿದರು.

ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುತ್ತಿದ್ದು, ಫೆ. 19ರಂದು ಶಿಕಾರಿಪುರದಲ್ಲಿ ಜೆಡಿಎಸ್‌ನ ಬಹಿರಂಗ ಸಭೆ ನಡೆಯಲಿದೆ ಎಂದು ತಿಳಿಸಿದರು.ಜೆಡಿಎಸ್ ಪ್ರಮುಖರಾದ ಎಂ. ಶ್ರೀಕಾಂತ್, ಎಂ.ಬಿ. ಶಿವಣ್ಣ, ಸೋಮಶೇಖರಪ್ಪ, ಗಾಜನೂರು ಗಣೇಶ್, ಕೆ.ಎಸ್. ಪ್ರಭಾಕರ್, ಧರ್ಮಪ್ಪ, ಎಸ್.ಎಲ್. ಮಂಜುನಾಥ್, ರಾಜೇಂದ್ರ, ಚಿನ್ನಪ್ಪ, ಲೋಕೇಶ್ ಗಾಳಿಪುರ, ದಳವಾಯಿ ದಾನಪ್ಪ, ಪ್ರೇಮ್‌ಸಾಗರ್, ಶಿವಾನಂದ ಕುಗ್ವೆ, ಅಜ್ಜಪ್ಪ, ದಾನಶೇಖರಪ್ಪ ಗೌಡ ಹಾಜರಿದ್ದರು.

ಕಾರ್ಯಕರ್ತರ ಸಭೆ
ಹೊಳೆಹೊನ್ನೂರು: ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗೆ ಇಳಿಸಲಾಗುವುದು ಎಂದು ಜೆಡಿಎಸ್ ಮುಖಂಡ ಎಸ್. ಬಂಗಾರಪ್ಪ  ಘೋಷಿಸಿದರು. ಪಟ್ಟಣದ ಭಗೀರಥ ಸಮುದಾಯ ಭವನದಲ್ಲಿ ಬುಧವಾರ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಸಮಿತಿ ಹಮ್ಮಿಕೊಂಡಿದ್ದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಜೆಡಿಎಸ್ ಜಿಲ್ಲಾ ಘಟಕ ಅಧ್ಯಕ್ಷ ಎಂ. ಶ್ರೀಕಾಂತ್, ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಸೋಮಶೇಖರ್, ಜಿ.ಪಂ. ಮಾಜಿ ಅಧ್ಯಕ್ಷೆ ಶಾರದಾ ಪೂರ್ಯನಾಯ್ಕ ಮಾತನಾಡಿದರು. ನಿವೃತ್ತ ನ್ಯಾಯಾಧೀಶ ವೀರಭದ್ರಪ್ಪ, ಕ್ಷೇತ್ರದ ಕಾರ್ಯದರ್ಶಿ ಉದಯ್‌ಕುಮಾರ್, ಕಾರ್ಯಾಧ್ಯಕ್ಷ ಮುದುವಾಲ್ ನಾಗರಾಜ್ ಹಾಜರಿದ್ದರು.
 ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಅಧ್ಯಕ್ಷ ಅರಕೆರೆ ಜಯಣ್ಣ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ.ಸದಸ್ಯ ಎಚ್.ಎಸ್. ಕುಮಾರ್‌ಸ್ವಾಗತಿಸಿದರು. ಮಾರಶೆಟ್ಟಿಹಳ್ಳಿ ಗ್ರಾ.ಪಂ. ಸದಸ್ಯಎನ್. ದೇವೇಂದ್ರರಾವ್ ಕಾರ್ಯಕ್ರಮ ನಿರೂಪಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.