ADVERTISEMENT

ಮನುಷ್ಯನ ಕ್ರೌರ್ಯಗಳಿಂದ ಪರಿಸರ ನಾಶ

​ಪ್ರಜಾವಾಣಿ ವಾರ್ತೆ
Published 13 ಜೂನ್ 2011, 19:30 IST
Last Updated 13 ಜೂನ್ 2011, 19:30 IST

ರಾಮನಗರ: ಮನುಷ್ಯನ ಮನಸ್ಸಿನಲ್ಲಿರುವ ದುರಾಸೆ, ಸ್ವಾರ್ಥ, ಕ್ರೌರ್ಯಗಳು ಪರಿಸರವನ್ನು ವಿರೂಪಗೊಳಿಸುತ್ತಿವೆ. ಭೂಮಿಯ ಒಡಲು ಬರಿದಾಗುವ ಮುನ್ನ ಎಚ್ಚರವಹಿಸಬೇಕು ಎಂಬ ಆಶಯವನ್ನು `ವಸುಂಧರೆ~ ಕಾದಂಬರಿ ವ್ಯಕ್ತಪಡಿಸುತ್ತದೆ ಎಂದು ವಿಮರ್ಶಕ ಡಾ.ಕೆ.ವೈ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

ರಾಮನಗರದ ಕೂಟಗಲ್ ಗ್ರಾಮದ ತಿಮ್ಮಪ್ಪಸ್ವಾಮಿ ಬೆಟ್ಟದಲ್ಲಿ ಸ್ನೇಹಪಲ್ಲವಿ ಗೆಳೆಯರ ಬಳಗ, ಕರ್ನಾಟಕ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ `ಪರಿಸರ ಹಬ್ಬ~ ಮತ್ತು ವಸುಂಧರೆ ಕಾದಂಬರಿ ಬಿಡುಗಡೆ ಸಮಾರಂಭದಲ್ಲಿ ಪರಿಸರ ನೆಲೆಗಳ ಅನುಸಂಧಾನ ವಿಷಯವಾಗಿ ಅವರು ಮಾತನಾಡಿದರು.

ಕಲ್ಲು ಗಣಿಗಾರಿಕೆಯಿಂದ ಹೊರತೆಗೆಯುತ್ತಿರುವ  ಗ್ರಾನೈಟ್ ಕಲ್ಲು ಪಾಶ್ಚಿಮಾತ್ಯ ದೇಶಗಳ ಐಶಾರಾಮಿ ಹೊಟೇಲ್‌ಗಳಲ್ಲಿ, ವಿಲಾಸಿ ಬಂಗಲೆಗಳಲ್ಲಿ ಪೀಠೋಪಕರಣಗಳಾಗುತ್ತಿವೆ. ನಮ್ಮ ಸ್ಥಳೀಯ ಸಂಪನ್ಮೂಲಗಳು ಬರಿದಾಗುತ್ತಿರುವಾಗ ಜನ ನೋಡಿಯೂ ನೋಡದವರಂತೆ ಕಲ್ಲಾಗುತ್ತಿರುವುದನ್ನು ವಿರೋಧಿಸುವ ಕಥಾನಕ ಈ ಕಾದಂಬರಿಯಾಗಿದೆ ಎಂದರು.

ಭೂಮಾಫಿಯಾ, ಗಣಿ ಮಾಫಿಯಾಗಳು ನಮ್ಮ ಸಾಂಸ್ಕೃತಿಕ ಬದುಕನ್ನು ಘಾಸಿಗೊಳಿಸುತ್ತಿವೆ. ಗ್ರಾಮೀಣ ಜನರ ಬದುಕು ಇಂದು ಸಂಕಷ್ಟಗಳ ಸುಳಿಗೆ ಸಿಲುಕಿದೆ. ವಿನಾಶಗೊಳ್ಳುತ್ತಿರುವ ಪರಿಸರ ಮತ್ತು ಮಾನವರ ಬದುಕನ್ನು ಮತ್ತೆ ಸರಿದಾರಿಗೆ ತರುವ ಮಾರ್ಗದರ್ಶನವನ್ನು ಈ ಕಾದಂಬರಿ ಸ್ಪಷ್ಟವಾಗಿ ತಿಳಿಸಿದೆ ಎಂದರು.

ವಸುಂಧರೆ ಕಾದಂಬರಿಯ ಸಾಹಿತ್ಯಕ, ಸಾಂಸ್ಕೃತಿಕ ಅನುಸಂಧಾನ ವಿಷಯವಾಗಿ ಪ್ರಾಧ್ಯಾಪಕ ಡಾ.ಬೋರೇಗೌಡ ಚಿಕ್ಕಮರಳಿ ಮಾತನಾಡಿ, ಭೂಮಿಯಲ್ಲಿರುವ ಪ್ರಾಕೃತಿಕ ಸಂಪತ್ತನ್ನೆಲ್ಲ ನಾಶ ಮಾಡಿ ಅಂತಿಮವಾಗಿ ಮಾನವನು ವಿನಾಶವಾಗುತ್ತಿದ್ದಾನೆ ಎನ್ನುವುದನ್ನು ಮನವರಿಕೆ ಮಾಡಿಕೊಡುವುದರ ಜೊತೆಗೆ ಪರಿಸರ ಉಳಿಸುವ ಭರವಸೆಯನ್ನು ಈ ಕಾದಂಬರಿ ಕಟ್ಟಿಕೊಡುತ್ತದೆ ಎಂದರು.

ಕೃತಿ ಲೋಕಾರ್ಪಣೆಸಮಾರಂಭದಲ್ಲಿ ಜಾನಪದ ತಜ್ಞ ಡಾ.ರಾಗೌ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಸಕರುಗಳಾದ ಕೆ.ರಾಜು, ಎಚ್.ಸಿ.ಬಾಲಕೃಷ್ಣ, ಜೆಡಿಎಸ್ ಮುಖಂಡ ಕೆ.ದೇವೇಗೌಡ, ಕಾದಂಬರಿಕಾರ ಶಿವರಾಮ ಕಾಡನಕುಪ್ಪೆ, ವಕೀಲ ಎಲ್.ಚಿಕ್ಕಪ್ಪಾಜಿ, ನಿವೃತ್ತ ಪ್ರಾಧ್ಯಾಪಕ ಮು.ಶಿವನಂಜಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಮುನಿರಾಜು, ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಗುರುಪ್ರಸಾದ್ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.