ADVERTISEMENT

ಮಧ್ಯಸ್ಥಿಕೆಯಿಂದ ವ್ಯಾಜ್ಯ ಇತ್ಯರ್ಥಕ್ಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 18:45 IST
Last Updated 5 ಫೆಬ್ರುವರಿ 2011, 18:45 IST

ಚಳ್ಳಕೆರೆ: ಕಕ್ಷಿದಾರರ ವ್ಯಾಜ್ಯಗಳನ್ನು ಮಧ್ಯಸ್ಥಿಕೆ ಮೂಲಕ ಬಗೆಹರಿಸುವಲ್ಲಿ ವಕೀಲರ ಪಾತ್ರ ಮಹತ್ವವಾದುದು ಎಂದು ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಜವ್ವಾದ್ ರಹೀಮ್ ಶನಿವಾರ ಇಲ್ಲಿ ಅಭಿಪ್ರಾಯಪಟ್ಟರು.

ಪಟ್ಟಣದ ಸೋಮಗುದ್ದು ರಸ್ತೆಯಲ್ಲಿ ಜಿಲ್ಲಾ ನ್ಯಾಯಾಂಗ ಇಲಾಖೆ, ಲೋಕೋಪಯೋಗಿ ಇಲಾಖೆ ಮತ್ತು ವಕೀಲರ ಸಂಘ ಸಹಭಾಗಿತ್ವದಲ್ಲಿ ನಿರ್ಮಿಸಲಾಗಿರುವ ನ್ಯಾಯಾಲಯ ಕಟ್ಟಡ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಮನುಷ್ಯ ಜೀವನದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ವ್ಯಾಜ್ಯಗಳಾಗಿ ರೂಪುಗೊಳ್ಳುತ್ತವೆ. ಇಂತಹ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲು ಹತ್ತಿದಾಗ ಸೋಲು-ಗೆಲುವು ಸಹಜವಾದುದು. ವ್ಯಾಜ್ಯಗಳನ್ನು ಬಗೆಹರಿಸಲು ಕಾನೂನು ಇಲಾಖೆ ಜನತೆಯ ಹತ್ತಿರಕ್ಕೆ ಹೋಗುತ್ತಿದೆ. ಲೋಕ ಅದಾಲತ್, ಸಂಚಾರಿ ನ್ಯಾಯಾಲಯ, ಮಧ್ಯಸ್ಥಿಕೆ ಸಮಿತಿಗಳನ್ನು ರಚಿಸಿ ವ್ಯಾಜ್ಯಗಳನ್ನು ಇತ್ಯರ್ಥಗೊಳಿಸಲು ಶ್ರಮಿಸುತ್ತಿದೆ ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ಪಂಚಾಯ್ತಿಗಳ ಮೂಲಕ ವ್ಯಾಜ್ಯಗಳನ್ನು ಬಗೆಹರಿಸಲಾಗುತ್ತಿತ್ತು. ಆದರೆ, ಪ್ರಸ್ತುತ ನ್ಯಾಯಾಲಯಕ್ಕೆ ನ್ಯಾಯ ಕೋರಿ ಬರುವ ಕಕ್ಷಿದಾರರ ಮನವೊಲಿಸಿ ರಾಜಿ ಸಂಧಾನ ಮಾಡಿಸುವ ಪ್ರಕ್ರಿಯೆಯಲ್ಲಿ ವಕೀಲರು ಬೆನ್ನೆಲುಬಾಗಿ ಕೆಲಸ ಮಾಡಬೇಕಿದೆ ಎಂದರು.

ಸುಸಜ್ಜಿತ ಕಟ್ಟಡ ನಿರ್ಮಾಣ ಆಗಿರುವ ಪಟ್ಟಣದಲ್ಲಿ ನ್ಯಾಯಾಧೀಶರ ವಸತಿಗೃಹ, ವಕೀಲರ ಸಂಘಕ್ಕೆ ಕಟ್ಟಡ ಮತ್ತು ಕಾಂಪೌಂಡ್ ನಿರ್ಮಿಸಿ ಕೊಡಬೇಕೆಂದು ಶಾಸಕ ಹಾಗೂ ಸಂಸದರಿಗೆ ಮನವಿ ಮಾಡಿದರು. ಶಾಸಕ ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.ನ್ಯಾಯಮೂರ್ತಿಗಳಾದ ಎಚ್.ಬಿಲ್ಲಪ್ಪ, ಎಲ್.ನಾರಾಯಣಸ್ವಾಮಿ, ಡಾ.ಎಂ.ಎ.ಶಶಿಕಲಾ, ಮೊಳಕಾಲ್ಮುರು ಶಾಸಕ ಎನ್.ವೈ. ಗೋಪಾಲಕೃಷ್ಣ, ವಕೀಲರ ಸಂಘದ ಸದಸ್ಯ ಕಾಂತರಾಜ್ ಉಪಸ್ಥಿತರಿದ್ದರು. ವಕೀಲರ ಸಂಘ ಅಧ್ಯಕ್ಷ ಜಿ.ಆರ್. ಅಶ್ವತ್ಥ್ ನಾಯಕ ಸ್ವಾಗತಿಸಿದರು. ವಿಶ್ವನಾಥ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.