ADVERTISEMENT

ಮರಳು ದಂಧೆಯ ದೂರು ಬಂದಿಲ್ಲ: ಚಂದ್ರಶೇಖರಯ್ಯ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2012, 19:30 IST
Last Updated 17 ಮಾರ್ಚ್ 2012, 19:30 IST

ನಾಗಮಂಗಲ: ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ಮತ್ತು ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಕುರಿತು ಸಾರ್ವಜನಿಕರಿಂದ ಯಾವುದೇ ದೂರು ಬಂದಿಲ್ಲ ಎಂದು ಉಪಲೋಕಾಯುಕ್ತ ಚಂದ್ರಶೇಖರಯ್ಯ ಶನಿವಾರ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲು ಆಲಿಸಿ ಅವರು ಮಾತನಾಡಿದರು.
`ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಮತ್ತು ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ನಾಗರಿಕರಿಂದ ದೂರು ಬಂದ ನಂತರ ತನಿಖೆ ನಡೆಸಲಾಗುತ್ತದೆ~ ಎಂದರು. ಬಳಿಕ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, `ಜನಸಾಮಾನ್ಯರ ಸಮಸ್ಯೆ ಮೊದಲು ತಾಳ್ಮೆಯಿಂದ ಆಲಿಸಿ. ನಂತರ ಅದಕ್ಕೆ ಸರ್ಕಾರದ ಸಹಾಯ ಒದಗಿಸಿ. ಸಾರ್ವಜನಿಕ ಕೆಲಸ ಕಾರ್ಯಗಳಿಗೆ ವಿಳಂಬ ಮಾಡಬೇಡಿ. ಯಾವುದೇ ಅಧಿಕಾರಿಯ ವಿರುದ್ಧ ದೂರು ಬಂದರೆ  ಕ್ರಮ ಜರುಗಿಸಲಾಗುವುದು~ ಎಂದು ಎಚ್ಚರಿಸಿದರು.

ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ  ಜನಸಂದಣಿಯ ನಡುವೆ ಆಸ್ಪತ್ರೆ ಇರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದರು. ಕೊಳೆಯಾದ ಬೆಡ್ ಶೀಟ್‌ಗಳು, ಸ್ವಚ್ಛಗೊಳಿಸದ ಶೌಚಾಲಯದ ವ್ಯವಸ್ಥೆ ವಿರುದ್ಧ ಸಿಟ್ಟಾದರು. ರೋಗಿಗಳಿಗೆ ಬೇಕಾದ ಔಷಧಿಗೆ ಮೆಡಿಕಲ್ ಸ್ಟೋರ್ ಬಾಗಿಲು ತಟ್ಟಬೇಕು ಎಂದು ರೋಗಿಯೊಬ್ಬರು ದೂರು ನೀಡಿದ್ದರಿಂದ  ವೈದ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. 

 ಕಾವೇರಿ ವಿವಾದದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ಕಾವೇರಿ ವಿವಾದವನ್ನು ಕರ್ನಾಟಕದವರೇ ಆದ ಅಡ್ವೋಕೇಟ್ ಜನರಲ್ ಶಿವಪ್ಪ ಅವರೇ ಬಗೆ ಹರಿಸಬಹುದಿತ್ತು. ಅವರ ದುರಾಸೆಯಿಂದ ಕಾವೇರಿ ನ್ಯಾಯಮಂಡಳಿ ರಚನೆಯಾಯಿತು. ಅಂದು ತಮಿಳುನಾಡು ಕೇಳಿದ 5 ಟಿಎಂಸಿ ನೀರಿನ ಬದಲಾಗಿ 2 ಟಿಎಂಸಿ ನೀರು ಕೊಟ್ಟಿದ್ದರೆ ತಮಿಳುನಾಡು ಸುಮ್ಮನಾಗುತ್ತಿತ್ತು. ಅಂದಿನ ತಪ್ಪಿನಿಂದ ಕಾವೇರಿ ವಿವಾದ ಬೂದಿ ಮುಚ್ಚಿದ ಕೆಂಡದಂತಿದೆ ಎಂದರು.

ರಾಮನಗರ ಲೋಕಾಯುಕ್ತ ಎಸ್ಪಿ ಶ್ರೀರಾಮರೆಡ್ಡಿ, ಡಿವೈಎಸ್ಪಿ ಗಿರಿಜೇಶ್, ಇನ್ಸ್‌ಪೆಕ್ಟರ್‌ಗಳಾದ ಸಂತೋಷ್, ರಾಜು, ತಹಶೀಲ್ದಾರ್ ಬಿ.ಎ.ಜಗದೀಶ್, ಸರ್ಕಲ್ ಇನ್ಸಪೆಕ್ಟರ್ ಟಿ.ಡಿ.ರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.